ವಿಜಯಪುರ: ಜಿಲ್ಲೆಯಲ್ಲಿರುವ ಮುಲ್ಲಾ, ಜಹಗೀರದಾರ, ಇನಾಂದಾರ, ಮುಜಾವರ ಸಮಾಜಕ್ಕೆ ಸೇರಿದ ಸಾವಿರಕ್ಕೂ ಅಧಿಕ ಜನರ ಆಸ್ತಿಯಲ್ಲಿ ಅನಧಿಕೃತವಾಗಿ ವಕ್ಫ್ ಹೆಸರು ಸೇರಿಸಿರುವುದನ್ನು ಜಿಲ್ಲಾಧಿಕಾರಿಯವರು ತಕ್ಷಣ ತೆಗೆಯಬೇಕು ಎಂದು ಕರ್ನಾಟಕ ಮುಲ್ಲಾ ಅಸೋಸಿಯೇಶನ್ ಅಧ್ಯಕ್ಷ ಎಂ.ಸಿ.ಮುಲ್ಲಾ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿ ತಾಲ್ಲೂಕಿನ 42 ಆಸ್ತಿಗಳ ಉತಾರದಲ್ಲಿ ತಹಶೀಲ್ದಾರ್ ಅವರು ಸಂಬಂಧಿಸಿದ ರೈತರಿಗೆ ನೋಟಿಸ್ ನೀಡದೇ ‘ವಕ್ಫ್’ ಎಂಬ ಹೆಸರನ್ನು ಸೇರಿಸಿರುವುದಕ್ಕೆ ತೀವ್ರ ವಿರೋಧವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ತರಾತುರಿಯಲ್ಲಿ ತೆಗೆದು ಹಾಕಿರುವಂತೆ ಮುಸ್ಲಿಂ ರೈತರ ಆಸ್ತಿಯ ಉತಾರದಲ್ಲಿ ಇರುವ ವಕ್ಫ್ ಹೆಸರು ತೆಗೆಯಬೇಕು ಎಂದು ಒತ್ತಾಯಿಸಿದರು.
ಹಿಂದು, ಮುಸ್ಲಿಂ ರಾಜ, ಮಹಾರಾಜರ ಆಳ್ವಿಕೆಯಲ್ಲಿ ಮುಲ್ಲಾ, ಕುಲಕರ್ಣಿ, ಪೂಜಾರಿ, ಅರ್ಚಕರು, ಜಹಗೀರದಾರ, ಇನಾಂದಾರ, ಮುಜಾವರ ಅವರಿಗೆ ದೇವಸ್ಥಾನ, ಮಸೀದಿ, ಮಂದಿರಗಳ ನಿರ್ವಹಣೆಗಾಗಿ ಇನಾಂ ನೀಡಿರುವ ಭೂಮಿಯ ಉತಾರಗಳಲ್ಲೂ ವಕ್ಫ್ ಹೆಸರನ್ನು ನೋಟಿಸ್ ನೀಡದೇ ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಹಳಷ್ಟು ಹಿಂದು, ಮುಸ್ಲಿಂ ಸಮಾಜದವರಿಗೆ ನೋಟಿಸ್ ನೀಡದೇ ಅವರ ಜಮೀನಿನ ಉತಾರೆಯಲ್ಲಿ ವಕ್ಫ್ ಎಂದು ಸೇರಿಸಿರುವುದನ್ನೂ ಜಿಲ್ಲಾಧಿಕಾರಿಗಳು ತಕ್ಷಣ ತೆಗೆಯಬೇಕು ಎಂದು ಮನವಿ ಮಾಡಿದರು.
ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಟಾಸ್ಕ್ ಫೋರ್ಸ್ ರಚಿಸಿ, ಎಲ್ಲ ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸಿ ಈಗ ತಲೆದೋರಿರುವ ಗೊಂದಲ, ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿದ್ದರೂ ಕೂಡ ಜಿಲ್ಲಾಧಿಕಾರಿಗಳು ಇಂಡಿ ತಾಲ್ಲೂಕಿನ 42 ಪ್ರಕರಣಗಳಿಗೆ ಸಂಬಂಧಿಸಿದಂತೆ ಏಕಾಏಕಿ ಕ್ರಮಕೈಗೊಂಡಿರುವುದು ಯಾವ ಆಧಾರದ ಮೇಲೆ ಎಂಬುದಕ್ಕೆ ಸೂಕ್ತ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಉದಾಹರಣೆಗೆ ಜಂಬಗಿ, ಹಡಗಲಿ, ನಾಗಠಾಣ ಗ್ರಾಮದಲ್ಲಿ ಅನೇಕರ ಆಸ್ತಿಯ ಉತಾರದಲ್ಲಿ ನಮೂದಾಗಿರುವ ‘ವಕ್ಪ್’ ಹೆಸರನ್ನು ತೆಗೆಯುವಂತೆ ಈ ಹಿಂದೆಯೇ ಕೋರ್ಟ್ ಆದೇಶ ನೀಡಿದ್ದರೂ ಸಹ ಇದುವರೆಗೆ ವಕ್ಫ್ ಹೆಸರನ್ನು ತೆಗೆದಿಲ್ಲ ಏಕೆ? ಎಂಬುದುಕ್ಕೆ ಸ್ಪಷ್ಟಿಕರಣ ನೀಡಬೇಕು. ಒಬ್ಬರಿಗೆ ಒಂದು ಕಾನೂನು, ಇನ್ನೊಬ್ಬರಿಗೆ ಮತ್ತೊಂದು ಕಾನೂನು ಏಕೆ? ಎಲ್ಲರಿಗೂ ಟಾಸ್ಕ್ ಫೋರ್ಸ್ ಅನ್ವಯಿಸುವುದಿಲ್ಲವೇ? ಎಂದು ಪ್ರಶ್ನಿಸಿದರು.
ರೈತರ ಉತಾರೆಯಲ್ಲಿ ಯಾವ ಆಧಾರದ ಮೇಲೆ ವಕ್ಫ್ ಹೆಸರು ಸೇರ್ಪಡೆ ಮಾಡಲಾಯಿತು? ಯಾವ ಆಧಾರದ ಮೇಲೆ ವಕ್ಫ್ ಹೆಸರನ್ನು ಇದೀಗ ಕೈಬಿಡಲಾಗಿದೆ? ಎಂಬುದನ್ನು ಜಿಲ್ಲಾಧಿಕಾರಿ ಸ್ಪಷ್ಟಪಡಿಸಬೇಕು. ಇಂಡಿ ತಾಲ್ಲೂಕಿನ 42 ಪ್ರಕರಣಗಳನ್ನು ಜಿಲ್ಲಾಧಿಕಾರಿ ಅವರು ಏಕಾಏಕಿ ಬಿಟ್ಟಿರುವಂತೆ ಎಲ್ಲವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ವಕ್ಪ್ ಆಸ್ತಿ ವಿವಾದದಲ್ಲಿ ಬಿಜೆಪಿ ಮುಖಂಡರು ರಾಜಕೀಯ ಲಾಭ ಪಡೆಯಲು, ಸಮಾಜದಲ್ಲಿ ಕೋಮುದ್ವೇಷ ಹರಡಲು ಹಿಂದು–ಮುಸ್ಲಿಂ ಎಂಬ ಟ್ರಂಪ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಆದರೆ, ನೈಜವಾಗಿ ವಕ್ಫ್ ಆಸ್ತಿ ವಿವಾದದಲ್ಲಿ ಕೇವಲ ಹಿಂದು ಧರ್ಮದವರು ಮಾತ್ರವಿಲ್ಲ. ಹಿಂದು, ಮುಸ್ಲಿಂ ಸೇರಿದಂತೆ ಎಲ್ಲ ಧರ್ಮ, ಜಾತಿಯವರ ಆಸ್ತಿಗಳಲ್ಲೂ ವಕ್ಫ್ ಎಂದು ಸೇರಿಸಲಾಗಿದೆ. ಜನ ಮರಳೋ, ಜಾತ್ರೆ ಮರಳೋ ಎಂಬಂತೆ ಬಿಜೆಪಿಯವರು ಹಿಂದುಗಳ ಆಸ್ತಿಯನ್ನು ಕಬಳಿಸಲಾಗುತ್ತಿದೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ಬಿಜೆಪಿಯವರಿಗೆ ನೈತಿಕತೆ ಇಲ್ಲ ಎಂದು ಟೀಕಿಸಿದರು.
ಕರ್ನಾಟಕ ಮುಲ್ಲಾ ಅಸೋಸಿಯೇಶನ್ ಪ್ರಮುಖರಾದ ಶಹಜಾನ್ ಮುಲ್ಲಾ, ಎಸ್.ಸಿ.ಮುಲ್ಲಾ, ಡಾ.ಅಬುಬಕ್ಕರ್ ಮುಲ್ಲಾ, ಬಂದೇನವಾಜ್ ಮುಲ್ಲಾ, ರಿಜ್ವಾನ್ ಮುಲ್ಲಾ, ಇಮಾಮ್ ಮುಲ್ಲಾ, ಆಸೀಫ್ ಮುಲ್ಲಾ, ಅಬ್ದುಲ್ ಹಮೀದ್ ಮುಲ್ಲಾ ಇಂಡಿ, ಎಂ.ಸಿ.ಮುಲ್ಲಾ ನಾದ್, ಫಾರುಖ್ ಮುಲ್ಲಾ, ರಂಜಾನ್ ಮುಲ್ಲಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ವಕ್ಫ್ ವಿವಾದವನ್ನು ಬಯಲಿಗೆ ಎಳೆಯುವ ಮೂಲಕ ಹಿಂದು, ಮುಸ್ಲಿಂ ನಡುವೆ ಬೆಂಕಿ ಹಚ್ಚಲು ಶಾಸಕ ಯತ್ನಾಳ ಪ್ರಯತ್ನಿಸಿದ್ದರು. ಆದರೆ, ಇದರಿಂದ ಹಿಂದುಗಳಿಗಿಂತ ಮುಸ್ಲಿಮರಿಗೆ ಹೆಚ್ಚು ಅನುಕೂಲವಾಗಿದೆ. ಯತ್ನಾಳಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆಎಂ.ಸಿ.ಮುಲ್ಲಾ, ಅಧ್ಯಕ್ಷ, ಕರ್ನಾಟಕ ಮುಲ್ಲಾ ಅಸೋಶಿಯೇಶನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.