ADVERTISEMENT

ಕಿತ್ತೂರು ಚೆನ್ನಮ್ಮ ದೇಶಾಭಿಮಾನದ ಪ್ರತೀಕ: ರಾಮಲಿಂಗಯ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 16:13 IST
Last Updated 23 ಅಕ್ಟೋಬರ್ 2024, 16:13 IST
ತಾಳಿಕೋಟೆ ಪಟ್ಟಣದ ರಾಜವಾಡೆಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಪುತ್ಥಳಿ ನಿರ್ಮಾಣ ಸೇವಾ ಸಮಿತಿ ವತಿಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮಳ 246 ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಬುಧವಾರ  ಆಯೋಜಿಸಲಾಗಿತ್ತು
ತಾಳಿಕೋಟೆ ಪಟ್ಟಣದ ರಾಜವಾಡೆಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಪುತ್ಥಳಿ ನಿರ್ಮಾಣ ಸೇವಾ ಸಮಿತಿ ವತಿಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮಳ 246 ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಬುಧವಾರ  ಆಯೋಜಿಸಲಾಗಿತ್ತು   

ತಾಳಿಕೋಟೆ: ‘ವೀರರಾಣಿ ಕಿತ್ತೂರು ಚನ್ನಮ್ಮ ಸ್ವಾಭಿಮಾನ ಹಾಗೂ ದೇಶಾಭಿಮಾನದ ಪ್ರತೀಕವಾಗಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ. ಈಕೆಯ ದಿಟ್ಟತನ, ಧೈರ್ಯವನ್ನು ಮೈಗೂಡಿಸಿಕೊಳ್ಳುವ ಅಗತ್ಯ ಇದೆ’ ಎಂದು ಚಬನೂರಿನ ಹಿರೇಮಠದ ರಾಮಲಿಂಗಯ್ಯ ಸ್ವಾಮೀಜಿ ಹೇಳಿದರು.

ಬುಧವಾರ ಪಟ್ಟಣದ ರಾಜವಾಡೆಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ ಪುತ್ಥಳಿ ನಿರ್ಮಾಣ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡ ವೀರರಾಣಿ ಕಿತ್ತೂರು ಚನ್ನಮ್ಮಳ ಜಯಂತ್ಯುತ್ಸವದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಬದುಕಿನಲ್ಲಿ ತ್ಯಾಗದ ಗುಣ ಪಡೆದವರು ಶ್ರೇಷ್ಠ ಕಾರ್ಯ ಮಾಡುತ್ತಾರೆ. ಎಷ್ಟು ದಿನ ಬದುಕಿದ್ದೇವೆ ಎಂಬುದು ಮುಖ್ಯವಲ್ಲ ಬದುಕಿನಲ್ಲಿ ಏನು ಸಾಧಿಸಿದ್ದೇವೆ ಎಂಬುದು ಮುಖ್ಯ. ಚನ್ನಮ್ಮಳ ಜೀವನದಿಂದ ಪ್ರಭಾವಿತರಾಗಿರುವುದರಿಂದಲೇ ಈ ಸಮಿತಿಯ ಅಧ್ಯಕ್ಷರಾದ ನೀಲಮ್ಮ ಪಾಟೀಲ ಅವರು ಇಂತಹ ಸೇವೆಯನ್ನು ಮಾಡುತ್ತಿದ್ದಾರೆ. ಅವರಿಗೆ ನಿಮ್ಮೆಲ್ಲರ ಸಹಕಾರ ಇರಲಿ’ ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ದೇವರ ಹಿಪ್ಪರಗಿಯ ಜಡಿಸಿದ್ದೇಶ್ವರ ಶ್ರೀ ಮಾತನಾಡಿ, ‘ವರ್ಷಕ್ಕೊಂದು ಬಾರಿ ಕಿತ್ತೂರು ಚನ್ನಮ್ಮ ಜಯಂತಿ ಆಚರಣೆ ಮಾಡಿದರೆ ಸಾಲದು. ಅವರ ಬದುಕಿನ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ. ದೇಶದ ರಕ್ಷಣೆಗಾಗಿ ಎಲ್ಲವನ್ನೂ ಅವರು ತ್ಯಾಗ ಮಾಡಿದರು. ಅವರ ಜೀವನವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ’ ಎಂದು ಸಲಹೆ ನೀಡಿದರು.

ಹಿಕ್ಕನಗುತ್ತಿ ಪ್ರಭುಲಿಂಗ ಶರಣರು ಸಮ್ಮುಖ ವಹಿಸಿದ್ದರು. ಸಮಿತಿಯ ಅಧ್ಯಕ್ಷೆ ನೀಲಮ್ಮ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಿಗ್ಗೆ ಚನ್ನಮ್ಮಮೂರ್ತಿಗೆ ಪೂಜ್ಯರ ನೇತೃತ್ವದಲ್ಲಿ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಮಿತಿ ವತಿಯಿಂದ ಮಹಿಳೆಯರಿಗೆ ಉಡಿತುಂಬುವ ಕಾರ್ಯ ನಡೆಯಿತು.

ಚಂದ್ರಶೇಖರಯ್ಯ ಹಿರೇಮಠ, ಶಿರಸ್ತೆದಾರ ಜೆ.ಆರ್.ಜೈನಾಪೂರ, ಸಮಿತಿಯ ಗೌರವ ಅಧ್ಯಕ್ಷ ಅಪ್ಪಾಸಾಬಗೌಡ ಪಾಟೀಲ, ಉಪಾಧ್ಯಕ್ಷ ಕಲ್ಲನಗೌಡ ಪಾಟೀಲ, ಕಾರ್ಯದರ್ಶಿ ಮಲ್ಲನಗೌಡ ಪಾಟೀಲ, ಭೀಮನಗೌಡ ಪಾಟೀಲ, ಬಸನಗೌಡ ಪಾಟೀಲ, ಸಂಗನಗೌಡ ಚಿಮ್ಮಲಗಿ, ಸಂಗಮೇಶ ಚಿತ್ತರಗಿ, ಸುವರ್ಣಾ ಬಿರಾದಾರ, ರೇಣುಕಾ ಬಿರಾದಾರ, ದೀಪಿಕಾ ಪಾಟೀಲ, ನೀತು ಪಾಟೀಲ, ಗಜದಂಡಯ್ಯ ಹಿರೇಮಠ, ಕಾಶಿನಾಥ ಧರಿ ಇದ್ದರು. ಸಂಗೀತಾ ಹಿರೇಮಠ ಪ್ರಾರ್ಥಿಸಿದರು. ಮಲ್ಲನಗೌಡ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಹಿಪ್ಪರಗಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.