ಬಸವನಬಾಗೇವಾಡಿ: ಸ್ವಾತಂತ್ರಕ್ಕಾಗಿ ಹೋರಾಡಿದ ಸಾಕಷ್ಟು ಮಹನೀಯರಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ಮೊದಲಿಗರಾಗಿ ನಿಲ್ಲುತ್ತಾರೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ತಾಲ್ಲೂಕು ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
‘ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ದೇಶವನ್ನೇ ಆವರಿಸಿಕೊಂಡ ಸಂದರ್ಭದಲ್ಲಿ ದೇಶದ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನೇ ಪಣವಿಟ್ಟು ದೇಶಕ್ಕಾಗಿ ಹೋರಾಡಿದ ವೀರ ಮಹಿಳೆ ಚನ್ನಮ್ಮ ಇಂದಿನ ಯುವ ಪೀಳಿಗೆಗೆ
ಆದರ್ಶಪ್ರಾಯರಾಗಿದ್ದಾರೆ. ದೇಶಕ್ಕಾಗಿ ಹೋರಾಡಿದ ಮಹನೀಯರ ಜೀವನ ಆದರ್ಶಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಸವರಾಜ ಕೋಲಾರ ಮಾತನಾಡಿ, ‘ತ್ಯಾಗ–ಸ್ವಾಭಿಮಾನದ ಪ್ರತೀಕಳಾದ ಚನ್ನಮ್ಮ ಬ್ರಿಟಿಷರಿಗೆ ಮೊದಲು ಸೋಲಿನ ರುಚಿ ತೊರಿಸಿದ ದಿಟ್ಟ ಮಹಿಳೆ. ಅವರು ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚುವ ಮೂಲಕ ಬ್ರಿಟಿಷರ ಪಾಲಿಗೆ ಸಿಂಹ ಸ್ವಪ್ನವಾಗಿದ್ದರು’ ಎಂದು ಹೇಳಿದರು.
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಶೀಲ್ದಾರ್ ಯಮನಪ್ಪ ಸೋಮನಕಟ್ಟಿ, ತಾಲ್ಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ಗೊಳಸಂಗಿ, ಮಹಾಂತೇಶ ಆದಿಗೊಂಡ ಮಾತನಾಡಿದರು.
ಸಾಹಿತಿ ಲ.ರು.ಗೊಳಸಂಗಿ, ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಫ್.ಡಿ. ಮೇಟಿ, ಬಸವರಾಜ ಹಾರಿವಾಳ, ಬಸಣ್ಣ ದೇಸಾಯಿ, ಸುರೇಶ ಹಾರಿವಾಳ, ಬಸವರಾಜ ಕೋಟಿ, ಚಂದ್ರಶೇಖರಗೌಡ ಪಾಟೀಲ, ಜಗದೀಶ ಕೊಟ್ರಶೆಟ್ಟಿ, ಡಾ.ಮಹಾಂತೇಶ ಜಾಲಗೇರಿ, ಪಿಐ ಗುರಶಾಂತ ದಾಶ್ಯಾಳ, ಸಿದ್ದು ಉಕ್ಕಲಿ, ಗುರನಗೌಡ ಬಿರಾದಾರ, ಶಿವಾನಂದ ಮಂಗಾನವರ ಇದ್ದರು.
ರಾಷ್ಟ್ರೀಯ ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಸ್ವಾಗತಿಸಿದರು. ಕೊಟ್ರೇಶ ಹೆಗಡ್ಯಾಳ ಕಾರ್ಯಕ್ರಮ ನಿರೂಪಿಸಿದರು. ಸಂಗನಗೌಡ ಚಿಕ್ಕೊಂಡ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.