ADVERTISEMENT

ವಕ್ಫ ಬೋರ್ಡ್‌ ಅನ್ಯಾಯದ ವಿರುದ್ದ ರಾಜ್ಯದಾದ್ಯಂತ ಪ್ರತಿಭಟನೆ: ಕೋಡಿಹಳ್ಳಿ

ರೈತ ಸಂಘಟನೆ, ಹಸಿರು ಸೇನೆ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 14:39 IST
Last Updated 29 ಅಕ್ಟೋಬರ್ 2024, 14:39 IST
ಇಂಡಿ ಪಟ್ಟಣದ ಖಾಸಗಿ ಹೋಟೆಲ್ ಒಂದರಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹಸಿರು ಸೇನೆ ರಾಜ್ಯ ಅಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಮಾತನಾಡಿದರು.  
ಇಂಡಿ ಪಟ್ಟಣದ ಖಾಸಗಿ ಹೋಟೆಲ್ ಒಂದರಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹಸಿರು ಸೇನೆ ರಾಜ್ಯ ಅಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಮಾತನಾಡಿದರು.     

ಇಂಡಿ: ರೈತರ ಪಹಣಿಯಲ್ಲಿ ವಕ್ಫ ಬೋರ್ಡ್‌ ಹೆಸರು ಸೇರಿಸಿದ್ದನ್ನು ಈ ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ರೈತ ಸಂಘಟನೆ, ಹಸಿರು ಸೇನೆ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕ್ಟೋಬರ್ 8 ಮತ್ತು 10ರಂದು ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್‌ ಎಂದು ತಿದ್ದುಪಡಿ ಮಾಡಲು ನಿರ್ದೇಶನ ನೀಡಿದವರು ಯಾರು ಮುಖ್ಯಮಂತ್ರಿಗಳೋ, ಜಿಲ್ಲಾಧಿಕಾರಿಗಳೋ, ಇಲ್ಲದಿದ್ದರೆ ಮತ್ಯಾರು, ಯಾವ ಪುರುಷಾರ್ಥಕ್ಕಾಗಿ ರೈತರಿಗೆ ತೊಂದರೆ ನೀಡಲು ಮುಂದಾಗಿದ್ದೀರಿ’ ಎಂದು ಪ್ರಶ್ನಿಸಿದರು.

ಈ ಹಿಂದೆ ವಿಜಯಪುರ ಜಿಲ್ಲೆಯನ್ನು ಸುಲ್ತಾನರು ಆಳ್ವಿಕೆ ಮಾಡಿದ್ದಾರೆ. ಅದಕ್ಕಿಂತ ಮೊದಲು ಬಾದಾಮಿ ಚಾಲುಕ್ಯರು ಸೇರಿದಂತೆ ಹಲವು ಹಿಂದೂ ರಾಜರು ಆಳ್ವಿಕೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ರೈತರು ತಾವು ಉಳುಮೆ ಮಾಡುತ್ತಿದ್ದ ಜಮೀನಿಗೆ ರಾಜರಿಗೆ ತೆರಿಗೆ ಕಟ್ಟುತ್ತಿದ್ದರು. ತದನಂತರ ಬ್ರಿಟಿಷ್ ಕಂಪನಿ ರೈತರಿಗೆ ತಾವು ಉಳುಮೆ ಮಾಡುತ್ತಿದ್ದ ಸ್ಥಳವನ್ನು ಅಳತೆ ಮಾಡಿ ರೈತರ ಹೆಸರಿಗೆ ಎಕರೆ ಗುಂಟೆ ವಿಸ್ತೀರ್ಣದ ಬಗ್ಗೆ ದಾಖಲಾತಿ ನೀಡಿದರು. 1974ರಲ್ಲಿ ದೇವರಾಜ್ ಅರಸ್ ಅವರು ರೈತರು ಉಳುಮೆ ಮಾಡುತ್ತಿದ್ದ ಜಮೀನಿಗೆ ಉಳುವವನೇ ಒಡೆಯ ಎಂದು ಘೋಷಿಸಿ ಆ ಜಮೀನನ್ನು ನೇರವಾಗಿ ರೈತರ ಹೆಸರಿಗೆ ಖಾತೆ ಬದಲಾವಣೆ ಮಾಡಿಸಿದರು ಎಂದರು.

ADVERTISEMENT

‘ಅಲ್ಲಿಂದ ಇಲ್ಲಿಯವರೆಗೂ ಅಲ್ಲಿ ರೈತರು ಬೆವರು ಸುರಿಸಿ ದುಡಿದು, ತಮಗಾಗಿ ಅಲ್ಲದೆ ದೇಶದ ಜನರಿಗಾಗಿ ಅನ್ನ ಹಾಕುವ ಕಾರ್ಯ ಮಾಡುತ್ತಿದ್ದಾರೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಕಾಏಕಿ ಒಂದು ಧರ್ಮ ಅಥವಾ ಸಮುದಾಯದ ಓಲೈಕೆಗಾಗಿ ವಕ್ಫ ಬೋರ್ಡ್‌ ಹೆಸರನ್ನು ರೈತರ ಪಹಣಿಯಲ್ಲಿ ಸೇರಿಸುತ್ತಿರುವುದು ಏಕೆ’ ಎಂದು ಪ್ರಶ್ನಿಸಿದರು.

‘ನಿಮಗೆ ಆ ಸಮುದಾಯದ ಮೇಲೆ ಕಾಳಜಿ ಇದ್ದರೆ, ಸರ್ಕಾರದಿಂದ ಅವರಿಗೆ ನೀವು ಸಹಾಯ ಮಾಡಿ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ರೈತರ ಜಮೀನನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿರುವ ನೀವು ಈ ಕೂಡಲೇ ಅದನ್ನು ಕೈ ಬಿಟ್ಟು, ಪಹಣಿಯಲ್ಲಿ ಸೇರಿದ ವಕ್ಫ ಬೋರ್ಡ್‌ ಹೆಸರನ್ನು ತೆಗೆದುಹಾಕಿ, ರೈತರ ಜಮೀನು ರೈತರಿಗೆ ಇರುವಂತೆ ಮಾಡಬೇಕು. ಒಂದು ವೇಳೆ ನೀವು ವಕ್ಫ ಬೋರ್ಡ್‌ಗೆ ರೈತರ ಜಮೀನನ್ನು ಸೇರಿಸುವ ಹುನ್ನಾರ ಮುಂದುವರಿಸಿದರೆ, ರಾಜ್ಯದಾದ್ಯಂತ ರೈತರು ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸಲು ನಾವೆಲ್ಲ ಒಂದಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ವಕ್ಫ ಬೋರ್ಡ್‌ಗೆ ಇನಾಮು ಕೊಟ್ಟಿದ್ದು ಯಾವಾಗ, ದಾನ ಪಡೆದ ಜಮೀನನ್ನು ಇಲ್ಲಿಯವರೆಗೂ ಏಕೆ ವಕ್ಫ ಬೋರ್ಡ್‌ಗೆ ಸೇರಿಸಿಕೊಂಡಿಲ್ಲ. ಈಗ ಒಮ್ಮಿಂದೊಮ್ಮೆಲೆ ಪಹಣಿಗಳಲ್ಲಿ ವಕ್ಫ ಬೋರ್ಡ್‌ ಹೆಸರು ಸೇರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಪಹಣಿಯಲ್ಲಿ ವಕ್ಫ ಬೋರ್ಡ್ ಎಂದು ನಮೂದಿಸಿರುವುದು ಸರಿ ಮಾಡುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದೀರಿ. ಈ ಮೊದಲು ಏಕೆ ವಕ್ಫ ಬೋರ್ಡ್‌ ಹೆಸರು ತೇಲಿಸಿದ್ದೀರಿ? ನೀವು ರೈತರಿಗೆ ದ್ರೋಹ ಮಾಡಲು ಮುಂದಾಗಿದ್ದೀರಿ. ಮೊದಲು ಪಹಣಿಯಲ್ಲಿನ ವಕ್ಫ ಬೋರ್ಡ ಹೆಸರು ತೆಗೆದು ಜಿಲ್ಲೆಯ ರೈತರ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.

‘ನಿಮ್ಮ ರಾಜಕೀಯ ಲಾಭಕ್ಕಾಗಿ ರೈತರನ್ನು ಭೂಮಿಯಿಂದ ಹೊರಗೆ ಹಾಕಲು ಮುಂದಾದರೆ ರೈತರಿಗೆ ದ್ರೋಹ ಮಾಡಿ ರೈತರ ಒಡೆತನದ ಭೂಮಿಯನ್ನು ಕಸಿದುಕೊಂಡರೆ, ದೇವರು ನಿಮಗೆ ಕ್ಷಮಿಸಲ್ಲ. ನಾವು ರಾಜ್ಯಾದ್ಯಂತ ಹೋರಾಟಕ್ಕಿಳಿಯಬೇಕಾಗುತ್ತದೆ. ಇನ್ನು 15 ದಿನಗಳಲ್ಲಿ ಪಹಣಿಗಳಲ್ಲಿ ತೇಲಿಸಿದ ವಾಕ್ಫ ಬೋಡರ್್ ಹೆಸರನ್ನು ತೆಗೆದು ಹಾಕಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟಕ್ಕೆ ನಾವು ಅಣೆಯಾಗುತ್ತೇವೆ’ ಎಂದು ತಿಳಿಸಿದರು.

ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎಸ್.ಬಿ ಕೆಂಭೋಗಿ ಮಾತನಾಡಿ, ‘ರೈತರಿಗೆ ಯಾವುದೇ ನೋಟಿಸ್ ನೀಡದೆ, ಅವರ ಪಹಣಿಗಳಲ್ಲಿ ಏಕಾಏಕಿ ವಕ್ಫ ಬೋರ್ಡ್‌ ಹೆಸರನ್ನು ತೇಲಿಸಿದ್ದು ಖಂಡನೀಯ, ಈ ಕೂಡಲೇ ಅದನ್ನು ಹಿಂಪಡೆದು, ತಪ್ಪು ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ರಾಜ್ಯಾಧ್ಯಕ್ಷರು ಕರೆ ನೀಡಿದರೆ ನಾವೆಲ್ಲ ರೈತರು ಸೇರಿ ಹೋರಾಟದ ರೂಪುರೇಷೆ ತಯಾರಿಸಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂದು ತಿಳಿಸಿದರು.

ಇಂಡಿ ತಾಲ್ಲೂಕಿನ ಹಿಂಗಣಿ ಗ್ರಾಮದ ರೈತ ಮಂಜುನಾಥ ಗುಬ್ಯಾಡ ಮಾತನಾಡಿ, ‘ನಮ್ಮ ಜಮೀನಿನ ಪಹಣಿಯಲ್ಲಿಯೂ ವಕ್ಫ ಭೋರ್ಡ ಹೆಸರು ತೇಲಿಸಿದ್ದಾರೆ. ನಮ್ಮ ಮುತ್ತಜ್ಜನ ಕಾಲದಿಂದಲೂ ಇದು ನಮ್ಮ ಆಸ್ತಿ ಇದೆ. ಈಗ ಏಕಾಏಕಿ ನೋಟಿಸ್ ನೀಡದೇ ಪಹಣಿಯಲ್ಲಿ ವಕ್ಫ ಬೋರ್ಡ ಹೆಸರು ತೇಲಿಸಿದ್ದಾರೆ’ ಎಂದು ಅಳಲು ತೋಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ರಾಯಚೂರು ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಪೊಲೀಸ್‌ ಪಾಟೀಲ, ದಾವಣಗೆರೆ ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಮಂಡಲೂರು, ಬೆಳಗಾವಿ ಜಿಲ್ಲಾಧ್ಯಕ್ಷ ಶಂಕರ ಮಾದೇನಹಳ್ಳಿ, ನಾಗೇಶ ಹೆಗಡ್ಯಾಳ, ಮಲ್ಲಿಕಾರ್ಜುನ ಹಾವಿನಾಳಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.