ADVERTISEMENT

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಂದ ‘ಕ್ರಾಂತಿವೀರ ಬ್ರಿಗೇಡ್’

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 15:58 IST
Last Updated 16 ನವೆಂಬರ್ 2024, 15:58 IST
   

ವಿಜಯಪುರ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ನೂತನವಾಗಿ ಸ್ಥಾಪಿಸಲು ಉದ್ದೇಶಿಸಿರುವ ಬ್ರಿಗೇಡ್‌ಗೆ ‘ಕ್ರಾಂತಿವೀರ ಬ್ರಿಗೇಡ್‌’ ಎಂದು ನಾಮಕರಣ ಮಾಡಲು ನಿರ್ಣಯಿಸಲಾಯಿತು.

ನಗರ ಸಮೀಪದ ಅರಕೇರಿಯ ಅಮೋಘ ಸಿದ್ದೇಶ್ವರ ದೇಗುಲದಲ್ಲಿ ಶನಿವಾರ ಕೆ.ಎಸ್‌.ಈಶ್ವರಪ್ಪ ಸಮ್ಮುಖದಲ್ಲಿ ನಡೆದ ಹಿಂದುಳಿದ ವರ್ಗಗಳಿಗೆ ಸೇರಿದ ಮಠಾಧೀಶರು, ಸಾಧು–ಸಂತರ ಸಭೆಯಲ್ಲಿ ಬ್ರಿಗೇಡ್‌ ಹೆಸರನ್ನು ಅಂತಿಮಗೊಳಿಸಲಾಯಿತು. 

ಫೆಬ್ರುವರಿ 4ರಂದು ಬಸವನ ಬಾಗೇವಾಡಿಯಲ್ಲಿ ಸಹಸ್ರಾರು ಸಾಧು–ಸಂತರು, ಜನರ ಸಮ್ಮುಖದಲ್ಲಿ ‘ಕ್ರಾಂತಿವೀರ ಬ್ರಿಗೇಡ್‌’ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲು ತೀರ್ಮಾನಿಸಲಾಯಿತು.

ADVERTISEMENT

ಮಾರ್ಗದರ್ಶಿ ಮಂಡಳಿ ರಚನೆ: ‘ಕ್ರಾಂತಿವೀರ ಬ್ರಿಗೇಡ್‌’ ಮಾರ್ಗದರ್ಶಕ ಮಂಡಳಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ವಿಜಯಪುರ ಜಿಲ್ಲೆಯ ಮಖಣಾಪುರದ ಸೋಮೇಶ್ವರ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿಯಾಗಿ ಕವಲಗುಡ್ಡದ ಅಮರೇಶ್ವರ ಮಹಾರಾಜರು, ಖಚಾಂಚಿಯಾಗಿ ಜಕನೂರಿನ ಮಾದುಲಿಂಗ ಸ್ವಾಮೀಜಿ ಅವರನ್ನು ನೇಮಕ ಮಾಡಲಾಯಿತು.

ಮುಂದಿನ ದಿನಗಳಲ್ಲಿ ಬ್ರಿಗೇಡ್‌ಗೆ ರಾಜಕೀಯ ಮುಖಂಡರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ರಾಜಕೀಯ ಮುಕ್ತ ಬ್ರಿಗೇಡ್‌: ‘ಬ್ರಿಗೇಡ್‌ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿಲ್ಲ. ರಾಜಕೀಯ ಮುಕ್ತವಾಗಿರಲಿದೆ. ರಾಷ್ಟ್ರೀಯ ವಿಚಾರಗಳು, ಹಿಂದೂ ಧರ್ಮಕ್ಕೆ ಸಂಬಂಧಿಸಿದ ವಿಷಯಗಳು ಬಂದಾಗ ಬ್ರಿಗೇಡ್‌ ಪ್ರಮುಖರು ಚರ್ಚಿಸಿ, ತೀರ್ಮಾನಿಸಿ, ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಮಾಡಲಿದ್ದಾರೆ. ಯಾವುದೇ ಪಕ್ಷದ ಮುಖಂಡರು ಬೇಕಾದರೂ ಬ್ರಿಗೇಡ್‌ಗೆ ಸೇರಿಕೊಳ್ಳಬಹುದಾಗಿದೆ’ ಎಂದು ಕೆ.ಎಸ್‌.ಈಶ್ವರಪ್ಪ ಆಹ್ವಾನ ನೀಡಿದರು.

‘ಬ್ರಿಗೇಡ್‌ಗೂ, ನನಗೂ ಮತ್ತು ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಬ್ರಿಗೇಡ್‌ ನನ್ನ ನಿಯಂತ್ರಣದಲ್ಲಿ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಹೋರಾಟ ನಿಲ್ಲದು: ‘ವಕ್ಪ್‌ ವಿವಾದ ಖಂಡಿಸಿ ಹಾಗೂ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಮಾತನಾಡಿದ ಕಾರಣಕ್ಕೆ ಕಾಂಗ್ರೆಸ್‌ ಸರ್ಕಾರ ನನ್ನ ಮೇಲೆ ಜಾಮೀನು ರಹಿತ ದೂರು ದಾಖಲಿಸಿರುವುದು ಖಂಡನೀಯ’ ಎಂದರು.

‘ನನ್ನ ವಿರುದ್ಧ ಯಾವುದಾದರೂ ಭ್ರಷ್ಟಾಚಾರ ಆರೋಪ ಇದೆಯಾ? ನನ್ನ ಮೇಲೆ ಪೋಕ್ಸೋ ದೂರು ದಾಖಲಾಗಿದೆಯಾ?. ನನ್ನ ಜೀವನದಲ್ಲಿ ಇದುವರೆಗೂ ಒಂದೇ ಒಂದು ಆಪಾದನೆ ಬಂದಿಲ್ಲ. ಹೀಗಿದ್ದೂ ನನ್ನ ವಿರುದ್ಧ ಜಾಮೀನು ರಹಿತ ದೂರು ದಾಖಲಿಸಿರುವುದು ಏಕೆ? ಜಾಮೀನು ರಹಿತ ದೂರು ದಾಖಲಿಸಿ ನನ್ನನ್ನು ಹೆದರಿಸಲು ಸರ್ಕಾರ ಪ್ರಯತ್ನಿಸಿದರೆ ಜೈಲಿಗೆ ಬೇಕಾದರೂ ಹೋಗಲು ಸಿದ್ಧನಿದ್ದೇನೆ, ಹೋರಾಟ ನಿಲ್ಲಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.