ADVERTISEMENT

ವಕ್ಫ್‌ ವಿವಾದ | ಮುಂದುವರಿದ ಯತ್ನಾಳ, ಶೋಭಾ ಅಹೋರಾತ್ರಿ ಧರಣಿ; ಈಶ್ವರಪ್ಪ ಬೆಂಬಲ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 15:37 IST
Last Updated 5 ನವೆಂಬರ್ 2024, 15:37 IST
   

ವಿಜಯಪುರ: ವಕ್ಫ್ ಕಾಯ್ದೆ ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಹೊರಾಂಗಣದಲ್ಲಿ ಬಿಜೆಪಿಯವರು ನಡೆಯುತ್ತಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಎರಡು ದಿನ ಪೂರೈಸಿತು. 

ಮಂಗಳವಾರ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ‘ಹಿಂದುಗಳ ಬಗ್ಗೆ, ಸಂವಿಧಾನದ ಬಗ್ಗೆ ಗೌರವ ಇದ್ದರೆ ತಕ್ಷಣ ವಕ್ಫ್‌ಗೆ ಸಂಬಂಧಿಸಿದ 1974 ಗೆಜೆಟ್‌ ಅಧಿಸೂಚನೆಯನ್ನು ತಕ್ಷಣ ರದ್ದುಗೊಳಿಸಬೇಕು, ರೈತರ, ಮಠಮಾನ್ಯಗಳ ಜಮೀನಿನ ಉತಾರೆಯಲ್ಲಿರುವ ವಕ್ಪ್‌ ಹೆಸರು ತೆಗೆಯಬೇಕು. ಇಲ್ಲಾವಾದರೆ ರಾಜ್ಯದಲ್ಲಿ ದಂಗೆ, ರಕ್ತಪಾತವಾಗಲಿದೆ. ಇದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ರೈತರ ಜಮೀನಿನ ಪಹಣಿಯಲ್ಲಿ ವಕ್ಫ್‌ ಎಂದು ನಮೂದಿಸಿರುವುದಕ್ಕೆ ಕಾಂಗ್ರೆಸ್‌ ಶಾಸಕರು, ಸಚಿವರಿಗೂ ಸಮಾಧಾನ ಇಲ್ಲ. ಆದರೆ, ಕುರ್ಚಿ ಉಳಿಸಿಕೊಳ್ಳಲು ಬೆಂಬಲ ನೀಡಿದ್ದಾರೆ. ಖುರ್ಚಿ ಮೇಲೆ ಜೀವಂತವಾಗಿ ಇರುವ ಬದಲು ಸಾಯುವುದೇ ಮೇಲು’ ಎಂದರು. 

ADVERTISEMENT

‘ದೇವಸ್ಥಾನದ ಆಸ್ತಿ, ಮಠಗಳ ಆಸ್ತಿ, ರೈತರ ಆಸ್ತಿ, ಸರ್ಕಾರಿ ಆಸ್ತಿಯಲ್ಲೂ ವಕ್ಫ್‌ ಎಂದು ನಮೂದಿಸಿರುವುದು ಖಂಡನೀಯ’ ಎಂದರು.

‘ವಕ್ಫ್‌ಗೂ ರೈತರ, ಮಠ, ಮಾನ್ಯಗಳ ಭೂಮಿಗೂ ಯಾವುದೇ ಸಂಬಂಧ ಇಲ್ಲ. ಜಮೀರ್‌ ಅಹಮದ್‌ ಎಂಬ ರಾಷ್ಟ್ರದೋಹ್ರಿ ಸಚಿವನ ಮಾತು ಮುಖ್ಯಮಂತ್ರಿ ಕೇಳುತ್ತಿರುವುದು ಖಂಡನೀಯ. ತಕ್ಷಣ ಸಚಿವರ ರಾಜೀನಾಮೆ ಪಡೆಯಬೇಕು’ ಎಂದು ಆಗ್ರಹಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ರೈತರ ಆಸ್ತಿ ಕಬಳಸಲು ಹುನ್ನಾರ ನಡೆಸಿರುವ ಕಾಂಗ್ರೆಸ್‌ನಿಂದ ದೇಶಕ್ಕೆ ಒಳ್ಳೆಯದಾಗುವುದಿಲ್ಲ. ವಕ್ಫ್ ಕಾಯ್ದೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರವಾಗಿ ಕೆಲಸ ನಡೆಸಿದೆ. ಜಗತ್ತಿನ ಯಾವುದೇ ಶಕ್ತಿ ವಿರೋಧ ಮಾಡಿದರೂ ತಿದ್ದುಪಡಿ ತಂದೇ ತರುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ ಎಂದರು.

ನವೆಂಬರ್ 7 ರಂದು ವಿಜಯಪುರಕ್ಕೆ  ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್ ತಂಡ ಆಗಮಿಸಲಿದ್ದು, ಅನ್ಯಾಯಕ್ಕೆ ಒಳಗಾದವರ ಜೊತೆ ಚರ್ಚಿಸಿ ಅಹವಾಲು ಸ್ವೀಕರಿಸಲಿದೆ. ಆದ್ದರಿಂದ ರೈತರು ನಮ್ಮ ಕಚೇರಿಗೆ ತಮ್ಮ ಆಸ್ತಿಗಳು ಕಾನೂನು ಬಾಹಿರವಾಗಿ ವಕ್ಫ್ ಆಗಿದ್ದರೇ ಆ ಕುರಿತು ಅಗತ್ಯ ದಾಖಲೆಗಳನ್ನು ತಮ್ಮ ಮನವಿಪತ್ರದೊಂದಿಗೆ ಸಲ್ಲಿಸಲು ತಿಳಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ರಮೇಶ ಭೂಸನೂರ, ಮುಕುಡಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಉಮೇಶ ಕೋಳಕೂರ, ಪ್ರೇಮಾನಂದ ಬಿರಾದಾರ, ರಾಘವ ಅಣ್ಣಿಗೇರಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.