ಮುದ್ದೇಬಿಹಾಳ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡೆಸ್ಕ್ ಕೊರತೆ ಕಾರಣ ವಿದ್ಯಾರ್ಥಿಗಳು ಹಲವಾರು ವರ್ಷಗಳಿಂದ ನೆಲದ ಮೇಲೆಯೇ ಕುಳಿತು ಪಾಠ, ಪ್ರವಚನ ಆಲಿಸುವ ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಬರೆಯುವ ಪರಿಸ್ಥಿತಿ ಇದೆ.
2008-09ರಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಸರ್ಕಾರಿ ಪ.ಪೂ ಕಾಲೇಜು ಹಂತ ಹಂತವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಪಿಯುಸಿ ಪ್ರಥಮ, ದ್ವಿತೀಯ ವರ್ಷದಲ್ಲಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳು ಇಲ್ಲಿ ವಿದ್ಯಾರ್ಥಿಗಳಿಗೆ ಸಂಯೋಜನೆಯೊಂದಿಗೆ ಶಿಕ್ಷಣ ನೀಡಲಾಗುತ್ತಿದೆ.
ಕಲಾ ವಿಭಾಗದಲ್ಲಿ 665, ವಿಜ್ಞಾನ ವಿಭಾಗದಲ್ಲಿ 201, ವಾಣಿಜ್ಯ ವಿಭಾಗದಲ್ಲಿ 99 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ಇಲ್ಲಿ ಒಬ್ಬರು ಪ್ರಾಚಾರ್ಯರು, ಎಂಟು ಜನ ಕಾಯಂ, ಒಂಬತ್ತು ಜನ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಡಿ ದರ್ಜೆ ಹುದ್ದೆ ಖಾಲಿ ಇದ್ದು ಒಬ್ಬರು ಎಫ್‌ಡಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂಬತ್ತು ಕೊಠಡಿಗಳಿದ್ದು ಒಂದು ಉಪನ್ಯಾಸಕರ ಕೊಠಡಿ ಇದೆ. ಎರಡು ಲ್ಯಾಬ್‌ಗಳಿವೆ. ಹೊಸದಾಗಿ ಬರುವ ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳಿಗೆ ಬುಕ್ ಬ್ಯಾಂಕ್ ಸೌಲಭ್ಯ ಒದಗಿಸಲಾಗುತ್ತಿದೆ.
ಇರುವ ಸಮಸ್ಯೆಯೆಂದರೆ ವಿದ್ಯಾರ್ಥಿಗಳು ನೆಲದ ಮೇಲೆಯೇ ಕುಳಿತು ಪಾಠ, ಪ್ರವಚನ ಆಲಿಸಬೇಕು. ಪೂರ್ವಸಿದ್ಧತೆ ಪರೀಕ್ಷೆಗಳನ್ನು ನೆಲದ ಮೇಲೆ ಕುಳಿತು ಬರೆಯಬೇಕಾಗಿದೆ. 965 ವಿದ್ಯಾರ್ಥಿಗಳಿದ್ದು, ಇರುವ ಡೆಸ್ಕ್‌ಗಳ ಸಂಖ್ಯೆ 200. ಅದರಲ್ಲಿ ಎಲ್ಲರೂ ಕೂರುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದು ಡೆಸ್ಕ್‌ನಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಕುಳ್ಳಿರಿಸಿದರೂ ಇನ್ನೂ 250 ಡೆಸ್ಕ್‌ಗಳ ಅಗತ್ಯ ಈ ಕಾಲೇಜಿಗೆ ಇದೆ.
‘ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಡೆಸ್ಕ್, ಕಾಲೇಜಿಗೆ ಕಂಪೌಂಡ್ ಕಟ್ಟಡ ಕಟ್ಟಿಸಿಕೊಡುವುದು ಸರ್ಕಾರ, ಪಪೂ ಶಿಕ್ಷಣ ಇಲಾಖೆಯ ಕರ್ತವ್ಯ. ಹಲವಾರು ವರ್ಷಗಳಿಂದ ಇಲ್ಲಿ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಸಿದ್ಧತಾ ಪರೀಕ್ಷೆ,ಪಾಠಗಳನ್ನು ಕೇಳುತ್ತಿರುವುದು ದುರ್ದೈವದ ಸಂಗತಿ. ಆದಷ್ಟು ಶೀಘ್ರ ಡೆಸ್ಕ್ ಹಾಗೂ ಮೂಲಸೌಕರ‍್ಯ ಒದಗಿಸುವ ಕಾರ್ಯವನ್ನು ಇಲಾಖೆಯವರಾಗಲೀ, ಸ್ವಯಂಸೇವಾ ಸಂಸ್ಥೆಗಳಾಗಲಿ ಮಾಡಲಿ’ ಎಂದು ವಕೀಲ ಬಿ.ಎನ್.ಹೂಗಾರ ಆಗ್ರಹಿಸಿದರು.
‘ಕಾಲೇಜಿಗೆ ಡೆಸ್ಕ್‌ಗಳ ಕೊರತೆ ಇರುವುದಾಗಿ ಸರ್ಕಾರಕ್ಕೆ, ನಮ್ಮ ಇಲಾಖೆಗೆ ಪತ್ರ ಬರೆದು ಡೆಸ್ಕ್ ಪೂರೈಸುವಂತೆ ಮನವಿ ಮಾಡಿದ್ದೇವೆ. 2021ರಲ್ಲಿ ಹಿಂದಿನ ಶಾಸಕರು ಡೆಸ್ಕ್‌ಗಳ ಕೊರತೆಯ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಗಮನ ಸೆಳೆದಿದ್ದಾರೆ. ಈಗಿನ ಶಾಸಕರು ಡೆಸ್ಕ್ ಒದಗಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ ಈವರೆಗೂ ಡೆಸ್ಕ್‌ಗಳ ವ್ಯವಸ್ಥೆ ಆಗಿಲ್ಲ’ ಎಂದು ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಅಂಗಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಬಡ ಮಕ್ಕಳೇ ಹೆಚ್ಚಿರುವ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಕೂರಲು ಡೆಸ್ಕ್ ಒದಗಿಸುವಂತೆ ದಾನಿಗಳ ನೆರವನ್ನೂ ಕೋರಲಾಗುವುದುಎಸ್.ಎಸ್.ಅಂಗಡಿ ಪ್ರಾಚಾರ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.