ADVERTISEMENT

ವಕ್ಫ್‌ ಬೋರ್ಡ್‌ನಿಂದ ಜಮೀನು ಜಿಹಾದ್‌: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 12:53 IST
Last Updated 4 ನವೆಂಬರ್ 2024, 12:53 IST
<div class="paragraphs"><p>ಶೋಭಾ ಕರಂದ್ಲಾಜೆ</p></div>

ಶೋಭಾ ಕರಂದ್ಲಾಜೆ

   

ವಿಜಯಪುರ: ವಕ್ಫ್‌ ಆಸ್ತಿಗೆ ಸಂಬಂಧಿಸಿದಂತೆ 1974ರ ಗೆಜೆಟ್‌ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮತ್ತು ಭಾರತೀಯ ಕಿಸಾನ್‌ ಸಂಘದ ನೇತೃತ್ವದಲ್ಲಿ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಗುಡಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸೋಮವಾರ ಬೃಹತ್‌ ಪ್ರತಿಭಟನೆ ನಡೆಯಿತು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದಲ್ಲಿ ವಕ್ಫ್‌ ಬೋರ್ಡ್‌ನಿಂದ ಜಮೀನು ಜಿಹಾದ್‌ (ಲ್ಯಾಂಡ್‌ ಜಿಹಾದ್‌), ಜಮೀನು ಆತಂಕವಾದ (ಲ್ಯಾಂಡ್‌ ಟೆರರಿಸಂ) ನಡೆದಿದೆ.  ಇದರಿಂದ ನಮ್ಮ ರೈತರನ್ನು ರಕ್ಷಿಸಬೇಕಿದೆ ಎಂದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಜಮೀರ್‌ ಅಹಮದ್‌ ಷರಿಯತ್‌ ಕಾನೂನು ತರಲು ದೊಡ್ಡ ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

ಧರ್ಮ ಯುದ್ಧ ನಿಶ್ಚಿತ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ವಕ್ಪ್ ಕಾಯ್ದೆ ರದ್ದಾಗದಿದ್ದರೇ ರಾಜ್ಯದಲ್ಲಿ ಧರ್ಮ ಯುದ್ಧ ಆಗುವುದು ನಿಶ್ಚಿತ. ಈ ಧರ್ಮ ಯುದ್ಧಕ್ಕೆ ನಾನು ಸಂಪೂರ್ಣ ತಯಾರಾಗಿದ್ದೇನೆ’ ಎಂದು ಎಚ್ಚರಿಕೆ ನೀಡಿದರು.

‘ಮೂಡಾ ವಿವಾದದಲ್ಲಿ ಪಾರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಕ್ಪ್ ವಿವಾದವನ್ನು ಕೈಬಿಡದೇ ಇದ್ದರೆ ಮನೆ ಸೇರುವುದು ಗ್ಯಾರಂಟಿ’ ಎಂದು ಎಚ್ಚರಿಕೆ ನೀಡಿದರು.

‘ಕರ್ನಾಟಕದಲ್ಲಿ ವಕ್ಪ್ ಆಸ್ತಿ 6.20 ಲಕ್ಷ ಎಕರೆ ಇದೆ. ಈ ಭೂಮಿಯನ್ನು ರಾಷ್ಟ್ರೀಕರಣ ಮಾಡದಿದ್ದರೇ ಮುಂದೊಂದು ದಿನ ನಮ್ಮ ರಾಜ್ಯ ಪಾಕಿಸ್ತಾನ ಆಗುವುದರಲ್ಲಿ‌ ಅನುಮಾನ ಇಲ್ಲ’ ಎಂದರು.

‘ವಿಜಯಪುರದಲ್ಲಿ ಶೋಭಾ ಕರಂದ್ಲಾಜೆ, ಯತ್ನಾಳ ಒಟ್ಟಿಗೆ ಧರಣಿ ಕೂತಿರುವುದು ನಮ್ಮ ಪಕ್ಷದ ಕೆಲವರಿಗೆ ಆಶ್ಚರ್ಯ ಉಂಟುಮಾಡಿದೆ. ನಾನು, ಕರಂದ್ಲಾಜೆಯೇ ಮುಂದಿನ ಕರ್ನಾಟಕ ನಾಯಕರು ಎಂಬುದನ್ನು ಅವರು ಅರಿಯಬೇಕು’ ಎಂದು ತಮ್ಮ ಪಕ್ಷದೊಳಗಿನ ವಿರೋಧಿಗಳಿಗೆ ತಾಂಟ್‌ ನೀಡಿದರು.

ಸಂಸದರಾದ ರಮೇಶ ಜಿಗಜಿಣಗಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಎಸ್.ಕೆ.ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮುಖಂಡರಾದ ಉಮೇಶ ಕಾರಜೋಳ, ಆರ್‌.ಎಸ್‌.ಪಾಟೀಲ ಕೂಚಬಾಳ, ವಿಜುಗೌಡ ಪಾಟೀಲ, ಕೊಲ್ಹಾಪುರ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ವಿಜಯಪುರ ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅಹೋರಾತ್ರಿ ಧರಣಿ ಆರಂಭಿಸಿದ ಯತ್ನಾಳ

ವಕ್ಪ್ ಕಾಯ್ದೆ ರದ್ದುಪಡಿಸಬೇಕು, ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು ಹಾಗೂ 1974ರ ವಕ್ಫ್ ಗೆಜೆಟ್ ನೋಟಿಫಿಕೇಶನ್ ಹಿಂಪಡೆಯಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಮೀಪ ಶಾಸಕ ಬಸನಗೌಡ ಪಾಟೀಲ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ರಮೇಶ ಜಿಗಜಿಣಗಿ ಪಾಲ್ಗೊಂಡು, ಬೆಂಬಲ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.