ಸಿಂದಗಿ: ಅರಣ್ಯ ಇಲಾಖೆಯ ಸಿಬ್ಬಂದಿಯ 48 ದಿನಗಳ ನಿರಂತರ ಕಾರ್ಯಾಚರಣೆಯಿಂದ ತಾಲ್ಲೂಕಿನ ಸೋಮಜಾಳ ಗ್ರಾಮದ ಬಳಿ ತೋಟದಲ್ಲಿ ಇಡಲಾಗಿದ್ದ ಬೋನಿಗೆ ಸೋಮವಾರ ಚಿರತೆ ಸಿಕ್ಕಿ ಬಿದ್ದಿದೆ.
ಆ. 18 ರಂದು ತಾಲ್ಲೂಕಿನ ಆಸಂಗಿಹಾಳ ಗ್ರಾಮದ ಬಳಿ ಮೊದಲ ಬಾರಿಗೆ ಕಾಣಿಸಿಕೊಂಡ ಚಿರತೆ ಕೆಲವು ದಿನಗಳ ನಂತರ ದೇವರನಾವದಗಿ ಗ್ರಾಮದ ಬಳಿ ಕಬ್ಬಿನ ತೋಟದಲ್ಲಿ ಎಮ್ಮೆ ಕೊಂದು ಹಾಕಿತ್ತು. ಹಲವು ದಿನಗಳವರೆಗೆ ಈ ಭಾಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಫಜಲಪುರ ತಾಲ್ಲೂಕು ಘತ್ತರಗಾ ಗ್ರಾಮದ ಬಳಿ ಚಿತರತೆ ಕಾಣಿಸಿಕೊಂಡ ವರದಿಯಾಗಿತ್ತು. ಮತ್ತೆ ತಾಲ್ಲೂಕಿನ ಕುಳೇಕುಮಟಗಿ ಗ್ರಾಮದ ಬಳಿ ಸೆ. 10ರಂದು ರಾತ್ರಿ ತೋಟದಲ್ಲಿ ಕಾಣಿಸಿಕೊಂಡಿದ್ದನ್ನು ರೈತರೊಬ್ಬರು ಮೊಬೈಲ್‌ನಲ್ಲಿ ಫೋಟೊ ಸೆರೆ ಹಿಡಿದಿದ್ದರು.
ಉಪ ಅರಣ್ಯಾಧಿಕಾರಿ ಶಿವಶರಣಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯವಂತ ಮಸೂದಿ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ರಾಜೀವ ಬಿರಾದಾರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಪ್ರಿಯಾಂಕ ನಗರ, ಎಸ್.ಎಸ್.ಬಿರಾದಾರ, ಗಸ್ತು ವನಪಾಲಕರಾದ ವಿಠ್ಠಲ ಚನ್ನೂರ, ಶಿವಾನಂದ ಮದಗೊಂಡ, ಮುತ್ತಪ್ಪ ಕಂಟಿಕರ, ಬೀರೇಶ ರಾಜೋಳಿ, ಗುರು ರಾಮಗಿರಿಮಠ ಇವರು ನಿರಂತರ ಕಾರ್ಯಾಚರಣೆ ನಡೆಸಿದ್ದರು. ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಸೋಮಜಾಳ ಸುತ್ತಲಿನ ಗ್ರಾಮಸ್ಥರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.