ವಿಜಯಪುರ: ‘ಪತ್ರಕರ್ತನಾರಾಯಣ ಮಾಯಾಚಾರಿ ಅವರಿಗೆ ನಾನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದೇನೆ ಎನ್ನುವ ಆರೋಪಸತ್ಯಕ್ಕೆ ದೂರವಾಗಿದೆ’ ಎಂದು ಮುದ್ದೇಬಿಹಾಳ ಶಾಸಕಎ.ಎಸ್.ಪಾಟೀಲ ನಡಹಳ್ಳಿ ಸ್ಪಷ್ಟನೆ ನೀಡಿದ್ದಾರೆ.
‘ಪತ್ರಕರ್ತರಿಗೆ ರಕ್ಷಣೆ ನೀಡಬೇಕು ಹಾಗೂ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು’ ಎಂದು ಕೆಲ ಪತ್ರಕರ್ತರು ತಹಶೀಲ್ದಾರ್‌ಗೆ ಮನವಿ ಮಾಡಿರುವುದು ದುರುದ್ದೇಶದಿಂದ ಕೂಡಿದ್ದು, ಖಂಡಿಸುವುದಾಗಿ ತಿಳಿಸಿದ್ದಾರೆ.
‘ನನ್ನ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ನಾನು ಎಲ್ಲ ಪತ್ರಕರ್ತರನ್ನು ಸಮಾನ ಗೌರವದಿಂದ ಕಾಣುತ್ತಿದ್ದೇನೆ. ನನ್ನ ಮತಕ್ಷೇತ್ರದಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಂಡಿರುವ, ನಿಷ್ಪಕ್ಷಪಾತದಿಂದ ಕೆಲಸ ಮಾಡುವ ಎಲ್ಲ ಪತ್ರಕರ್ತರು ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ವಾತಾವರಣ ಇದೆ’ ಎಂದು ಅವರು ತಿಳಿಸಿದ್ದಾರೆ.
‘ಕೃಷ್ಣಾ ನದಿ ತೀರದ ತಂಗಡಗಿ, ಕುಂಚಗನೂರ, ಕಮಲದಿನ್ನಿ, ಗಂಗೂರ ಗ್ರಾಮಗಳಿಗೆ ರಸ್ತೆ, ಚರಂಡಿ ನಿರ್ಮಾಣ ಕುರಿತು ಮಾಡಿರುವ ವರದಿ ಸಂಪೂರ್ಣ ಸುಳ್ಳಿನಿಂದ ಕೂಡಿದ್ದಾಗಿವೆ. ವರದಿ ಮಾಡುವಾಗ ನನ್ನ ಪ್ರತಿಕ್ರಿಯೆ ಕೇಳಿದ್ದರೆ ಸತ್ಯ ಏನು ಅನ್ನೋದನ್ನು ತಿಳಿಸುತ್ತಿದ್ದೆ. ಆದರೆ, ಅವರು ಹಾಗೆ ಮಾಡದೆ ಏಕಪಕ್ಷೀಯವಾಗಿ ವರದಿ ಮಾಡಿ ನನ್ನ ತೇಜೋವಧೆಗೆ ಯತ್ನಿಸಿರುವುದನ್ನು ನಾನು ಖಂಡಿಸುತ್ತೇನೆ’ ಎಂದು ಹೇಳಿದ್ದಾರೆ.
‘ಇದು ನನ್ನ ವಿರುದ್ಧ ಎತ್ತಿ ಕಟ್ಟುವ ಹುನ್ನಾರ ಎಂದು ನಾನು ಭಾವಿಸಿದ್ದೇನೆ. ನಾನು ನನ್ನ ರಾಜಕೀಯ ಜೀವನದಲ್ಲಿ ಯಾವ ಪತ್ರಕರ್ತರಿಗೂ ಜೀವ ಬೆದರಿಕೆ ಹಾಕಿದ ದಾಖಲೆ ಇಲ್ಲ. ನಾನು ಎಲ್ಲ ಪತ್ರಕರ್ತರನ್ನು ಅತ್ಯಂತ ಗೌರವದಿಂದ ಕಾಣುತ್ತೇನೆ‘ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.