ವಿಜಯಪುರ: ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗಾಗಿ, ಭ್ರಷ್ಟ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಡಿಎಸ್‌ಎಸ್) ರಾಜ್ಯ ಸಂಚಾಲಕ ಡಿ.ಜಿ.ಸಾಗರ್ ಘೋಷಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ, ದುರ್ಬಲ ವರ್ಗಗಳ, ಹಿಂದುಳಿದವರ ಮತ್ತು ಅಲ್ಪ ಸಂಖ್ಯಾತರ ಹಿತ ಕಾಪಾಡುವ ಹಾಗೂ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣೆಯಲ್ಲಿ ಡಿಎಸ್‌ಎಸ್ ಕೆಲಸ ಮಾಡಲಿದೆ ಎಂದು ಹೇಳಿದರು.
ನಿರಂಕುಶ ಸರ್ವಾಧಿಕಾರದತ್ತ ಸಾಗಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಸಂವಿಧಾನಿಕ ಸಂಸ್ಥೆಗಳಾದ ಐ.ಟಿ, ಇ.ಡಿ, ಸಿ.ಬಿ.ಐ ಮತ್ತು ಚುನಾವಣಾ ಆಯೋಗವನ್ನು ಹಂತ ಹಂತವಾಗಿ ನಿಷ್ಕ್ರಿಯಗೊಳಿಸಿ, ಅವುಗಳ ಸ್ವಾಯತ್ತತೆಯನ್ನು ನಿರಾರ್ಥಗೊಳಿಸಿ, ಅವುಗಳ ಮೇಲೆ ಹಿಡಿತ ಸಾಧಿಸಲು ಹೊರಟಿದೆ ಎಂದು ಆರೋಪಿಸಿದರು.
‘ಅಂಬೇಡ್ಕರ್ ಬಂದರೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಕೇವಲ ಚುನಾವಣೆ ಗಿಮಿಕ್. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನವನ್ನು ಬದಲಾಯಿಸಿ, ಮನುವಾದಿ ಸಂವಿಧಾನ ಜಾರಿ ಮಾಡುವುದು ಬಿಜೆಪಿ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಮೋದಿ ಸರ್ಕಾರದಲ್ಲಿ ದಲಿತರ ಮೇಲಿನ ದೌರ್ಜನ್ಯ ಮುಗಿಲು ಮುಟ್ಟಿದೆ. 2022ರ ಎನ್‌ಸಿಆರ್‌ಬಿ ವರದಿ ಪ್ರಕಾರ ಪ್ರತಿ ಆರು ನಿಮಿಷಕ್ಕೊಂದರಂತೆ ದಲಿತರ ಮೇಲೆ ಒಂದು ದೌರ್ಜನ್ಯವಾಗುತ್ತಿದೆ. ಪ್ರತಿ ದಿನ 14 ಅತ್ಯಾಚಾರ ನಡೆಯುತ್ತಿದೆ. ಅದರಲ್ಲಿ ನಾಲ್ಕು ಅತ್ಯಾಚಾರಗಳು ದಲಿತ ಬಾಲಕಿಯರ ಮೇಲೆ ನಡೆಯುತ್ತಿದೆ. ಪ್ರತಿ ದಿನ ಮೂರು ದಲಿತರನ್ನು ಕೊಲ್ಲಲಾಗುತ್ತಿದೆ. ಇನ್ನು ಥಳಿತ, ಕೊಲೆಗೆ ಯತ್ನ, ಅವಮಾನ, ಜಾತಿ ನಿಂದನೆ, ಬಹಿಷ್ಕಾರಗಳಿಗೆ ಲೆಕ್ಕವೇ ಇಲ್ಲ ಎಂದು ಹೇಳಿದರು.
ಮೋದಿ ಅವರ 10 ವರ್ಷಗಳ ಆಡಳಿತವು ದಲಿತರಿಗೆ ನರಕವನ್ನೇ ತೋರಿಸುತ್ತಿರುವಾಗ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ಸಿಗಲು ಸಾಧ್ಯವೇ? ದಲಿತ ವಿರೋಧಿಯಾದ ಬಿಜೆಪಿಗೆ ಮತ ನೀಡದೇ ತಿರಸ್ಕರಿಸಬೇಕು ಎಂದು ಅವರು ಮನವಿ ಮಾಡಿದರು.
ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಒಳಮೀಸಲಾತಿ ವರ್ಗೀಕರಣ ಮಾಡಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದು ನಿಜವಾದರೆ ಕೇಂದ್ರ ಸರ್ಕಾರ ಒಳಮೀಸಲಾತಿ ಜಾರಿ ಏಕೆ ಮಾಡಲಿಲ್ಲ? ಇದು ಕೇವಲ ಬಿಜೆಪಿ ಚುನಾವಣೆ ತಂತ್ರವಾಗಿದೆ ಎಂದು ಆರೋಪಿಸಿದರು.
ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯದ ಪಾಲಿನ ತೆರಿಗೆ ನೀಡದೇ ಅನ್ಯಾಯ ಮಾಡಿದೆ, ಬರಗಾಲವಿದ್ದರೂ ಬರಪರಿಹಾರ ನೀಡಿಲ್ಲ ಎಂದು ದೂರಿದರು.
ಮೀಸಲಾತಿಯಲ್ಲೂ ಅನ್ಯಾಯ ಮಾಡಲಾಗುತ್ತಿದೆ, ಇಡೀ ಮೀಸಲಾತಿಯನ್ನೇ ರದ್ದು ಮಾಡಲು ಬಿಜೆಪಿ ಹುನ್ನಾರ ನಡೆಸಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಭರವಸೆ ನೀಡಿ 10 ವರ್ಷವಾದರೂ ಇದುವರೆಗೂ ನೇಮಕಾತಿ ಮಾಡಿಲ್ಲ ಎಂದು ಹೇಳಿದರು.
2024ರ ಲೋಕಸಭಾ ಚುನಾವಣೆ ಒಂದು ಐತಿಹಾಸಿಕ ಕವಲು ದಾರಿಗೆ ಭಾರತೀಯರನ್ನು ನಿಲ್ಲಿಸಿದೆ, ಕೇವಲ ಹಿಡಿಯಷ್ಟಿರುವ ಆರ್‌ಎಸ್‌ಎಸ್ ದೇಶದ ಮಾಧ್ಯಮ, ನ್ಯಾಯಾಂಗ, ಕಾರ್ಯಾಂಗವನ್ನು ಆಕ್ರಮಿಸಿಕೊಂಡು 140 ಕೋಟಿ ಭಾರತೀಯರನ್ನು ತಮ್ಮ ಒತ್ತೆಯಾಳುಗಳನ್ನಾಗಿ ಮಾಡಿಕೊಳ್ಳಲು ಹುನ್ನಾರ ನಡೆಸಿದೆ ಎಂದರು.
ದಲಿತರಿಗೆ ಮೀಸಲಾಗಿದ್ದ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ರಾಜ್ಯ ಸರ್ಕಾರ ಬಳಸಿಕೊಂಡಿರುವುದಕ್ಕೆ ನಮ್ಮ ವಿರೋಧವಿಲ್ಲ. ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವರ ಜೊತೆ ಈ ಸಂಬಂಧ ಚರ್ಚೆ ಮಾಡಿದ್ದೇವೆ. ಸರ್ಕಾರ ಮುಂದಿನ ದಿನಗಳಲ್ಲಿ ಈ ಅನುದಾನವನ್ನು ಮರಳಿ ದಲಿತ ಸಮುದಾಯದ ಏಳಿಗೆಗೆ ಬಳಸುವ ವಿಶ್ವಾಸ ಇದೆ ಎಂದು ಸಮರ್ಥಿಸಿಕೊಂಡರು.
ಡಾ.ಬಿ.ಆರ್.ಅಂಬೇಡ್ಕರ್ ಸಾವಿನ ಬಳಿಕ ಅವರ ಅಂತ್ಯ ಸಂಸ್ಕಾರಕ್ಕೆ ಭೂಮಿ ನೀಡದೇ ಅನ್ಯಾಯ ಮಾಡಿರುವುದಕ್ಕೆ ಅಂದು ಕಾಂಗ್ರೆಸ್‌ನಲ್ಲಿ ಪ್ರಾಬಲ್ಯವಾಗಿದ್ದ ಮನುವಾದಿಗಳು ಕಾರಣವೇ ಹೊರತು, ಪ್ರಧಾನಿ ನೆಹರೂ, ಗೃಹ ಸಚಿವ ಸರ್ಧಾರ್ ವಲ್ಲಭಬಾಯ್ ಪಟೇಲ್ ಸೇರಿದಂತೆ ಮತ್ಯಾರು ಅಲ್ಲ ಎಂದು ಹೇಳಿದರು.
ಡಿಎಸ್‌ಎಸ್ ಮುಖಂಡರಾದ ಸಿದ್ದು ರಾಯಣ್ಣನವರ, ವೈ.ಸಿ.ಮಯೂರ, ಎಸ್.ಪಿ.ಸುಳ್ಳದ, ರಮೇಶ ಧರಣಾಕರ, ಮಹಾಂತೇಶ ಸಾಸಾಬಾಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.