ADVERTISEMENT

ವಿಜಯಪುರಕ್ಕೆ ನಾಳೆ ರಾಹುಲ್ ಗಾಂಧಿ: ಕಾಂಗ್ರೆಸ್‌ನಲ್ಲಿ ಗರಿಗೆದರಿದ ಹುಮ್ಮಸ್ಸು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 12:50 IST
Last Updated 25 ಏಪ್ರಿಲ್ 2024, 12:50 IST
   

ವಿಜಯಪುರ: ಲೋಕಸಭೆ ಚುನಾವಣೆ ಪ್ರಚಾರಾರ್ಥ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಏಪ್ರಿಲ್ 26ರಂದು ಬೆಳಿಗ್ಗೆ 11ಕ್ಕೆ ವಿಜಯಪುರಕ್ಕೆ ಆಗಮಿಸಲಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ನಗರದ ಸೋಲಾಪುರ ರಸ್ತೆಯಲ್ಲಿರುವ ಬಿಎಲ್‌ಡಿಇ ಹೊಸ ಕ್ಯಾಂಪಸ್‌ನಲ್ಲಿ ನಡೆಯಲಿರುವ ಸಮಾವೇಶದ ಸಿದ್ಧತೆಯನ್ನು ಗುರುವಾರ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸಮಾವೇಶವನ್ನು ಐತಿಹಾಸಿಕಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ರಾಹುಲ್‌ ಗಾಂಧಿ ಅವರು ದೆಹಲಿಯಿಂದ ಕಲಬುರ್ಗಿಗೆಗೆ ವಿಶೇಷ ವಿಮಾನದಲ್ಲಿ ಏ.26ರಂದು ಬೆಳಿಗ್ಗೆ ಆಗಮಿಸಲಿದ್ದು, ಅಲ್ಲಿಂದ ವಿಜಯಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ವಿಜಯಪುರಕ್ಕೆ ಬರಲಿದ್ದಾರೆ ಎಂದರು.

ADVERTISEMENT

ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲ, ಕೆ.ಸಿ.ವೇಣುಗೋಪಾಲ ಹಾಗೂ ಸಚಿವರು, ಶಾಸಕರು, ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸಮಾವೇಶದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶಕ್ಕಾಗಿ ಬೃಹತ್‌ ಪೆಂಡಾಲ್‌ ಹಾಕಲಾಗಿದೆ. ಕೂರಲು ಆಸನದ ವ್ಯವಸ್ಥೆ, ಕುಡಿಯಲು ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾವೇಶಕ್ಕೆ ಆಗಮಿಸಬೇಕು ಎಂದು ಅವರು ಮನವಿ ಮಾಡಿದರು.  

ಘನತೆ ಮರೆತ ಮಾತು

ಮಂಗಳಸೂತ್ರ, ತಾಳಿಸರ ಬಗ್ಗೆ ಮಾತನಾಡುವುದು ಮೋದಿ ಅವರಿಗೆ ಶೋಭೆ ತರುವುದಿಲ್ಲ, ಮೋದಿ ಅವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು. ಬಹುಷ್ಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಇಂತಹ ವಿಷಯವನ್ನು ಯಾರೂ ಮಾತನಾಡುವುದಿಲ್ಲ. ಮಂಗಳಸೂತ್ರದ ಪಾವಿತ್ರ್ಯಕ್ಕೆ ದಕ್ಕೆ ತರುವಂತ ಮಾತು ಆಡುವುದು ಸರಿಯಲ್ಲ ಎಂದು ಹೇಳಿದರು.

ದೇಶದಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಸುಮಾರು 60 ವರ್ಷ ಕಾಂಗ್ರೆಸ್‌ ಆಡಳಿತ ನಡೆಸಿದೆ. ಯಾರ ಮೀಸಲಾತಿ ಹಕ್ಕನ್ನು ಕಿತ್ತು ಇನ್ನೊಬ್ಬರಿಗೆ ಹಂಚಿಕೆ ಮಾಡಿಲ್ಲ. ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತು ಬೇರೆಯವರಿಗೆ ನೀಡಿಲ್ಲ. ಮೀಸಲಾತಿ ಜಾರಿಗೆ ತಂದವರು, ಜಾರಿಗೊಳಿಸಿದವರು ಕಾಂಗ್ರೆಸ್‌ನವರು ಎಂಬುದನ್ನು ಪ್ರಧಾನಿ ಮೋದಿ ಅವರು ಅರಿಯಬೇಕು ಎಂದರು.

ಯುವಕರು ಹತಾಷೆ:

ಅಚ್ಛೆ ದಿನ್‌ ಬಂದಿಲ್ಲ, ₹7500 ಕೋಟಿ ಮೊತ್ತದ ಚುನಾವಣಾ ಬಾಂಡ್‌ ಹಗರಣ ಬಿಜೆಪಿ ಮಾಡಿದೆ, ಯುವಕರು ಉದ್ಯೋಗ ಇಲ್ಲದೇ ಹತಾಷೆಯಾಗಿದ್ದಾರೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್‌, ಮಹಾಂತೇಶ ಬಿರಾದಾರ, ಡಾ.ಬಾಬು ರಾಜೇಂದ್ರ ನಾಯಿಕ, ಫಯಾಜ್‌ ಕಲಾದಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.