ವಿಜಯಪುರ: ದೇಶದ ವಿವಿಧ ರಾಜ್ಯಗಳು ಸೇರಿದಂತೆ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜಾನುವಾರುಗಳ ಸಾವು–ನೋವಿಗೆ ಕಾರಣವಾಗಿರುವ ಮಾರಕ ಚರ್ಮಗಂಟು ರೋಗ (ಲಂಪಿ ಸ್ಕಿನ್ ಡಿಸೀಸ್) ಜಿಲ್ಲೆಯಲ್ಲೂ ನಿಧಾನವಾಗಿ ವ್ಯಾಪಿಸತೊಡಗಿದೆ.
ಜಾನುವಾರುಗಳ ಜೀವಕ್ಕೆ ಕುತ್ತು ತಂದಿರುವ ಚರ್ಮಗಂಟು ರೋಗ ಜಿಲ್ಲೆಯ ರೈತ ಸಮುದಾಯ ಅದರಲ್ಲೂ ಹೈನೋದ್ಯಮಕ್ಕೆ ಸಂಕಷ್ಟ ತಂದೊಡ್ಡುವ ಲಕ್ಷಣ ಕಂಡುಬಂದಿದೆ. ರೈತ ಸಮುದಾಯ ಅಗತ್ಯ ಮುನ್ನೆಚ್ಚರಿಕೆ ವಹಿಸಿದರೆ ಮಾತ್ರ ತಮ್ಮ ಅಮೂಲ್ಯ ಗೋ ಸಂಪತ್ತನ್ನು ರಕ್ಷಿಸಿಕೊಳ್ಳಲು ಸಾಧ್ಯ. ಚರ್ಮಗಂಟು ರೋಗದಿಂದ ಜಾನುವಾರುಗಳನ್ನು ರಕ್ಷಿಸಿಕೊಳ್ಳುವುದು ರೈತ ಸಮುದಾಯಕ್ಕೆ ದೊಡ್ಡ ಸವಾಲಾಗಿದೆ.
52 ಜಾನುವಾರುಗಳಿಗೆ ತಗುಲಿದ ರೋಗ: ವಿಜಯಪುರ ಜಿಲ್ಲೆಯಲ್ಲಿ ಸದ್ಯ ಬಬಲೇಶ್ವರ ತಾಲ್ಲೂಕಿನಲ್ಲಿ 17 ದನ, 4 ಎಮ್ಮೆ, ತಿಕೋಟಾ ತಾಲ್ಲೂಕಿನಲ್ಲಿ 3 ದನ, ಇಂಡಿ 2 ದನ, ದೇವರ ಹಿಪ್ಪರಗಿ 22 ದನ, ಬಸವನ ಬಾಗೇವಾಡಿ 2 ದನ, 1 ಎಮ್ಮೆ, ಮುದ್ದೇಬಿಹಾಳ 1 ದನ ಸೇರಿದಂತೆ ಒಟ್ಟು 47 ದನಗಳು ಹಾಗೂ 5 ಎಮ್ಮೆಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆಎಂದು ಜಿಲ್ಲಾ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಅಶೋಕ ಎಸ್. ಗೊಣಸಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
ಚರ್ಮಗಂಟು ರೋಗ ಕಾಣಿಸಿಕೊಂಡಿರುವ 52 ಜಾನುವಾರುಗಳ ಪೈಕಿ ಐದು ಜಾನುವಾರುಗಳು ಈಗಾಗಲೇ ರೋಗಕ್ಕೆ ಬಲಿಯಾಗಿವೆ. 11 ಜಾನುವಾರುಗಳು ಚಿಕಿತ್ಸೆಯಿಂದ ಗುಣಮುಖವಾಗಿವೆ ಎಂದು ಅವರು ತಿಳಿಸಿದರು.
ಗೋಟ್‌ಪಾಕ್ಸ್ ಲಸಿಕೆ: ಚರ್ಮಗಂಟು ರೋಗಕ್ಕೆ ಸದ್ಯ ನಿರ್ಧಿಷ್ಟ ಚಿಕಿತ್ಸೆ ಇಲ್ಲ.ಸೊಳ್ಳೆ, ಉಣ್ಣೆ, ನೊಣ, ಕುದುರೆನೊಣ ಇನ್ನಿತರ ಕೀಟಗಳಿಂದ ಹರಡುವ ಈ ಅಂಟುರೋಗ ಜಾನುವಾರುಗಳಿಗೆ ಬಂದರೆ ವಿಪರೀತ ಜ್ವರ, ಕಣ್ಣಲ್ಲಿ ನೀರು,ಮೈಯಲ್ಲಿ ಗಂಟು ಉಂಟಾಗುತ್ತವೆ. ಈ ರೋಗವನ್ನು ನಿಯಂತ್ರಿಸಲು ಲಸಿಕೆ ಕಂಡು ಹಿಡಿಯಲು ಸಂಶೋಧನೆ ನಡೆದಿದೆ. ಶೀಪ್ ಪಾಕ್ಸ್(ಕುರಿ ಜ್ವರ), ಗೋಟ್ ಪಾಕ್ಸ್‌ಗೆ (ಮೇಕೆ ಜ್ವರ) ಕಾರಣವಾಗುವ ವೈರಾಣುವೇ ಈ ರೋಗಕ್ಕೂ ಕಾರಣ ಎಂಬುದನ್ನು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ದೃಢಪಡಿಸಿದ್ದರಿಂದ ಗೋಟ್‌ಪಾಕ್ಸ್ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ ಜಿಲ್ಲೆಗೆ ಸರ್ಕಾರದಿಂದ 10 ಸಾವಿರ ಲಸಿಕೆ ಪೂರೈಕೆಯಾಗಿದೆ. ಜೊತೆಗೆ ಖಾಸಗಿ ಸಂಸ್ಥೆಯಿಂದ 53,300 ಗೋಟ್ ಪಾಕ್ಸ್ ಲಸಿಕೆಯನ್ನು ಖರೀದಿಸಲಾಗಿದೆ. ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಹಳ್ಳಿಗಳಲ್ಲಿ ಹಾಗೂ ಜಿಲ್ಲೆಯ ಮಹಾರಾಷ್ಟ್ರ ಗಡಿ ಭಾಗದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆಯಾಗಿ ಈಗಾಗಲೇ 42,610 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎನ್ನುತ್ತಾರೆ ಅವರು.
ಜಿಲ್ಲೆಯಲ್ಲಿ ನಿಯಂತ್ರಣ: ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯಪುರ ಜಿಲ್ಲೆಯಲ್ಲಿ ಚರ್ಮಗಂಟು ರೋಗ ನಿಯಂತ್ರಣದಲ್ಲಿದೆ. ಸಾವು–ನೋವು ಕಡಿಮೆ ಇದೆ ಎಂದು ಗೊಣಸಗಿ ತಿಳಿಸಿದರು.
ರಾಜ್ಯ ಸರ್ಕಾರವು ರೋಗ ಹರಡುವುದನ್ನು ತಡೆಯಲು ಜಾನುವಾರು ಸಂತೆ, ಜಾತ್ರೆ, ಜಾನುವಾರು ಸಾಗಾಟವನ್ನು ನಿಷೇಧಿಸಿ ಆದೇಶ ಹೊರಡಿಸುವ ಮುನ್ನವೇ ವಿಜಯಪುರ ಜಿಲ್ಲೆಯಲ್ಲಿ ಜಾನುವಾರು ಸಂತೆ, ಜಾತ್ರೆ, ಸಾಗಾಟವನ್ನು ಜಿಲ್ಲಾಧಿಕಾರಿ ಅವರು ರದ್ದುಗೊಳಿಸಿದ ಪರಿಣಾಮ ಚರ್ಮಗಂಟು ರೋಗ ನಿಯಂತ್ರಣದಲ್ಲಿದೆ ಎನ್ನುತ್ತಾರೆ ಅವರು.
ಆತಂಕ ಬೇಡ: ಚರ್ಮಗಂಟು ರೋಗ ಬಂದಿರುವ ಹಿನ್ನೆಲೆಯಲ್ಲಿ ಹಾಲು, ಮೊಸರು, ತುಪ್ಪ ಬಳಸುವುದರಿಂದ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಬಗ್ಗೆ ಸುಳ್ಳು ಸುದ್ದಿಗಳು ಹರಡುತ್ತಿದ್ದು, ಜನರು ಇದಕ್ಕೆ ಕಿವಿಗೊಡುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
****
ರೈತರಿಗೆ ಸಲಹೆಗಳು
*ಚರ್ಮಗಂಟು ರೋಗ ಕಾಣಿಸಿಕೊಂಡ ರಾಸುಗಳನ್ನು ಪ್ರತ್ಯೇಕವಾಗಿಡುವುದು
*ಹಾಲನ್ನು ಹಿಂಡಿದ ನಂತರ ಕುದಿಸಿಯೇ ಬಳಸಬೇಕು
*ಕರುವನ್ನು ನೇರವಾಗಿ ಹಾಲು ಕುಡಿಯಲು ಬಿಡದೆ, ಹಿಂಡಿದ ಹಾಲನ್ನು ನೀಡುವುದು
*ಶುಚಿತ್ವ ಕಾಪಾಡಬೇಕು
*ರಾಸುಗಳ ಮೈಮೇಲೆ ಏಳುವ ಗುಳ್ಳೆಗಳು ಬಿದ್ದುಹೋದ ನಂತರ ಆ ಭಾಗದಲ್ಲಿ ನಂಜಾಗದಂತೆ ತಡೆಯಲು ಆ್ಯಂಟಿಸೆಪ್ಟಿಕ್ ಮುಲಾಮು ಅಥವಾ ಬೇವಿನೆಣ್ಣೆ ಹಚ್ಚಬೇಕು
*ಗಾಯದ ಮೇಲೆ ಸೊಳ್ಳೆ, ನೊಣ ಕೂರದಂತೆ ಕ್ರಮ ಕೈಗೊಳ್ಳಬೇಕು
*ಬಿಸಿನೀರಿಗೆ ಬೆಲ್ಲ, ಉಪ್ಪು ಸೇರಿಸಿ ಕುಡಿಸಬೇಕು
*ಒಣಮೇವು, ಪೌಷ್ಟಿಕ ಹಿಂಡಿ ತಿನ್ನಲು ನೀಡುವುದು
*ರೋಗ ಬಾಧಿತ ರಾಸುಗಳ ಆರೈಕೆ ಮಾಡುವವರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು
*ರೋಗದಿಂದ ರಾಸು ಮೃತಪಟ್ಟಲ್ಲಿ ಕಳೇಬರವನ್ನು ಬಿಸಾಡದೆ, ಗುಂಡಿ ತೋಡಿ ಹೂಳಬೇಕು
ಚರ್ಮಗಂಟು ರೋಗ ಲಕ್ಷಣ
*104 ಡಿಗ್ರಿ ಸೆಲ್ಸಿಯಸ್ ಮೀರಿದ ಜ್ವರ
*ಕಣ್ಣಿನಿಂದ ನೀರು ಬಸಿಯುವುದು
*ಜ್ವರ ಬಾಧಿಸಿದ ಮೂರ್ನಾಲ್ಕು ದಿನಗಳಲ್ಲಿ ಮೈಮೇಲೆ ಗುಳ್ಳೆ/ಗಂಟುಗಳಾಗುವುದು
*ಮೇವು /ಆಹಾರ ತಿನ್ನದಿರುವುದು
*ಕಾಲು, ಎದೆ ಭಾಗದಲ್ಲಿ ಬಾವು ಬರುವುದು
*ರಾಸುಗಳಲ್ಲಿ ನಿಶ್ಶಕ್ತಿಯುಂಟಾಗಿ ದೈಹಿಕವಾಗಿ ಸೊರಗುವುದು
****
ಜಿಲ್ಲೆಯಲ್ಲಿ ಸದ್ಯ ಲಸಿಕೆ ಕೊರತೆ ಇಲ್ಲ. ಸಿಬ್ಬಂದಿಯೇ ಹಳ್ಳಿ, ಹಳ್ಳಿಗಳಿಗೆ ತೆರಳಿ ಜಾನುವಾರುಗಳಿಗೆ ಲಸಿಕೆ ಹಾಕುತ್ತಿದ್ದೇವೆ. ಮುನ್ನೆಚ್ಚರಿಕೆ ಕ್ರಮ ವಹಿಸಿಲು ರೈತರಿಗೆ ಸಲಹೆ, ಸೂಚನೆ ನೀಡಲಾಗಿದೆ
–ಅಶೋಕ ಎಸ್. ಗೊಣಸಗಿ, ಉಪ ನಿರ್ದೇಶಕ, ಜಿಲ್ಲಾ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ವಿಜಯಪುರ
****
ಪ್ರಜಾವಾಣಿ ತಂಡ: ಬಸವರಾಜ್ ಸಂಪಳ್ಳಿ, ಶಾಂತೂ ಹಿರೇಮಠ, ಎ.ಸಿ.ಪಾಟೀಲ, ಬಸವರಾಜ್ ಉಳ್ಳಾಗಡ್ಡಿ, ಪ್ರಕಾಶ ಮಸಬಿನಾಳ, ಚಂದ್ರಶೇಖರ ಕೋಳೇಕರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.