ವಿಜಯಪುರ: ನೀಟ್ ಪರೀಕ್ಷೆ ಉತ್ತೀರ್ಣರಾಗಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟ್ ಪಡೆದರೂ ಶುಲ್ಕ ಭರಿಸಲಾಗದೆ ಹಣದ ಸಮಸ್ಯೆ ಎದುರಿಸುತ್ತಿದ್ದ ಐದು ಜನ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೋರ್ಸಿಗೆ ಅಗತ್ಯವಿರುವ ಸಂಪೂರ್ಣ ಆರ್ಥಿಕ ನೆರವು ನೀಡಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮುಂದಾಗಿದ್ದಾರೆ.
ವಿಜಯಪುರ ನಗರದಲ್ಲಿರುವ ಗೃಹ ಕಚೇರಿಯಲ್ಲಿ ಸೋಮವಾರ ತಿಕೋಟಾ ತಾಲ್ಲೂಕಿನ ಬಾಬಾನಗರದ ವಿಶಾಲ ರಾಯಗೊಂಡ ಕೋರೆಗಾಂವ, ಅರಕೇರಿಯ ಕರಣ ಪಂಡಿತ ಸಿಂಧೆ ಮತ್ತು ಯಶವಂತ ಮಾರುತಿ ಮೋಹಿತೆ, ಬಬಲೇಶ್ವರ ತಾಲ್ಲೂಕಿನ ಕಾರಜೋಳ ತಾಂಡಾದ ಅಜೀತ್ ಪರಶುರಾಮ ರಾಠೋಡ ಹಾಗೂ ಕಂಬಾಗಿಯ ರಾಜಶ್ರೀ ಮಲ್ಲಿಕಾರ್ಜುನ ಮಠ ಅವರಿಗೆ ಸಚಿವರು ಮೊದಲ ಕಂತಿನಲ್ಲಿ ಎಂ.ಬಿ.ಬಿ.ಎಸ್. ಕೋರ್ಸಿನ ಮೊದಲ ವರ್ಷದ ಬೋಧನೆ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಊಟದ ಶುಲ್ಕಕ್ಕೆ ಅಗತ್ಯವಾಗಿರುವ ಹಣದ ಚೆಕ್ ವಿತರಿಸಿದರು.
ಬಾಬಾನಗರದ ವಿದ್ಯಾರ್ಥಿ ವಿಶಾಲ ಕೋರೆಗಾಂವ ನೀಟ್ ಪರೀಕ್ಷೆಯಲ್ಲಿ 72,357ನೇ ರ್‍ಯಾಂಕ್ ಪಡೆದು, ಚಿತ್ರದುರ್ಗ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದಿದ್ದಾನೆ. ಈ ವಿದ್ಯಾರ್ಥಿಗೆ ಮೊದಲ ಕಂತಿನಲ್ಲಿ ₹1,54,600, ಅರಕೇರಿಯ ವಿದ್ಯಾರ್ಥಿ ಕರಣ ಸಿಂಧೆ ನೀಟ್ ಪರೀಕ್ಷೆಯಲ್ಲಿ 75,075ನೇ ರ್‍ಯಾಂಕ್ ಪಡೆದಿದ್ದು, ಹಾವೇರಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದಾರೆ. ಈ ವಿದ್ಯಾರ್ಥಿಗೆ ಮೊದಲ ಕಂತಿನಲ್ಲಿ ₹1,91,250 ಚೆಕ್ ನ್ನು ಸಚಿವರು ವಿತರಿಸಿದರು.
ಅರಕೇರಿಯ ಮತ್ತೋರ್ವ ವಿದ್ಯಾರ್ಥಿ ಯಶವಂತ ಮೋಹಿತೆ ನೀಟ್ ಪರೀಕ್ಷೆಯಲ್ಲಿ 92,618ನೇ ರ್‍ಯಾಂಕ್ ಪಡೆದಿದ್ದು, ಶಿವಮೊಗ್ಗ ಮೆಡಿಕಲ್ ಕಾಲೇಜಿಗೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗೆ ಮೊದಲ ಕಂತಿನಲ್ಲಿ ₹3,09,321 ಮೌಲ್ಯದ ಚೆಕ್ ವಿತರಿಸಿದರು, ಬಬಲೇಶ್ವರ ತಾಲ್ಲೂಕಿನ ಕಾರಜೊಳ ತಾಂಡಾದ ಅಜೀತ ರಾಠೋಡ ನೀಟ್ ಪರೀಕ್ಷೆಯಲ್ಲಿ 1,39,412 ರ್‍ಯಾಂಕ್ ಪಡೆದಿದ್ದು, ಕಾರವಾರ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದಿದ್ದಾರೆ. ಈ ವಿದ್ಯಾರ್ಥಿಗೆ ಮೊದಲ ಕಂತಿನಲ್ಲಿ ₹1,35,000 ಹಣದ ಚೆಕ್ ವಿತರಿಸಿದರು.
ಬಬಲೇಶ್ವರ ತಾಲ್ಲೂಕಿನ ಕಂಬಾಗಿ ಗ್ರಾಮದ ವಿದ್ಯಾರ್ಥಿನಿ ರಾಜಶ್ರೀ ಮಠ ನೀಟ್ ಪರೀಕ್ಷೆಯಲ್ಲಿ 56,262ನೇ ರ್‍ಯಾಂಕ್ ಪಡೆದಿದ್ದು, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದಾಳೆ. ಈ ವಿದ್ಯಾರ್ಥಿಗೆ ಮೊದಲ ಕಂತಿನಲ್ಲಿ 1,56,815 ಚೆಕ್ ನ್ನು ಸಚಿವರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ‘ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಪೋಷಕರು, ಊರು, ಜಿಲ್ಲೆ ಮತ್ತು ರಾಜ್ಯಕ್ಕೆ ಹೆಸರು ತರಬೇಕು. ವೈದ್ಯರಾದ ನಂತರ ಉತ್ತಮ ಸೇವೆ ಸಲ್ಲಿಸಬೇಕು’ ಎಂದು ಹೇಳಿದರು.
ವಿದ್ಯಾರ್ಥಿಗಳ ಪೋಷಕರು ಮಾತನಾಡಿ, ‘ಮಕ್ಕಳ ಭವಿಷ್ಯ ಬಗ್ಗೆ ಚಿಂತೆ ಉಂಟಾಗಿತ್ತು. ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ನಮ್ಮ ಮಕ್ಕಳು ಎಂ.ಬಿ.ಬಿ.ಎಸ್. ಸೀಟು ಪಡೆದರೂ ಹಣವಿಲ್ಲದ ಕಾರಣ ಸಂಕಷ್ಟದಲ್ಲಿದ್ದೇವು. ಇಂಥ ಕಠಿಣ ಪರಿಸ್ಥಿತಿಯಲ್ಲಿ ಸಚಿವ ಎಂ.ಬಿ. ಪಾಟೀಲ ಅವರು ಆಪದ್ಬಾಂಧವರಾಗಿದ್ದಾರೆ’ ಎಂದರು.
ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್.ವಿ ಕುಲಕರ್ಣಿ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತ ಕಚೇರಿಯ ಅಧೀಕ್ಷಕ ಎಸ್.ಎ. ಬಿರಾದಾರ (ಕನ್ನಾಳ) ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.