ವಿಜಯಪುರ: ವಿವಾದಿತ ವ್ಯಕ್ತಿ ಸಾವರ್ಕರ್ ರಥಯಾತ್ರೆ ಬದಲಿಗೆ ನಮ್ಮ ನಾಡಿನ ಸ್ವಾತಂತ್ರ್ಯ ಹೋರಾಟಗಾರರಾದ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಸುರಪುರದ ನಾಯಕರು, ಹಲಗಲಿ ಬೇಡರ ಫೋಟೊದೊಂದಿಗೆ ರಥಯಾತ್ರೆ ಮಾಡಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಅವರು ಬಿಜೆಪಿಗೆ ಸಲಹೆ ನೀಡಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ಬಾರಿ ಬ್ರಿಟಿಷ್ ರಿಗೆ ತಪ್ಪೊಪ್ಪಿಗೆ ಪತ್ರ ಬರೆದ ವಿವಾದಿತ ವ್ಯಕ್ತಿ ಸಾವರ್ಕರ್ ರಥಯಾತ್ರೆ ಮಾಡುವುದಕ್ಕಿಂತ ನಮ್ಮ ನಾಡಿನ ವಿವಾದ ರಹಿತ, ಬ್ರಿಟಿಷ್ ರ ಕ್ಷಮಾಪಣೆ ಯಾಚಿಸದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ರಥಯಾತ್ರೆ ಮಾಡಿದರೆ ನಾವೂ ಪಾಲ್ಗೊಳ್ಳುತ್ತೇವೆ ಎಂದರು.
ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಹಲಗಲಿ ಬೇಡರು, ಸುರಪುರ ನಾಯಕರು ಬಿಜೆಪಿಯವರಿಗೆ ಬೇಡವಾದರೇ? ಇವರ ಗೌರವ ಇದ್ದರೇ ಇಂದೇ ಅವರ ರಥಯಾತ್ರೆಯಲ್ಲಿರುವ ಸಾವರ್ಕರ್ ಫೋಟೊ ಬದಲಿಸಲಿ ಎಂದು ಸವಾಲು ಹಾಕಿದರು.
ಗಣೇಶೋತ್ಸವದಲ್ಲಿ ವಿವಾದಿತ ಸಾವರ್ಕರ್ ಫೋಟೊ ಇಡುವಂತೆ ಬಿಜೆಪಿಯವರು ಕರೆ ನೀಡುವ ಬದಲು ನಮ್ಮವರೇ ಆದ ರಾಯಣ್ಣ, ಚನ್ನಮ್ಮನ ಫೋಟೊ ಇಟ್ಟು ಗೌರವ ಸಲ್ಲಿಸಿ. ವಿವಾದಿತ ವ್ಯಕ್ತಿಯನ್ನು ವೈಭವೀಕರಿಸುವುದು ಶೋಭೆ ತರುವುದಿಲ್ಲ ಎಂದು ಹೇಳಿದರು.
ಸಾವರ್ಕರ್ ರಥಯಾತ್ರೆ ಬದಲಿಗೆ ಕಾಂಗ್ರೆಸ್ ವತಿಯಿಂದ ಕನ್ನಡ ನಾಡಿನ ಸ್ವಾತಂತ್ರ್ಯ ಹೋರಾಟಗಾರಿಗೆ ಸೂಕ್ತ ಗೌರವ ನೀಡುವ ಕಾರ್ಯಕ್ರಮ ಶೀಘ್ರ ಹಾಕಿಕೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.