ADVERTISEMENT

ಫೋನ್ ಕದ್ದಾಲಿಕೆ ‘ಜಗಳ್‌ಬಂದಿ’: ಡಿಕೆಶಿ ಕ್ಷಮೆಯಾಚಿಸಿದ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 1:12 IST
Last Updated 18 ಆಗಸ್ಟ್ 2019, 1:12 IST
   

ವಿಜಯಪುರ: ‘ಫೋನ್ ಕದ್ದಾಲಿಕೆ ವಿಷಯದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ದೃಶ್ಯ ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ. ಹೀಗಾಗಿ ನಾನು ತಪ್ಪು ಹೇಳಿಕೆ ಕೊಟ್ಟೆ’ ಎಂದು ಶಾಸಕ ಎಂ.ಬಿ.ಪಾಟೀಲ ವಿಷಾದ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾತಿರಾಜಕಾರಣ ಮಾಡುತ್ತಿದ್ದಾರೆ ಎಂದು ಡಿಕೆಶಿ ಅವರು ಹಿಂದಿನ ಗೃಹ ಸಚಿವ (ಆರ್.ಅಶೋಕ)ರ ಕುರಿತು ಹೇಳಿಕೆ ಕೊಟ್ಟಿದ್ದಾರೆ. ಡಿಕೆಶಿ ಹಾಗೂ ನನ್ನ ನಡುವೆ ಪ್ರೀತಿ ಜಾಸ್ತಿ. ಆಗಾಗ ನಮ್ಮಿಬ್ಬರ ಮಧ್ಯೆ ಜುಗಲ್‌ಬಂದಿ ನಡೆದಿರುತ್ತದೆ. ಡಿಕೆಶಿ ನನ್ನನ್ನು ಉದ್ದೇಶಿಸಿ ಮಾತನಾಡಿಲ್ಲ. ಮಾಧ್ಯಮಗಳನ್ನು ನಂಬಿಕೊಂಡು ನಾನು ಹೇಳಿಕೆಕೊಟ್ಟೆ. ಹೀಗಾಗಿ ಡಿಕೆಶಿಗೆ ದೂರವಾಣಿ ಕರೆ ಮಾಡಿ ಕ್ಷಮೆಯಾಚಿಸುತ್ತೇನೆ’ ಎಂದು ತಿಳಿಸಿದರು.

‘ಡಿಕೆಶಿ ಅವರು ನಾನು ರಾಜಕೀಯ ಮಾಡುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾಗಿ ವರದಿ ಮಾಡಿ, ಮಾಧ್ಯಮದವರು ನನ್ನ ಪ್ರತಿಕ್ರಿಯೆ ತೆಗೆದುಕೊಂಡರು. ಮಾಧ್ಯಮಗಳು ಮಾಡಿದ್ದು ತಪ್ಪು. ನನ್ನ ಹೇಳಿಕೆಯ ಅವಶ್ಯಕತೆ ಇರಲಿಲ್ಲ. ನನ್ನ ಆಪ್ತ ಕಾರ್ಯದರ್ಶಿ ಭೀಮಾಶಂಕರ, ವಿಶೇಷ ಅಧಿಕಾರಿ ಶಶಿ ಹಿರೇಮಠ ಅವರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಹೀಗಾಗಿ ಉನ್ನತ ಮಟ್ಟದ ತನಿಖೆ ನಡೆಯಬೇಕು. ರಾಜ್ಯದ ಜನತೆಗೆ ಸತ್ಯಾಸತ್ಯತೆ ಗೊತ್ತಾಗಬೇಕು ಎಂದು ಒತ್ತಾಯಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ರಾಷ್ಟ್ರೀಯ ವಿಪತ್ತು ಘೋಷಿಸಿ: ‘ರಾಜ್ಯದಲ್ಲಿ ನೆರೆ ಹಾವಳಿಯಿಂದ ಜನರು ತತ್ತರಿಸಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು’ ಎಂದು ಆಗ್ರಹಿಸಿದರು.

‘ಮಹರಾಷ್ಟ್ರ ಮಾದರಿಯಲ್ಲಿ ಪ್ರವಾಹ ಸಂತ್ರಸ್ತರಿಗೆ ಮೊದಲ ಕಂತಿನಲ್ಲಿ ₹15 ಸಾವಿರ ಪರಿಹಾರ ನೀಡಬೇಕು. ಮನೆಗಳ ನಿರ್ಮಾಣಕ್ಕೆ ₹10 ಲಕ್ಷ ನೆರವು ನೀಡಬೇಕು. ಮನೆ ನಿರ್ಮಿಸಿಕೊಳ್ಳುವವರೆಗೆ ಪ್ರತಿ ತಿಂಗಳು ₹10 ಸಾವಿರ ಬಾಡಿಗೆ ಕೊಡಬೇಕು’ ಎಂದು ಒತ್ತಾಯಿಸಿದರು.

ಬೆಂಗಳೂರು: ‘ಫೋನ್ ಕದ್ದಾಲಿಕೆ ಕುರಿತ ಪ್ರಕರಣದಲ್ಲಿ ಹಿಂದಿನ ಗೃಹ ಸಚಿವ ಎಂ.ಬಿ. ಪಾಟೀಲರ ವಿರುದ್ಧ ಯಾವುದೇ ನಾನು ಯಾವುದೇ ಟೀಕೆ ಮಾಡಿಲ್ಲ’ ಎಂದು ಶಾಸಕ ಡಿ.ಕೆ. ಶಿವಕುಮಾರ್ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಶನಿವಾರ ಮಾತನಾಡಿದ ಅವರು,ತಮ್ಮ ಮತ್ತು ಪಾಟೀಲರ ಮಧ್ಯೆ ಜಗಳ ತಂದಿಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದಕ್ಕೆ ಜಾತಿ ಲೇಪವನ್ನೂ ಹಚ್ಚಲಾಗಿದೆ. ಅಂತಹ ಯತ್ನಗಳಿಂದ ತಮ್ಮಿಬ್ಬರ ಮಧ್ಯದ ಬಾಂಧವ್ಯ ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

‘ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪಾಟೀಲರು ಫೋನ್ ಕದ್ದಾಲಿಕೆ ಮಾಡಿಸಿಲ್ಲ ಎಂದು ಹಿಂದೆಯೇ ಹೇಳಿದ್ದೆ. ಅದಾದ ಬಳಿಕ, ಹಿಂದಿನ ಗೃಹ ಸಚಿವರು ಹಾಗೂ ಬಿಜೆಪಿ ನಾಯಕರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದೆ. ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಆರ್. ಅಶೋಕ್ ಅವರನ್ನು ಉದ್ದೇಶಿಸಿ ಟೀಕೆ ಮಾಡಿದ್ದನ್ನು, ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ’ ಎಂದು ಶಿವಕುಮಾರ್ ಸ್ಪಷ್ಟನೆ ನೀಡಿದರು.‘ರಾಜ್ಯದ ಜನರು ಪ್ರವಾಹದಿಂದ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಬಿಜೆಪಿ ಮುಖಂಡರು ಜನರ ಸಂಕಷ್ಟಕ್ಕೆ ಸ್ಪಂದಿಸುವ ಬದ್ಧತೆ ಮತ್ತು ಇಚ್ಛಾಶಕ್ತಿ ಪ್ರದರ್ಶಿಸಲಿ. ಅದನ್ನು ಬಿಟ್ಟು ಫೋನ್ ಕದ್ದಾಲಿಕೆಯಂತಹ ಸುಳ್ಳು ಆಪಾದನೆಗಳನ್ನು ಮಾಡಿಕೊಂಡು ಜನರ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಇನ್ನಾದರೂ ಬಿಡಲಿ’ ಎಂದು ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.