ನಾಲತವಾಡ: ಪಟ್ಟಣ ಸೇರಿದಂತೆ ಹೋಬಳಿಯ ಬಹುತೇಕ ರೈತರು ತೊಗರಿ ಕುಡಿ ಚಿವುಟಿ, ಹೆಚ್ಚಿನ ಇಳುವರಿ ಪಡೆಯಲು ಯಂತ್ರದ ಮೊರೆ ಹೋಗಿದ್ದಾರೆ. ಈ ಯಂತ್ರವನ್ನು ಪಕ್ಕದ ಯಾದಗಿರಿ, ಕಲಬುರ್ಗಿ, ಬಾಗಲಕೋಟೆ ಜಿಲ್ಲೆಗಳಿಂದ ಖರೀದಿಸಿ ತಂದಿರುವ ಸುಮಾರು 30ಕ್ಕೂ ಅಧಿಕ ರೈತರು ಈಗಾಗಲೇ ಇದರ ಉಪಯೋಗ ಪಡೆದಿದ್ದಾರೆ.
ಪಟ್ಟಣದ ಅಮರೇಶ ಹಟ್ಟಿ ಎಂಬುವವರು ₹3 ಸಾವಿರಕ್ಕೆ ಒಂದು ಕೆ.ಜಿಯಂತೆ ಉತ್ತರ ಪ್ರದೇಶದ ವಿಶಿಷ್ಟವಾದ ಬೃಹದಾಕಾರದಲ್ಲಿ ಬೆಳೆಯುವ ತೊಗರಿ ಬೆಳೆಯ ತಳಿಯ ಬೀಜಗಳನ್ನು ತಂದು ಪ್ರಾಯೋಗಿಕವಾಗಿ ಬೆಳೆಯುತ್ತಿದ್ದಾರೆ. ಆ ಬೆಳೆಯ ಕುಡಿ ಚಿವುಟುವ ಕಾರ್ಯ ಭರದಿಂದ ನಡೆಸಿದ್ದಾರೆ. ಆ ಮೂಲಕ ಬಂಪರ್ ಬೆಳೆಯ ನಿರೀಕ್ಷೆಯಲ್ಲಿ ಇದ್ದಾರೆ.
ಕುಡಿ ಚಿವುಟುವುದು ಅಥವಾ ನಿಪ್ಪಿಂಗ್ ಎಂದು ಕರೆಯಲ್ಪಡುವ ಈ ಕ್ರಿಯೆಯಲ್ಲಿ ತೊಡಗಿರುವ ಮತ್ತೊಬ್ಬ ರೈತ ಚಂದ್ರು ಹಂಪನಗೌಡ್ರ ₹ 1850ಕ್ಕೆ ಕುಡಿ ಕತ್ತರಿಸುವ ಯಂತ್ರ ಖರೀದಿಸಿದ್ದು, ಕೀಟನಾಶಕ ಸಿಂಪರಣೆ ಯಂತ್ರದ ಬ್ಯಾಟರಿ ಅಳವಡಿಸಿಕೊಂಡು ದಿನಕ್ಕೆ ಎರಡು ಎಕರೆಯಂತೆ ತೊಗರಿ ಬೆಳೆಯ ಕುಡಿ ಕಟಾವು ಮಾಡಿದ ಅನುಭವ ಹಂಚಿಕೊಂಡರು.
‘ಶ್ರಮವಹಿಸಿ ಕತ್ತರಿಸಬಲ್ಲ ರೈತರು ದಿನಕ್ಕೆ ನಾಲ್ಕು ಎಕರೆ ಕುಡಿ ಕತ್ತರಿಸಬಲ್ಲರು, ಕುಡಿ ಚಿವುಟುವ ಕ್ರಿಯೆ ದ್ವಿದಳ ಧಾನ್ಯಗಳು ಹಾಗೂ ಇನ್ನಿತರ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಿದ 40 ರಿಂದ 50 ದಿನಗಳಲ್ಲಿ ಬೆಳೆಯ ಮೇಲ್ಭಾಗದ ಕುಡಿಯನ್ನು 5-8 ಸೆಂ.ಮೀ.ನಷ್ಟು ಚಿವುಟುವುದಾಗಿದೆ. ಕುಡಿ ಚಿವುಟುವುದರಿಂದ ಈ ಬೆಳೆಗಳು ಎತ್ತರಕ್ಕೆ ಬೆಳೆಯುವುದು ಕುಂಟಿತವಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಕವಲೊಡೆಯಲು ಸಹಕಾರಿಯಾಗುತ್ತದೆ. ಇದರಿಂದ ಕಾಯಿಗಳ ಸಂಖ್ಯೆ ಹೆಚ್ಚಾಗಿ, ಇಳುವರಿ ಹೆಚ್ಚಾಗುತ್ತದೆ. ಮಾತ್ರವಲ್ಲದೆ ಬೆಳೆ ಎತ್ತರಕ್ಕೆ ಬೆಳೆಯುವುದು ಹತೋಟಿಗೆ ಬರುವುದರಿಂದ ಕೀಟನಾಶಕ, ಔಷಧಿಯನ್ನು ಸಿಂಪಡಿಸಲು ಅನುಕೂಲವಾಗುತ್ತದೆ’ ಎಂದು ಚಂದ್ರು ಹಂಪನಗೌಡ್ರ, ಅಡಿವೆಪ್ಪ ಕೆಂಭಾವಿ, ಶರಣು ಶೆಟ್ಟರ್, ಬಲದಿನ್ನಿ ಗ್ರಾಮದ ರೈತ ಅಮರೇಶ ತೊಂಡಿಹಾಳ ಹೇಳಿದರು.
ದ್ವಿದಳ ಧಾನ್ಯಗಳಿಗೆ ಕುಡಿ ಚಿವುಟಿದ ನಂತರ ಹೂ, ಮೊಗ್ಗು, ಕಾಯಿ ಬಿಡುವುದು ಹೆಚ್ಚಾಗುತ್ತದೆ. ಇದರಿಂದ, ಇಳುವರಿ ಗಣನೀಯವಾಗಿ ಹೆಚ್ಚಾಗುತ್ತದೆ. ಕುಡಿ ಚಿವುಟುವುದರೊಂದಿಗೆ ಬೆಳೆಗೆ ಅತ್ಯವಶ್ಯಕವಿರುವ ಸೂಕ್ಷ್ಮ ಪೋಷಕಾಂಶವನ್ನು ಸಿಂಪಡಿಸುವುದರಿಂದ ಪ್ರತಿ ಹೆಕ್ಟೇರ್‌ಗೆ ಶೇ 40ರಿಂದ ಶೇ 50 ರಷ್ಟು ಹೆಚ್ಚಿನ ಉತ್ಪಾದನೆಯನ್ನು ಕಾಣಬಹುದು’ ಎಂದು ನಾಲತವಾಡ ಕೃಷಿ ಇಲಾಖೆ ಅಧಿಕಾರಿ ವಿಜಯ ಕ್ಷತ್ರಿ ತಿಳಿಸಿದರು.
ಕುಡಿ ಚಿವುಟುವುದರ ಪ್ರಾಮುಖ್ಯತೆ ಕುಡಿ ಚಿವುಟುವ ಯಂತ್ರದ ಬಳಕೆ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಮೊಬೈಲ್ ಫೋನ್ ಮೂಲಕ ಧ್ವನಿ ಸಂದೇಶ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುವೆಚಂದ್ರು ಹಂಪನಗೌಡ್ರ, ಕೃಷಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.