ಬಸವರಾಜ್ ಸಂಪಳ್ಳಿ/ಶಾಂತೂ ಹಿರೇಮಠ
ವಿಜಯಪುರ: ಜಿಲ್ಲೆಯಾದ್ಯಂತ ‘ಮದ್ರಾಸ್ ಐ’ (ಕಂಜಕ್ಟಿವೈಟೀಸ್) ಹೆಸರಿನ ಕಣ್ಣು ಬೇನೆ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಸೋಂಕಿನಿಂದ ಬಳಲುತ್ತಿರುವವರಿಗೆ ಸರಿಯಾದ ಆರೋಗ್ಯ ಸಲಹೆ, ಚಿಕಿತ್ಸೆಗಳು ಲಭಿಸದೇ ಬಹುತೇಕ ಜನರು ಸ್ವಯಂ ಚಿಕಿತ್ಸೆಯ ಮೊರೆ ಹೋಗಿದ್ದಾರೆ. ಔಷಧಾಲಯ(ಮೆಡಿಕಲ್ ಶಾಪ್)ಗಳಲ್ಲಿ ಲಭಿಸುವ ‘ಐ ಡ್ರಾಫ್’ ಅನ್ನು ಕಣ್ಣುಗಳಿಗೆ ತಾವೇ ಬಿಟ್ಟುಕೊಳ್ಳುವ ಮೂಲಕ ಮೂರ್ನಾಲ್ಕು ದಿನಗಳಲ್ಲಿ ಗುಣಮುಖವಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ಸದ್ಯ 3,209 ಜನರಿಗೆ ಮದ್ರಾಸ್ ಐ ಸೋಂಕು ತಗುಲಿರುವುದಾಗಿ ಆರೋಗ್ಯ ಇಲಾಖೆ ಅಂಕಿ–ಅಂಶಗಳಿಂದ ತಿಳಿದುಬಂದಿದೆ. ಅತಿ ಹೆಚ್ಚು ಎಂದರೆ ವಿಜಯಪುರ ನಗರ ವ್ಯಾಪ್ತಿಯಲ್ಲಿ 1,395 ಜನರಿಗೆ ಈ ಸೋಂಕು ಹರಿಡಿದೆ. ಉಳಿದಂತೆ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ 559, ಸಿಂದಗಿ 438, ಮುದ್ದೇಬಿಹಾಳ 419 ಹಾಗೂ ಇಂಡಿ ತಾಲ್ಲೂಕಿನಲ್ಲಿ 398 ಜನರಿಗೆ ಮದ್ರಾಸ್ ಐ ಸೋಂಕು ತಗುಲಿದೆ ಎನ್ನುತ್ತಾರೆ ವಿಜಯಪುರ ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ.ಸಂಪತ್ ಗುಣಾರಿ.
ಶೇ 90ಕ್ಕೂ ಅಧಿಕ ಮಕ್ಕಳಲ್ಲಿ ಈ ಸೋಂಕು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಶಾಲಾ, ಕಾಲೇಜು, ವಸತಿ ನಿಲಯಗಳಲ್ಲಿ ಮದ್ರಾಸ್ ಐ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಅಂತಹ ಮಕ್ಕಳಿಗೆ ಶಾಲೆ, ಕಾಲೇಜಿಗೆ ಬರದಂತೆ ಹಾಗೂ ಮೂರ್ನಾಲ್ಕು ದಿನ ವಿಶ್ರಾಂತಿ ಪಡೆಯುವಂತೆಯೂ ಸೂಚಿಸಲಾಗುತ್ತಿದೆಯಾದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ.
ವಿಜಯಪುರ ಜಿಲ್ಲೆಯಲ್ಲಿ ಸುಮಾರು 3200 ಜನರು ’ಮದ್ರಾಸ್ ಐ’ನಿಂದ ಬಳಲುತ್ತಿರುವುದು ವರದಿಯಾಗಿದೆ. ಈ ಸಾಂಕ್ರಾಮಿಕ ರೋಗದ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆಡಾ.ಸಂಪತ್ ಗುಣಾರಿ, ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ, ವಿಜಯಪುರ
ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರ ಸಂಪರ್ಕದಿಂದ ಮತ್ತೊಬ್ಬರಿಗೆ ವ್ಯಾಪಿಸುತ್ತದೆ. ಮೂರ್ನಾಲ್ಕು ದಿನಗಳ ಕಾಲ ಕಣ್ಣಿಗೆ ತೊಂದರೆ ನೀಡುವ ಈ ರೋಗದ ಬಗ್ಗೆ ಭಯ ಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ವಹಿಸಬೇಕು ಮತ್ತು ವೈದ್ಯರ ಸಲಹೆ ಮೇರೆಗೆ ಸೂಕ್ತ ’ಐ ಡ್ರಾಫ್’ ಬಳಸುವ ಮೂಲಕ ಗುಣಮುಖವಾಗಬಹುದು.
‘ಮದ್ರಾಸ್ ಐ’ ಕಾಯಿಲೆ, ಕಣ್ಣಿನ ಬಿಳಿಭಾಗವನ್ನು ಆವರಿಸುವ ಕಣ್ಣಿನ ಮುಂಭಾಗದಲ್ಲಿ ಪದರದ ಸೋಂಕಿಗೆ (ಉರಿ ಊತ) ಇದಕ್ಕೆ ಕಂಜಕ್ಟವೈಟೀಸ್ ಎನ್ನುತ್ತಾರೆ.
ಇದು ಹೆಚ್ಚಾಗಿ ಮಳೆಗಾಲದ ಆರಂಭ ಹಂತದಲ್ಲಿ ಕಂಡು ಬರುತ್ತದೆ. ಸೋಂಕಿತ ವ್ಯಕ್ತಿಯ ಕಣ್ಣಿನಿಂದ ಬರುವ ದ್ರವದ ಸಂಪರ್ಕದಿಂದ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ.
‘ಮದ್ರಾಸ್ ಐ’ ಬಂದವರ ಕಣ್ಣು ನೋಡುವುದರಿಂದ ಯಾವುದೇ ಕಾರಣಕ್ಕೂ ಬರುವುದಿಲ್ಲ. ಸೋಂಕು ಒಬ್ಬರಿಂದ ಒಬ್ಬರಿಗೆ ಮುಟ್ಟುವುದರಿಂದ ಹರಡುತ್ತದೆ. ಸ್ವಯಂ ಔಷಧೋಪಚಾರ ಬೇಡ. ವೈದ್ಯರ ಸಲಹೆ ಪಡೆಯುವುದು ಸೂಕ್ತಡಾ. ಜ್ಯೋತಿ ಇಜೇರಿ, ಬನಶಂಕರಿ ನೇತ್ರಾಲಯ, ವಿಜಯಪುರ
ಸೋಂಕಿತ ವ್ಯಕ್ತಿಗಳು ಕಪ್ಪು ಕನ್ನಡಕ ಬಳಸುವುದರಿಂದ ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಈ ಕಾಯಿಲೆಯು ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಕಂಡು ಬರುತ್ತದೆ. ವಿಶೇಷವಾಗಿ ಶಾಲಾ ಕಾಲೇಜು, ವಸತಿ ನಿಲಯಗಳಲ್ಲಿ ಮತ್ತು ಅತಿಥಿಗೃಹಗಳಲ್ಲಿ ಈ ಸೋಂಕು ಬೇಗ ಹರಡುವ ಸಾಧ್ಯತೆ ಹೆಚ್ಚು. 3 ರಿಂದ 5 ದಿನಗಳಲ್ಲಿ ಗುಣಮುಖವಾಗುತ್ತದೆ. ಎಲ್ಲ ವಯಸ್ಸಿನವರಲ್ಲಿ ಈ ಕಾಯಿಲೆ ಕಂಡು ಬರುತ್ತದೆ.
‘ಮದ್ರಾಸ್ ಐ’ ಲಕ್ಷಣಗಳು
ಕಣ್ಣು ಕೆಂಪಾಗುವಿಕೆ, ನೀರು ಸೋರುವಿಕೆ, ಅತಿಯಾದ ಕಣ್ಣೀರು, ಕಣ್ಣಿನಲ್ಲಿ ತುರಿಕೆ, ಸತತ ಕಣ್ಣು ನೋವು ಹಾಗೂ ಚುಚ್ಚುವಿಕೆ, ಬೆಳಕನ್ನು ನೋಡಲು ಸಾಧ್ಯವಾಗದಿರುವುದು, ದೃಷ್ಟಿ ಮಸಕಾಗುವುದು, ಮುಂಜಾಗುವುದು, ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತ ದ್ರವದಿಂದ ಅಂಟಿರುವುದು, ರೆಪ್ಪ ಊದಿಕೊಳ್ಳುವುದು, ಈ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ-ಸಲಹೆ ಪಡೆಯಬೇಕು.
ಮುಂಜಾಗ್ರತಾ ಕ್ರಮಗಳು
ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆರೋಗ್ಯವಂತ ವ್ಯಕ್ತಿಯು ಸೋಂಕುಳ್ಳ ವ್ಯಕ್ತಿಯ ಕಣ್ಣಿನ ನೇರ ಸಂಪರ್ಕದಿಂದ ದೂರವಿರಬೇಕು. ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನು ತೊಳೆಯಬೇಕು. ಸೋಂಕಿತ ವ್ಯಕ್ತಿಗಳಿಗೆ ಶೀತ, ಕೆಮ್ಮು, ಜ್ವರ ಇದ್ದಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ತೀವ್ರತರದ ಸೋಂಕು ಉಂಟಾದಲ್ಲಿ ತಕ್ಷಣವೇ ನೇತ್ರ ತಜ್ಞರಿಂದ ಚಿಕಿತ್ಸೆ ಪಡೆಯಬೇಕು.
ಏನು ಮಾಡಬೇಕು
ಸ್ವಚ್ಛವಾದ ನೀರಿನಿಂದ ಕಣ್ಣುಗಳನ್ನು ಶುಚಿಗೊಳಿಸಬೇಕು. ಸೋಂಕು ಕಂಡು ಬಂದ ತಕ್ಷಣ ವೈದ್ಯರಿಂದ ಚಿಕಿತ್ಸೆ-ಸಲಹೆ ಪಡೆಯಬೇಕು. ಸೋಂಕಿತ ವ್ಯಕ್ತಿಗಳಿಗೆ ಪೌಷ್ಠಿಕ ಅಹಾರ ನೀಡಬೇಕು. ಸೋಂಕಿತ ವ್ಯಕ್ತಿಗಳು ಬಳಸಿದ ಕೈವಸ್ತ್ರ-ಟವೆಲ್ ಇನ್ನಿತರ ವಸ್ತುಗಳನ್ನು ಸಂಸ್ಕರಿಸಿ ಬಳಸಬೇಕು.
ಏನು ಮಾಡಬಾರದು
ಕೈಗಳಿಂದ ಪದೇ ಪದೇ ಕಣ್ಣುಗಳನ್ನು ಮುಟ್ಟಬಾರದು, ಸ್ವಯಂ ಚಿಕಿತ್ಸೆ ವಿಧಾನಗಳನ್ನು ಮಾಡಬಾರದು, ಸೋಂಕಿತ ವ್ಯಕ್ತಿಗಳು ಬಳಸಿದ ವಸ್ತುಗಳನ್ನು ಮುಟ್ಟಬಾರದು.
ತಮಿಳುನಾಡಿನ ಮದ್ರಾಸ್‌ನಲ್ಲಿ ಮೊದಲ ಬಾರಿಗೆ ಕಂಡುಬಂದ ಹಿನ್ನೆಲೆಯಲ್ಲಿ ‘ಮದ್ರಾಸ್ ಐ’ ಎಂದು ಹೆಸರು ಬಂದಿದೆ. ‘ಪಿಂಕ್ ಐ’ ಎಂತಲೂ ಕರೆಯಲಾಗುತ್ತದೆ. ‘ಮದ್ರಾಸ್ ಐ’ ಬಗ್ಗೆ ಯಾರೂ ಭಯ ಪಡುವ ಅಗತ್ಯವಿಲ್ಲ, ವೈದ್ಯರ ಸಲಹೆ ಮೇರೆಗೆ ‘ಐ ಡ್ರಾಫ್ ಬಳಸಬೇಕು. ಸ್ಟಿರಾಯ್ಡ್ ಬಳಸಿದರೆ ಕಣ್ಣಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಮೂರ್ನಾಲ್ಕು ದಿನಗಳಲ್ಲಿ ವಾಸಿಯಾಗುತ್ತದೆ. ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ವಿಜಯಪುರ ನಗರದ ಬನಶಂಕರಿ ನೇತ್ರಾಲಯದ ನೇತ್ರತಜ್ಞೆ ಡಾ. ಜ್ಯೋತಿ ಇಜೇರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಮದ್ರಾಸ್ ಐ’ಗೆ ಚಿಕಿತ್ಸೆ
ಶುಚಿಯಾದ ಒದ್ದೆ ಮಾಡಿದ ಬಟ್ಟೆ ಅಥವಾ ಹತ್ತಿಯ ಉಂಡೆಗಳಿಂದ ಉಗುರು ಬೆಚ್ಚಗಿನ ನೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸುವುದು ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ಬಳಸುವುದು ಶಾಲಾ ವಿದ್ಯಾರ್ಥಿ-ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಸೋಂಕು ಕಂಡು ಬಂದಲ್ಲಿ ಅವರಿಗೆ ಚಿಕಿತ್ಸೆ ನೀಡುವುದು. ಸೋಂಕಿತ ವ್ಯಕ್ತಿಯು ಬಳಸಿದ ಕರವಸ್ತ್ರ ಹಾಗೂ ಇತರೆ ವಸ್ತ್ರಗಳನ್ನು ಬೇರೆಯವರು ಬಳಸಬಾರದು. ಪದೇ ಪದೇ ಕಣ್ಣುಗಳನ್ನು ಮುಟ್ಟಬಾರದು. ಸೋಂಕಿತ ವ್ಯಕ್ತಿಗಳು ಕಪ್ಪು ಕನ್ನಡಕ ಬಳುಸುವುದು ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.