ಇಂಡಿ(ವಿಜಯಪುರ): ತಾಲ್ಲೂಕಿನ ಹಿರೇರೂಗಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಕುಶಾಲತೋಪು( ಗಾಳಿಯಲ್ಲಿ ಗುಂಡು) ಹಾರಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡಿ ಹಾರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಾಲಿಗೆ ತಗುಲಿ, ತೀವ್ರವಾಗಿ ಗಾಯಯೊಂಡಿದ್ದಾರೆ.
ಧ್ವಜಾರೋಹಣವಾಗುತ್ತಿದ್ದಂತೆ ಕನ್ನಡಪರ ಸಂಘಟನೆಯ ಮುಖಂಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಲ್ಲು ಗಿಣ್ಣಿ ಕುಶಾಲತೋಪು(ಗಾಳಿಯಲ್ಲಿ ಗುಂಡು) ಹಾರಿಸಿದ್ದಾರೆ. ಬಳಿಕ ಬಂದೂಕನ್ನು ಕೆಳಗೆ ಇಳಿಸಿ ಇಡುವ ವೇಳೆ ಆಕಸ್ಮಿಕವಾಗಿ ಮತ್ತೊಂದು ಗುಂಡು ಹಾರಿದೆ. ಸನಿಹದಲ್ಲೇ ನಿಂತಿದ್ದ ಗ್ರಾಮ ಪಂಚಾಯ್ತಿ ಹಾಲಿ ಅಧ್ಯಕ್ಷೆ ಸೋಮವ್ವ ಹೊಸಮನಿ ಮೋಣಕಾಲಿಗೆ ಗುಂಡು ತಗುಲಿ, ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಅವರನ್ನು ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
‘ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಸಂಪ್ರದಾಯ ಗ್ರಾಮದಲ್ಲಿ ಮೊದಲಿನಿಂದಲೂ ಇದೆ. ಆಕಸ್ಮಿಕವಾಗಿ ಗುಂಡು ಹಾರಿ ನನ್ನ ಕಾಲಿಗೆ ಬಿದ್ದಿದೆ. ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ, ಇದನ್ನು ವಿವಾದ ಮಾಡುವ ಅಗತ್ಯವಿಲ್ಲ, ಊರಿನಲ್ಲಿ ನಾವೆಲ್ಲರೂ ಒಂದೇ ತಾಯಿ ಮಕ್ಕಳಂತೆ ಇದ್ದೇವೆ. ನಮ್ಮ ನಡುವೆ ಯಾವುದೇ ದ್ವೇಷವಿಲ್ಲ, ಗುಂಡು ಹಾರಿಸಿದವ ನನ್ನ ಮಗನಿದ್ದಂತೆ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸೋಮವ್ವ ಹೊಸಮನಿ ಸ್ಪಷ್ಟನೆ ನೀಡುವ ಮೂಲಕ ಘಟನೆಗೆ ತೆರೆ ಎಳೆದಿದ್ದಾರೆ.
ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪಿಎಸ್‌ಐ ಸೋಮೇಶ ಗೆಜ್ಜಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.