ADVERTISEMENT

‘ಗುಮ್ಮಟನಗರಿ’ಯಲ್ಲಿ ಹಿಂದುಗಳಿಗೆ ‘ಮಸೀದಿ ದರ್ಶನ’ 

ಇಸ್ಲಾಂ ಧರ್ಮ, ಮಸೀದಿ, ಮುಸ್ಲಿಮರ ಬಗೆಗಿನ ತಪ್ಪು ಅಭಿಪ್ರಾಯ ನಿವಾರಣೆ ಉದ್ದೇಶ 

ಬಸವರಾಜ ಸಂಪಳ್ಳಿ
Published 9 ಡಿಸೆಂಬರ್ 2022, 23:15 IST
Last Updated 9 ಡಿಸೆಂಬರ್ 2022, 23:15 IST
ವಿಜಯಪುರದ ಕೀರ್ತಿನಗರದಲ್ಲಿರುವ ಅಲ್‌ ಅಕ್ಸಾ ಮಸೀದಿ–ಪ್ರಜಾವಾಣಿ ಚಿತ್ರ
ವಿಜಯಪುರದ ಕೀರ್ತಿನಗರದಲ್ಲಿರುವ ಅಲ್‌ ಅಕ್ಸಾ ಮಸೀದಿ–ಪ್ರಜಾವಾಣಿ ಚಿತ್ರ   

ವಿಜಯಪುರ: ಮಸೀದಿಗಳ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಅಪನಂಬಿಕೆಯನ್ನು ಹೋಗಲಾಡಿಸಿ, ಹಿಂದು–ಮುಸ್ಲಿಂ ಧರ್ಮಿಯರ ನಡುವೆಭಾವೈಕ್ಯ, ಧಾರ್ಮಿಕ ಸೌಹಾರ್ದತೆ, ಪರಸ್ಪರ ನಂಬಿಕೆ ಮೂಡಿಸುವ ಸಲುವಾಗಿ ಸೂಫಿಸಂತರ ನಾಡಾದ ವಿಜಯಪುರದ ‘ಅಲ್‌ ಅಕ್ಸಾ’ ಮಸೀದಿಯಲ್ಲಿ ಹಿಂದುಗಳಿಗೆ ಪ್ರಥಮ ಬಾರಿಗೆ ‘ಮಸೀದಿ ದರ್ಶನ’ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ.

ಇಲ್ಲಿನ ಮನಗೂಳಿ ರಸ್ತೆಯಕೀರ್ತಿನಗರದ ಅಲ್‌ ಅಕ್ಸಾ ಉರ್ಫ್‌ ಮಸ್ಜೀದ್‌ ಎ ಮನ್‌ ಖಾದರಿ ವೆಲ್‌ಫೇರ್‌ ಸೊಸೈಟಿಯು ಡಿಸೆಂಬರ್‌ 11 ರಂದು ಸಂಜೆ 5ರಿಂದ 6ರ ವರೆಗೆ ‘ಬನ್ನಿರಿ ಪರಸ್ಪರ ಅರಿಯೋಣ, ಧಾರ್ಮಿಕ ಸೌಹಾರ್ದತೆ ಬೆಳೆಸೋಣ’ ಎಂಬ ಆಶಯ ಮಸೀದಿ ದರ್ಶನ ಏರ್ಪಡಿಸಿದ್ದು, 200 ಜನರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ ಆಹ್ವಾನ ನೀಡಿದೆ.

‘ಮಸೀದಿಗಳೆಂದರೆ ಭಯೋತ್ಪಾದನೆ ಬೋಧಿಸುವ ಸ್ಥಳ, ಉಗ್ರರನ್ನು ಸೃಷ್ಟಿಸುವ ತಾಣ ಎಂದು ದೇಶದಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗಿದೆ. ಆದರೆ, ಮಸೀದಿಗಳಲ್ಲಿ ಅಂತಹ ಯಾವುದೇ ಉಗ್ರಗಾಮಿ ಚಟುವಟಿಕೆ ನಡೆಯುತ್ತಿಲ್ಲ ಅಥವಾ ಅನ್ಯ ಧರ್ಮಿಯರ ಬಗ್ಗೆ ಯಾವುದೇ ವಿಷ ಬೀಜ ಬಿತ್ತುತ್ತಿಲ್ಲ ಎಂಬುದನ್ನು ಸಾರಿ ಹೇಳುವ ಉದ್ದೇಶದಿಂದ ಮಸೀದಿ ದರ್ಶನ ಏರ್ಪಡಿಸಲಾಗಿದೆ’ ಎಂದು ಅಲ್‌ ಅಕ್ಸಾ ಉರ್ಫ್‌ ಮಸ್ಜೀದ್‌ ಎ ಮನ್‌ ಖಾದರಿ ವೆಲ್‌ಫೇರ್‌ ಸೊಸೈಟಿ ಅಧ್ಯಕ್ಷ ಎಸ್‌.ಎಂ. ಪಾಟೀಲ ಗಣಿಹಾರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮಸೀದಿಗಳಲ್ಲಿ ದೇವರ ಪ್ರಾರ್ಥನೆ, ಕುರಾನ್‌ ಪಠಣ ಮಾತ್ರ ಮಾಡಲಾಗುತ್ತದೆ. ನೆರೆಹೊರೆಯವರೊಂದಿಗೆ ಸೌಹಾರ್ದದಿಂದ,ಒಗ್ಗಟ್ಟಿನಿಂದಇರುವಂತೆ ಮಾತ್ರ ಹೇಳಲಾಗುತ್ತದೆ‘ ಎನ್ನುತ್ತಾರೆ ಅಲ್‌ ಅಕ್ಸಾ ಉರ್ಫ್‌ ಮಸ್ಜೀದ್‌ ಎ ಮನ್‌ ಖಾದರಿ ವೆಲ್‌ಫೇರ್‌ ಸೊಸೈಟಿನಿರ್ದೇಶಕ ಸಿಕಂದರ್‌ ಶೇಖ್‌.

‘ಪ್ರಥಮ ಬಾರಿಗೆ ಆಯೋಜಿಸಿರುವ ಮಸೀದಿ ದರ್ಶನಕ್ಕೆ ಜನಸಾಮಾನ್ಯರಿಂದ ವ್ಯಕ್ತವಾಗುವ ಪ್ರತಿಕ್ರಿಯೆ ಆಧರಿಸಿ ಮುಂದಿನ ದಿನಗಳಲ್ಲಿ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಇತರೆ ಮಸೀದಿಗಳಲ್ಲೂ ಈ ಕಾರ್ಯಕ್ರಮ ಮುಂದುವರಿಸುವ ಉದ್ದೇಶವಿದೆ’ ಎಂದು ಅವರು ತಿಳಿಸಿದರು.

‘ಮಸೀದಿ ದರ್ಶನಕ್ಕೆ ಬರುವ ಅತಿಥಿಗಳಿಗೆ ಗೌರವ ಪೂರ್ವಕವಾಗಿ ಧಾರ್ಮಿಕ ಅರಿವು ಮೂಡಿಸುವ ಪುಸ್ತಕಗಳನ್ನು ವಿತರಿಸಲಾಗುವುದು, ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.