ವಿಜಯಪುರ: ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಆರ್‌ಐ ಕೋಟಾಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರವು ಎನ್‌ಎಂಸಿಗೆ ಮನವಿ ಸಲ್ಲಿಸಿದ್ದು, ವೈದ್ಯಕೀಯ ಶಿಕ್ಷಣದಲ್ಲಿ ಸರ್ಕಾರದ ವ್ಯಾಪಾರೀಕರಣದ ಧೋರಣೆ ಖಂಡನೀಯ ಎಂದು ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಹೇಳಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಪ್ರಸ್ತುತ ಲಭ್ಯವಿರುವ ಸೀಟುಗಳಲ್ಲೇ ಎನ್‌ಆರ್‌ಐ ಕೋಟಾ ತೆರೆಯದೇ, ಶೇ.15ರಷ್ಟು ಹೆಚ್ಚುವರಿ ಸೀಟುಗಳಿಗೆ ರಾಜ್ಯ ಸರ್ಕಾರವು ವಿನಂತಿಸಿದೆ. ಒಂದು ವೇಳೆ, ಎನ್‌ಆರ್‌ಐ ಕೋಟಾ ಜಾರಿಯಾದಲ್ಲಿ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸಂಪೂರ್ಣ ವ್ಯಾಪಾರೀಕರಣಕ್ಕೆ ಪರವಾನಿಗೆ ನೀಡಿದಂತಾಗುತ್ತದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಉದ್ದೇಶಕ್ಕೆ ಇದರಿಂದ ಹೊಡೆತ ಉಂಟಾಗುತ್ತದೆ.
ಸರ್ಕಾರವು ಸೀಟುಗಳನ್ನು ಹೆಚ್ಚಿಸುವುದಾದರೆ, ರಾಜ್ಯದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿಸಲಿ. ಅದನ್ನು ಬಿಟ್ಟು ಎನ್‌ಆರ್‌ಐ ಕೋಟಾ ಹೆಸರಿನಲ್ಲಿ ವೈದ್ಯಕೀಯ ಸೀಟುಗಳ ಮಾರಾಟ ನಡೆಸಬಾರದು.
ಸರ್ಕಾರವು ತನ್ನ ಈ ನಡೆಯನ್ನು ಹಿಂಪಡೆದು ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಬೇಕು ಮತ್ತು ವೈದ್ಯಕೀಯ ಶಿಕ್ಷಣದಿಂದ ದೂರ ತಳಲ್ಪಡುತ್ತಿರುವ ರಾಜ್ಯದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅದನ್ನು ತಲುಪಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.