ADVERTISEMENT

ವಿಜಯಪುರ: ಅಲ್ಪ ಮಳೆಗೆ ಮೀನಾಕ್ಷಿ ಚೌಕ್‌ ಜಲಾವೃತ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:17 IST
Last Updated 13 ಜೂನ್ 2024, 14:17 IST
ವಿಜಯಪುರದಲ್ಲಿ ಗುರುವಾರ ಸುರಿದ ಮಳೆಗೆ ನಗರದ ಮೀನಾಕ್ಷಿ ಚೌಕ್‌ ಜಲಾವೃತವಾಗಿದೆ
ವಿಜಯಪುರದಲ್ಲಿ ಗುರುವಾರ ಸುರಿದ ಮಳೆಗೆ ನಗರದ ಮೀನಾಕ್ಷಿ ಚೌಕ್‌ ಜಲಾವೃತವಾಗಿದೆ   

ವಿಜಯಪುರ: ನಗರದಲ್ಲಿ ಗುರುವಾರ ಸಂಜೆ ಅರ್ಧಗಂಟೆ ಸುರಿದ ಬಿರುಸಿನ ಮಳೆಗೆ ನಗರದ ಮೀನಾಕ್ಷಿ ಚೌಕ್‌ನಲ್ಲಿ ಅವೈಜ್ಞಾನಿಕ ರಸ್ತೆ ಹಾಗೂ ಚರಂಡಿ ನಿರ್ಮಾಣದಿಂದಾಗಿ, ನೀರು ಸರಾಗವಾಗಿ ಹರಿದು ಹೋಗದ ಕಾರಣ ರಸ್ತೆಯ ಮೇಲೆ ನೀರು ನಿಂತಿತು.

ಮಳೆ ಆರಂಭವಾಗಿ ಕೆಲ ಹೊತ್ತಿನಲ್ಲಿಯೇ ಮೀನಾಕ್ಷಿ ಚೌಕ್‌ ಕೆರೆಯಂತೆ ಪರಿವರ್ತನೆಯಾಗಿತ್ತು. ಇಲ್ಲಿ ಸಂಚರಿಸುವ ವಾಹನ ಸವಾರರು ನೀರಿನಲ್ಲಿ ಹರಸಾಹಸ ಪಡುತ್ತಾ ಸಂಚರಿಸಿದರು.

ನಗರದ ಮಾರುಕಟ್ಟೆ ಸ್ಥಳವಾದ ಮೀನಾಕ್ಷಿ ಚೌಕ್‌ ಹಾಗೂ ಕೆ.ಸಿ ಮಾರ್ಕೆಟ್‌ ರಸ್ತೆ, ಅಲ್ಪ ಮಳೆಗೆ ಭರ್ತಿಯಾಗಿದ್ದು, ರಸ್ತೆ ಮೇಲೆ ಸಂಚರಿಸುವ ಪಾದಚಾರಿಗಳು ಪಾಲಿಕೆ ಮೇಲೆ ಆಕ್ರೋಶ ಹೊರಹಾಕುತ್ತಾ ಸಾಗಿದ ದೃಶ್ಯಗಳು ಕಂಡು ಬಂದವು.

ADVERTISEMENT

ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ವ್ಯಾಪಾರಿಗಳು ಮಳೆಯಿಂದಾಗಿ ತೊಂದರೆ ಅನುಭವಿಸಿದರು. ಮಳೆ ನಿಂತ ನಂತರವೂ ರಸ್ತೆ ಮೇಲೆ ನಿಂತ ನೀರಿನಲ್ಲಿಯೇ ವ್ಯಾಪಾರಕ್ಕೆ ಮುಂದಾದರು.  

ಇನ್ನೂ ನಗರದ ರೈಲ್ವೆ ಸ್ಟೇಷನ್‌ ರಸ್ತೆ, ಇಬ್ರಾಹಿಂ ರೋಜಾ ರಸ್ತೆಯಲ್ಲೂ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ನಗರದ ವಿವಿಧ ಬಡಾವಣೆಗಳ ರಸ್ತೆಯಲ್ಲೂ ಬೈಕ್‌ ಸವಾರರೂ ಸಾಹಸ ಪಡುತ್ತಾ ಸಾಗಿದರು.

ಮಳೆಯಿಂದಾಗಿ ಮೀನಾಕ್ಷಿ ಚೌಕ್‌ನಲ್ಲಿ ನಿರಂತರ ನೀರು ನಿಲ್ಲುತ್ತಿದ್ದು, ನಿಂತ ನೀರಿನಲ್ಲಿ ಸೊಳ್ಳೆಗಳು ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗಿ ರೋಗ ಹರಡುವ ಆತಂಕ ಜನರಲ್ಲಿ ಮೂಡುತ್ತಿದೆ.

ಉತ್ತಮ ಮಳೆ: ಜಿಲ್ಲೆಯ ವಿವಿಧ ಕಡೆ ಬುಧವಾರ ಗುಡುಗು ಮಿಶ್ರಿತ ಉತ್ತಮ ಮಳೆಯಾಗಿದೆ. ಜಿಲ್ಲೆಯ ನಾಲತವಾಡದಲ್ಲಿ 5.4 ಸೆಂ.ಮೀ ಮಳೆಯಾಗಿದೆ. ಮುದ್ದೇಬಿಹಾಳ 2.4 ಸೆಂ.ಮೀ, ಢವಳಗಿ 3.1, ತಾಳಿಕೋಟೆ 1.9, ತಿಕೋಟಾ 1.0, ಆಲಮಟ್ಟಿ 1.7, ಅರೇಶಂಕರ 1.8 ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.