ಮುದ್ದೇಬಿಹಾಳ: ರಾತ್ರಿ ಊಟವಾದ ಬಳಿಕ ಅಲ್ಪ ನಡಿಗೆ ಮಾಡೋಣವೆಂದು ಮುದ್ದೇಬಿಹಾಳ ಪಟ್ಟಣದ ಪ್ರಮುಖ ರಸ್ತೆಗೆ ಬಂದೀರಿ ಜೋಕೆ. ನಿಮ್ಮ ಮೇಲೆ ಯಾವುದೇ ಕ್ಷಣದಲ್ಲಿ ಇಲ್ಲಿರುವ ಬೀದಿ ನಾಯಿಗಳ ಹಿಂಡು ದಾಳಿ ಮಾಡಬಹುದು ಎಚ್ಚರ!!
ಹೌದು, ಮಳೆಗಾಲ ಶುರುವಾದಾಗಿನಿಂದ ಬೀದಿ ನಾಯಿಗಳ ಉಪಟಳ ಮುದ್ದೇಬಿಹಾಳ ಜನತೆಗೆ ಹೆಚ್ಚಾಗಿದೆ. ಪಟ್ಟಣದ ಆಲಮಟ್ಟಿ ರಸ್ತೆ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಇಂದಿರಾ ನಗರ, ಪಿಲೇಕೆಮ್ಮ ನಗರ, ಗಣೇಶ ನಗರ, ಮಹಾಂತೇಶ ನಗರ, ಹುಡ್ಕೋ, ಮಾರುತಿ ನಗರ, ವಿದ್ಯಾನಗರ, ಮೆಹಬೂಬ ನಗರ, ನೇತಾಜಿ ಗಲ್ಲಿ ಹಾಗೂ ಮುಖ್ಯರಸ್ತೆಯಲ್ಲಿ ಈ ನಾಯಿಗಳು ಗುಂಪು ಗುಂಪಾಗಿ ಅಲೆದಾಡುತ್ತಿರುತ್ತವೆ. ನಡೆದು ಹೋಗುವವರನ್ನು, ಬೈಕ್ ಮೇಲೆ ತೆರಳುವವರನ್ನು ಅಟ್ಟಾಡಿಸಿ, ಬೀಳಿಸಿ ಕಚ್ಚಿರುವ ಘಟನೆಗಳೂ ನಡೆದಿದ್ದು, ಇದರಿಂದ ನಾಗರಿಕರು ತೀವ್ರ ಆತಂಕಗೊಂಡಿದ್ದಾರೆ.
ಎಲ್ಲಿ ಹೊರ ಬಂದರೆ ನಾಯಿಗಳು ಕಚ್ಚುತ್ತವೆಯೋ ಎಂಬ ಭೀತಿಯಲ್ಲಿ ಮಕ್ಕಳನ್ನು ಆಟವಾಡುವುದಕ್ಕೂ ಕಳಿಸುವುದಕ್ಕೆ ನಾಗರಿಕರು ಹೆದರುವಂತಾಗಿದೆ. ನಾಯಿಗಳ ಸಂತಾನವೂ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂಬ ಆಗ್ರಹಗಳು ನಾಗರಿಕರಿಂದ ಕೇಳಿ ಬಂದಿವೆ.
ನಾಯಿಗಳ ಉಪಟಳ ಒಂದು ರೀತಿಯದ್ದಾದರೆ, ಬಿಡಾಡಿ ದನಗಳ ಸಮಸ್ಯೆ ಹೇಳತೀರದು. ಹಗಲು ಹೊತ್ತಿನಲ್ಲಿ ಪಟ್ಟಣದ ವಿವಿಧ ಓಣಿಗಳಿಗೆ, ಮುಖ್ಯರಸ್ತೆಯಲ್ಲಿ ಆಹಾರ ಅರಸಿ ಹೋಗುವ ದನಗಳು ರಾತ್ರಿಯಾಗುತ್ತಲೇ ಪಟ್ಟಣದ ಜನನಿಬಿಡ ಪ್ರದೇಶವಾದ ಬಸವೇಶ್ವರ ವೃತ್ತದಲ್ಲಿ ಜಮಾಯಿಸುತ್ತವೆ. ಬಸವೇಶ್ವರ ವೃತ್ತದ ಸುತ್ತಮುತ್ತಲ ರಸ್ತೆಯಲ್ಲಿಯೇ ಆಕಳುಗಳು ಮಲಗಿ ವಾಹನಗಳ ಓಡಾಟಕ್ಕೆ ತೊಂದರೆಯನ್ನುಂಟು ಮಾಡುತ್ತಿವೆ.
ರಾತ್ರಿ ಹೊತ್ತಿನಲ್ಲಿ ಊರಿನ ಸೌಂದರ್ಯ, ಶಾಂತ ಪರಿಸರವನ್ನು ಆಸ್ವಾದಿಸಬೇಕು ಎಂದು ಬರುವ ನಾಗರಿಕರಿಗೆ ಬೀದಿ ನಾಯಿಗಳ ಉಪಟಳ ಒಂದೆಡೆಯಾದರೆ, ವಾಹನಗಳು ಬಸವೇಶ್ವರ ವೃತ್ತದಿಂದ ಮುಂದೆ ಹೋಗಲು ಬಿಡದಂತೆ ಅಘೋಷಿತ ರಸ್ತೆ ತಡೆಯನ್ನು ಸೃಷ್ಟಿಸುವ ಕಾರ್ಯ ಈ ಬಿಡಾಡಿ ದನಗಳಿಂದ ಆಗುತ್ತಿದೆ.
ತಂಗಡಗಿ ರಸ್ತೆಯಲ್ಲಿರುವ ಮಳಿಗೆಗಳ ಮುಂದೆ ಬಿಡಾಡಿ ದನಗಳು ಮಲಗಿ, ಅಲ್ಲಿಯೇ ಸೆಗಣಿ ಹಾಕಿ ಗಲೀಜು ಮಾಡುತ್ತವೆ ಎಂಬ ಕಾರಣದಿಂದ ಅಂಗಡಿಕಾರರು ಅಂಗಡಿಗಳ ಮುಂದೆ ದನಗಳು ನಿಲ್ಲದಂತೆ, ಮಲಗದಂತೆ ಕಲ್ಲುಗಳನ್ನಿಡುತ್ತಿದ್ದಾರೆ. ಇಂತಹ ಬಿಡಾಡಿ ದನಗಳನ್ನು ಬೇರೆಡೆ ಸಾಗಿಸಬೇಕು. ಜನತೆಗೆ ಪಟ್ಟಣದ ಸುಗಮ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುವ ದನಗಳನ್ನು ಗೋಶಾಲೆಗಳಿಗೆ ಕಳಿಸಬೇಕು ಎಂಬ ಆಗ್ರಹ ನಾಗರಿಕರದ್ದಾಗಿದೆ.
ಕೆಲವರು ಬಿಡಾಡಿ ದನಗಳ ಕಾರ್ಯಾಚರಣೆಗೆ ಪುರಸಭೆ ಮುಂದಾಗುತ್ತಿದ್ದಂತೆ ವಿರೋಧ ವ್ಯಕ್ತಪಡಿಸುತ್ತಾರೆ. ಮಾಲೀಕತ್ವ ಹೊಂದಿರುವವರು ದನಗಳನ್ನು ಸರಿಯಾಗಿ ಮನೆಗಳಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿಕೊಂಡು ಸಾಕಬೇಕು. ಅದು ಬಿಟ್ಟು ಜನರಿಗೆ ತೊಂದರೆ ಕೊಡುವಂತೆ ಬೀದಿಯಲ್ಲಿ ಬಿಟ್ಟು ಅವುಗಳನ್ನು ಗೋಶಾಲೆಗೆ ಕಳಿಸಲಾಗುವುದು ಎಂದಾಗ ವಿರೋಧಿಸುತ್ತಿರುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬಂದಿವೆ.
ಮುದ್ದೇಬಿಹಾಳದಲ್ಲಿ ಸಂಜೆಯಾದರೆ ಸಾಕು ಮನೆ ಬಿಟ್ಟು ಹೊರಬರುವುದಕ್ಕೆ ಹೆದರಿಕೆಯಾಗುತ್ತಿದೆ. ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದ್ದು ಅವುಗಳನ್ನು ಹಿಡಿದು ಬೇರೆಡೆ ಸಾಗಿಸಬೇಕು-ಹುಸೇನ್ ಮುಲ್ಲಾಯುವ ಮುಖಂಡ
ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಡಾಡಿ ದನಗಳ ಹಾವಳಿ ಅಧಿಕವಾಗಿದೆ. ಒಂದು ಬೈಕ್ ಹೋಗಬೇಕಾದರೂ ರಸ್ತೆಯಲ್ಲಿ ದನಗಳ ದಾಳಿಯಿಂದ ಎಚ್ಚರಿಕೆಯಿಂದ ಸಾಗಬೇಕು.-ಅಜೇಯ್ ಭೋಸಲೆ ಸ್ಥಳೀಯ ನಿವಾಸಿ
ಬೀದಿ ನಾಯಿಗಳನ್ನು ಹಿಡಿಯಲು ವಾರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಬಿಡಾಡಿ ದನಗಳನ್ನು ಕಗ್ಗೋಡ ಅಥವಾ ಕೂಡಲಸಂಗಮ ಗೋಶಾಲೆಗೆ ಕಳಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ಜರುಗಿಸಲಾಗುವುದು--ಮಲ್ಲಿಕಾರ್ಜುನ ಬಿರಾದಾರ ಮುಖ್ಯಾಧಿಕಾರಿ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.