ವಿಜಯಪುರ: ಇದುವರೆಗೆ ಗಂಡು ಮಕ್ಕಳ ಕಲಿಕೆಗೆ ಮಾತ್ರ ಅವಕಾಶವಿದ್ದ ವಿಜಯಪುರ ಸೈನಿಕ ಶಾಲೆಯಲ್ಲಿ 2020–21ನೇ ಶೈಕ್ಷಣಿಕ ಸಾಲಿನಿಂದ ಹೆಣ್ಣು ಮಕ್ಕಳಿಗೂ ಶೇ 10ರಷ್ಟು ಪ್ರವೇಶಾತಿ ನೀಡಲಾಗುತ್ತದೆ.
ದೇಶದಲ್ಲಿರುವ 33 ಸೈನಿಕ ಶಾಲೆಗಳ ಪೈಕಿ 4–5 ಶಾಲೆಗಳಲ್ಲಿ ಈಗಾಗಲೇ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡಲಾಗಿದ್ದು, ಇದೀಗ ಆ ಸಾಲಿಗೆ ವಿಜಯಪುರ ಸೈನಿಕ ಶಾಲೆಯೂ ಸೇರಲಿದೆ. ಗಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ಸೇನೆ ಸೇರಿದಂತೆ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿರುವ ಸೈನಿಕ ಶಾಲೆಯಲ್ಲಿ, ಮುಂಬರುವ ವರ್ಷದಿಂದ ಹೆಣ್ಣು ಮಕ್ಕಳಿಗೂ ಅವಕಾಶ ಸಿಕ್ಕಿರುವುದಕ್ಕೆ ಹೆಣ್ಣು ಮಕ್ಕಳ ಪಾಲಕರು ಖುಷಿಯಾಗಿದ್ದಾರೆ.
ಸೈನಿಕ ಶಾಲೆಯಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ, ರಾಷ್ಟ್ರಾಭಿಮಾನ, ಶಿಸ್ತು, ಸಂಸ್ಕೃತಿ, ಕ್ರೀಡೆ, ಪ್ರಾಮಾಣಿಕತೆ ಪಾಠವನ್ನು ಹೆಣ್ಣು ಮಕ್ಕಳಿಗೂ ಕೊಡಿಸಬೇಕು ಎಂಬ ಉದ್ದೇಶದಿಂದ, ದೂರದ ಕಿತ್ತೂರಿನಲ್ಲಿರುವ ಶಾಲೆಗೆ 300ಕ್ಕೂ ಹೆಚ್ಚು ಮಕ್ಕಳನ್ನು ಜಿಲ್ಲೆಯ ಪಾಲಕರು ಸೇರಿಸಿದ್ದಾರೆ. ಇದೀಗ ಇಲ್ಲಿಯೇ ಹೆಣ್ಣು ಮಕ್ಕಳಿಗೆ ಅವಕಾಶದೊರೆತಿರುವುದು ಇವರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
‘ಪ್ರಸ್ತುತ ವಿಜಯಪುರ ಸೈನಿಕ ಶಾಲೆಯಲ್ಲಿ ಪ್ರತಿ ವರ್ಷ 6ನೇ ತರಗತಿಗೆ 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸದ್ಯ ಇರುವ ಸೀಟುಗಳಲ್ಲಿ ಶೇ 10ರಷ್ಟು ಸೀಟುಗಳನ್ನು ಹೆಣ್ಣು ಮಕ್ಕಳಿಗೆ ನೀಡಲಾಗುವುದು. ಹೆಣ್ಣು ಮತ್ತು ಗಂಡು ಮಕ್ಕಳಿಗೆ ವಸತಿ ವ್ಯವಸ್ಥೆ ಪ್ರತ್ಯೇಕವಾಗಿದ್ದು, ಪ್ರವೇಶ ಶುಲ್ಕ ಸೇರಿದಂತೆ ಎಲ್ಲವೂ ಒಂದೇ ರೀತಿ ಇರುತ್ತದೆ’ ಎಂದು ಸೈನಿಕ ಶಾಲೆ ಮೂಲಗಳು ತಿಳಿಸಿವೆ.
ಅರ್ಜಿ ಸಲ್ಲಿಕೆ ಆರಂಭ: ನ.26ರಿಂದಲೇ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಡಿಸೆಂಬರ್ 6ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಿಜಯಪುರ, ಬೆಳಗಾವಿ, ಧಾರವಾಡ, ಕಲಬುರ್ಗಿ, ಬಳ್ಳಾರಿ ಪರೀಕ್ಷಾ ಕೇಂದ್ರಗಳಲ್ಲಿ 2020ರ ಜನವರಿ ಮೊದಲ ಭಾನುವಾರ ಪರೀಕ್ಷೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.