ADVERTISEMENT

ವಕ್ಫ್‌ ಪರ ಬಿಜೆಪಿ ಸರ್ಕಾರದ ಸುತ್ತೋಲೆ ಪ್ರದರ್ಶಿಸಿದ ಸಚಿವ ಎಂ.ಬಿ ಪಾಟೀಲ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 13:38 IST
Last Updated 8 ನವೆಂಬರ್ 2024, 13:38 IST
<div class="paragraphs"><p>ಎಂ.ಬಿ. ಪಾಟೀಲ</p></div>

ಎಂ.ಬಿ. ಪಾಟೀಲ

   

– ಎಂ.ಬಿ. ಪಾಟೀಲ ಅವರ ಫೇಸ್‌ಬುಕ್ ಚಿತ್ರ

ವಿಜಯಪುರ: ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ವಕ್ಫ್ ಆಸ್ತಿ ರಕ್ಷಣೆಗೆ ಹೊರಡಿಸಿದ್ದ ಹತ್ತಾರು ಸುತ್ತೋಲೆಗಳನ್ನು ಸಚಿವ ಎಂ.ಬಿ.‍ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.

ADVERTISEMENT

ರಾಜ್ಯದಲ್ಲಿ 2019ರಲ್ಲಿ ಬಿಜೆಪಿ ಅಧಿಕಾರವಧಿಯಲ್ಲಿ ದೇವರಹಿಪ್ಪರಗಿ ತಾಲ್ಲೂಕಿನ ಮಣೂರ ಗ್ರಾಮದ ಮುರುಘೇಂದ್ರ  ಖ್ಯಾಡಿ, ಮಾಶಾಬಿ ಮುಲ್ಲಾ, ಸುಭಾಷ ಆನೆಗುಂದಿ, 2023ರಲ್ಲಿ ಇಂಡಿ ತಾಲ್ಲೂಕಿನ ಮಾರ್ಸನಹಳ್ಳಿ ಗ್ರಾಮದ ನಿಂಗಪ್ಪ  ಶಿರಶ್ಯಾಡ ಅವರಿಗೆ ಸೇರಿದ ಆಸ್ತಿಯನ್ನು ವಕ್ಫ್ ಹೆಸರಿಗೆ ಇಂಡೀಕರಣ ಮಾಡಿರುವ ಬಗ್ಗೆ ಸುತ್ತೋಲೆ ಹೊರಡಿಸಿದೆ ಎಂದರು.

2010ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿನ ವಕ್ಪ್‌ ಆಸ್ತಿಗಳನ್ನು ಸರ್ಕಾರದ ಇಲಾಖೆಗಳು ನಿಗಮ, ಮಂಡಳಿ ಮತ್ತು ಸ್ಥಳೀಯರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ವಕ್ಪ್‌ ಆಸ್ತಿಗೆ ಅಪಾರ ನಷ್ಟ ಉಂಟಾಗಿರುವುದು ಕಂಡುಬಂದಿದ್ದು, ಅಂಥ ಅತಿಕ್ರಮಣಗಳನ್ನು ನೋಟಿಸ್ ನೀಡಿ ತೆರೆವುಗೊಳಿಸುವಂತೆ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದರು ಎಂದು ತಿಳಿಸಿದರು.

2011ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಕ್ಪ್‌ ಆಸ್ತಿಗಳ ಸಂರಕ್ಷಣೆ ಹಾಗೂ ದಾಖಲೆಗಳನ್ನು ಕ್ರಮಬದ್ಧಗೊಳಿಸುವ ಕುರಿತು ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಸುತ್ತೋಲೆ, ವಕ್ಪ್‌ ಭೂಸ್ವಾಧೀನ ಪರಿಹಾರವನ್ನು ವಕ್ಪ್‌ ಮಂಡಳಿಯ ಲೆಕ್ಕ ಶೀರ್ಷಿಕೆಗೆ ಕಡ್ಡಾಯವಾಗಿ ಪಾವತಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹೊರಡಿಸಿರುವ ಸುತ್ತೋಲೆಯನ್ನು ಸಚಿವರು ಪ್ರದರ್ಶಿಸಿದರು.

2020ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಕ್ಫ್ ಆಸ್ತಿಗಳ ಭೂಮಿ ತಂತ್ರಾಶದಲ್ಲಿ ಫ್ಲಾಗ್ ಮಾಡುವ ಕುರಿತು ಸರ್ಕಾರದ ಉಪಕಾರ್ಯದರ್ಶಿ (ಭೂ ಮಂಜೂರಾತಿ, ಭೂ ಸುಧಾರಣೆ ಮತ್ತು ಕಂದಾಯ ಇಲಾಖೆ) ಹೊರಡಿಸಿರುವ ಸುತ್ತೋಲೆ ಪ್ರತಿಯನ್ನು ಪ್ರದರ್ಶಿಸಿದರು.

2021ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಮಟ್ಟದ ವಕ್ಫ್‌ ಆಸ್ತಿಗಳ ಕಾರ್ಯಪಡೆ ರಚಿಸಿ ರಾಜ್ಯದ ವಕ್ಪ್‌ ಆಸ್ತಿಗಳನ್ನು ಸಂರಕ್ಷಿಸುವ ಕುರಿತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹೊರಡಿಸಿರುವ ಸುತ್ತೋಲೆ ಹಾಗೂ ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ವಕ್ಸ್ ಆಸ್ತಿಗಳನ್ನು ಪಂಚತಂತ್ರ ಮತ್ತು ಇ-ಸ್ವತ್ತು ತಂತ್ರಾಂಶದಲ್ಲಿ ಫ್ಲಾಗ್ (ಲಾಕ್) ಮಾಡುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯನ್ನು ಸಚಿವರು ಪ್ರದರ್ಶಿಸಿದರು.

2014 ರಲ್ಲಿ ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿಯು ವಕ್ಫ್ ಮಂಡಳಿಯನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಧಾರ್ಮಿಕ ಮುಖಂಡರ ಜೊತೆ ಸಮಾಲೋಚನೆ ನಡೆಸಿ, ವಕ್ಫ್ ಆಸ್ತಿ ಅತೀಕ್ರಮಣವಾಗಿರುವುದನ್ನು ತೆರವುಗೊಳಿಸುವುದಾಗಿ ಘೋಷಿಸಿದ ಪ್ರತಿಯನ್ನು ಸಚಿವರು ಪ್ರದರ್ಶಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಅವರು 2019ರ ಸಂಸತ್ತಿನ ಅಧಿವೇಶನದಲ್ಲಿ ವಕ್ಫ್ ಆಸ್ತಿ ಸಂರಕ್ಷಣೆ ನಿಟ್ಟಿನಲ್ಲಿ ಜಿಯೋ ಟ್ಯಾಗಿಂಗ್ ಮತ್ತು ಡಿಜಿಟಲೀಕರಣ, ಲೀಸ್ ನಿಮಯಗಳು, ರಾಜ್ಯ ವಕ್ಫ್ ಮಂಡಳಿಗಳಿಗೆ ಆರ್ಥಿಕ ಸಹಾಯ, ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ಒದಗಿಸಲು ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ಇದೀಗ ವಿಜಯಪುರಕ್ಕೆ ಬಂದು ಫುಟ್‌ಪಾತ್‌ ಮೇಲೆ ಧರಣಿ ನಡೆಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.