ವಿಜಯಪುರ: ‘ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಶೆಡ್ ಗಿರಾಕಿ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಮೀಸೆ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ದಲಿತರೊಬ್ಬರು ವಿರೋಧ ಪಕ್ಷದ ನಾಯಕರಾಗಿದ್ದು ಕಾಂಗ್ರೆಸ್ ನಾಯಕರಿಗೆ ಸಹಿಸಲು ಆಗುತ್ತಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರಿಗೆ ಈ ರೀತಿ ಶಬ್ದಗಳಿಂದ ಕರೆದು ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ’ ಎಂದರು.
‘ಕಾಂಗ್ರೆಸ್ ಪಕ್ಷ ದಲಿತರನ್ನು ಕೇವಲ ವೋಟ್ ಬ್ಯಾಂಕ್‌ಗಾಗಿ ಬಳಕೆ ಮಾಡುತ್ತ ಬಂದಿದೆ. ದಲಿತರೊಬ್ಬರು ವಿರೋಧ ಪಕ್ಷದ ನಾಯಕರಾಗಿ ಒಂದು ತಿಂಗಳು ಕಳೆದರೂ, ಅವರಿಗೆ ಇನ್ನೂ ಶಿಷ್ಟಾಚಾರ ಪ್ರಕಾರ ಸೌಲಭ್ಯಗಳನ್ನು ಸರ್ಕಾರ ಒದಗಿಸಿಲ್ಲ’ ಎಂದು ಆರೋಪಿಸಿದರು.
‘ಸಚಿವ ಎಂ.ಬಿ ಪಾಟೀಲ ಅವರು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರ ಓಲೈಕೆ ಮಾಡಲು ಈ ರೀತಿ ಹೇಳಿಕೆ ನೀಡಿದ್ದಾರೆ. ಅವರು ಈ ಹೇಳಿಕೆಯಿಂದ ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದು, ಕೂಡಲೇ ಸಚಿವರು ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಬೇಕು’ ಎಂದರು.
‘ಸಚಿವರಿಗೆ ದಲಿತರ ಮೇಲೆ ಕಾಳಜಿ ಇದ್ದರೇ, ದಲಿತರ ಕಲ್ಯಾಣಕ್ಕೆ ಇರುವ ₹11 ಸಾವಿರ ಕೋಟಿ ಹಣವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಅದನ್ನು ವಾಪಸ್ ತರುವ ನಿಟ್ಟಿನಲ್ಲಿ ಕೆಲಸ ಮಾಡಲಿ’ ಎಂದರು.
ಚಿದಾನಂದ ಛಲವಾದಿ ಮಾತನಾಡಿ, ‘ನಾವು ದಲಿತರು ಶೆಡ್‌ನಲ್ಲಿ ಬೆಳೆದವರು. ನಾರಾಯಣಸ್ವಾಮಿ ಅವರು ವಿರೋಧ ಪಕ್ಷದ ನಾಯಕರಾಗಿ ಪ್ರಶ್ನೆ ಮಾಡುವುದು ತಪ್ಪಾ?. ಅವರ ಮೊದಲು ಕಾಂಗ್ರೆಸ್‌ನಲ್ಲಿ ಇದ್ದರು. ಅವರಿಗೆ ಯಾವ ಹುದ್ದೆಯನ್ನು ನೀಡಲಿಲ್ಲ. ಈಗ ಬಿಜೆಪಿ ಅವರ ವ್ಯಕ್ತಿತ್ವ ಗುರುತಿಸಿ ಗೌರವ ನೀಡಿದೆ’ ಎಂದರು.
ಭೀಮಣ್ಣ ಮೇಲಿನಮನಿ, ಟಿ. ಸಿದ್ದಲಿಂಗಪ್ಪ ಮಖಣಾಪುರ, ಪುನೀತ್ ಕಾಂಬ್ಳೆ, ಸಿದ್ದಲಿಂಗ ಮಖಣಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.