ವಿಜಯಪುರ: ‘ಮಿ.ನಿರಾಣಿ ನನ್ನ ಸಂಸ್ಥೆ ಮತ್ತು ನನ್ನ ಕುರಿತು ಏಕವಚನದಲ್ಲಿ ಕೆಟ್ಟ ಭಾಷೆ ಬಳಸಿದ್ದಾನೆ. ನಾನು ವಿಜಯಪುರ ಜಿಲ್ಲೆಯವ. ಇಂಥಹ ಎಲ್ಲ ಭಾಷೆಗಳು ನನಗೂ ಬರುತ್ತವೆ. ನಾನೇ ಸ್ವತಃ ಬಾಗಲಕೋಟೆಗೆ ಬಂದು ನಿನ್ನ ಭಾಷೆಯಲ್ಲಿಯೇ ನಿನ್ನ ಸತ್ಯಾಂಶವನ್ನು ಬಿಚ್ಚಿಡುತ್ತೇನೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಎದುರೇಟು ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಭಾನುವಾರ ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ‘ಅನವಶ್ಯಕವಾಗಿ ನನ್ನ ತಂಟೆಗೆ ಬಂದವರಿಗೆ ಹಿಂದೆಯೂ ಬಿಟ್ಟಿಲ್ಲ, ಇಂದು ಮತ್ತು ಮುಂದೆಯೂ ಬಿಡುವುದಿಲ್ಲ. ಅದರ ಕಹಿ ಅನುಭವ ಈ ಹಿಂದೆ ನಿನಗೆ ಆಗಿದೆ ಎನ್ನುವುದನ್ನು ನೆನಪಿಸುತ್ತೇನೆ’ ಎಂದಿದ್ದಾರೆ.
‘ಮಾಜಿ ಸಚಿವ ಮುರುಗೇಶ ನಿರಾಣಿಗೆ ದನ ಕಾಯುವವನು ಎಂಬ ಶಬ್ದವನ್ನು ನಾನು ಎಲ್ಲಿಯೂ ಬಳಸಿಲ್ಲ ಮತ್ತು ಏಕವಚನದಲ್ಲೂ ನಾನು ಮಾತನಾಡಿಲ್ಲ. ಅಷ್ಟಕ್ಕೂ, ದನ ಕಾಯುವುದು ಗೌರವದ ಕಾಯಕ. ದನಕಾಯುವವರನ್ನು ನಾನು ಗೌರವಿಸುತ್ತೇನೆ’ ಎಂದು ಹೇಳಿದ್ದಾರೆ.
‘ಸಿದ್ದಾರ್ಥ ಟ್ರಸ್ಟ್ಗೆ ಯಾವುದೇ ರಿಯಾಯಿತಿ ಇಲ್ಲದೆ ಸಿಎ ನಿವೇಶನ ನೀಡಿದ್ದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಅನವಶ್ಯಕವಾಗಿ ಎಳೆದು ತಂದು ಹಗರಣವಾಗಿದೆ ಎಂದು ಬಿಜೆಪಿಯವರು ಬಿಂಬಿಸುತ್ತಿರುವುದಕ್ಕೆ ಪ್ರತಿಯಾಗಿ ನಾನು ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಅವಧಿಯಲ್ಲಿ ಬಿಜೆಪಿ ನಾಯಕರು ಯಾರು, ಯಾರು ಎಷ್ಟೆಷ್ಟು ಲಾಭ ಪಡೆದಿದ್ದಾರೆ ಎಂಬುದು ತಿಳಿಸುವುದು ನನ್ನ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ಮಿ. ನಿರಾಣಿ ತನ್ನ ಶಿಕ್ಷಣ ಸಂಸ್ಥೆ ಮತ್ತು ಸಕ್ಕರೆ ಕಾರ್ಖಾನೆಗೆ ಪಡೆದಿರುವ ಲಾಭದ ಮಾಹಿತಿಯನ್ನು ನೀಡಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.