ADVERTISEMENT

ನಕಲಿ ವಿದ್ಯಾರ್ಥಿಗಳ ಹೆಸರಲ್ಲಿ ಹಣ ದುರುಪಯೋಗ: ತನಿಖೆಗೆ ಜಿ.ಪಂ ಸಿಇಒ ಆದೇಶ

ಸಮಾಜ ಕಲ್ಯಾಣ ಇಲಾಖೆ; ನಕಲಿ ವಿದ್ಯಾರ್ಥಿಗಳ ಹೆಸರಲ್ಲಿ ಹಣ ದುರುಪಯೋಗ

ಬಸವರಾಜ ಸಂಪಳ್ಳಿ
Published 6 ಸೆಪ್ಟೆಂಬರ್ 2024, 6:05 IST
Last Updated 6 ಸೆಪ್ಟೆಂಬರ್ 2024, 6:05 IST
ರಿಷಿ ಆನಂದ್‌
ರಿಷಿ ಆನಂದ್‌   

ವಿಜಯಪುರ: 2023-24ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಕೊಡುವ ₹20 ಸಾವಿರ ನಗದು ಯೋಜನೆಯ ಹಣವನ್ನು ಇಲಾಖೆ ಸಿಬ್ಬಂದಿ ನುಂಗಿ ಹಾಕಿರುವ ಪ್ರಕರಣದ ತನಿಖೆಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್‌ ಆದೇಶಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಗುರುವಾರ ಪ್ರಕಟವಾದ ‘ನಕಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಹಣ ಗುಳುಂ!’ ವಿಶೇಷ ವರದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪಂಚಾಯ್ತಿ ಸಿಇಒ ರಿಷಿ ಆನಂದ್, ‘ಹಣ ದುರ್ಬಳಕೆಯಾಗಿರುವ ಕುರಿತು ವಿಚಾರಣೆ ನಡೆಸಲು ಕ್ರಮಕೈಗೊಳ್ಳಲಾಗಿದೆ. ತನಿಖಾ ವರದಿ ಆಧಾರದ ಮೇಲೆ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಕ್ರಮಕ್ಕೆ ಆಗ್ರಹ:

‘ಎಸ್‌ಸಿ, ಎಸ್‌ಟಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಬದಲಿಗೆ ನಕಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಹಣ ಲೂಟಿಯಾಗಿರುವುದು ಸತ್ಯದ ಸಂಗತಿ. ಸಮಾಜ ಕಲ್ಯಾಣ ಇಲಾಖೆಗೆ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಪ್ರೋತ್ಸಾಹ ಧನವನ್ನು ಕೇಳಿ ಕೇಳಿ ಸುಸ್ತಾಗಿ ಕೇಳೋದನ್ನೇ ಬಿಟ್ಟಿದ್ದಾರೆ. ಈ ಹಗರಣದಲ್ಲಿ ಕೆಲವು ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಇಲಾಖೆ ಸಿಬ್ಬಂದಿ ಶಾಮಿಲಾಗಿ ನುಂಗಿದ್ದಾರೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಸಂಜು ಕಂಬಾಗಿ ಆರೋಪಿಸಿದರು.

ADVERTISEMENT

‘ಎಸ್‌ಸಿ, ಎಸ್‌ಟಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಬೇಕಾದ ಹಣ ಕಣ್ಣೆದುರೇ ತಮ್ಮ ಸಿಬ್ಬಂದಿ ದೋಚಿದರೂ ಕಂಡು ಕಾಣದಂತೆ ಇರುವ ಹಾಗೂ ಯಾವುದೇ ವಿಷಯ ಕೇಳಿದರೂ ನೋಡುತ್ತೇನೆ, ಮಾಡುತ್ತೇನೆ, ಈ ಬಗ್ಗೆ ನನಗೆ ಮಾಹಿತಿಯಿಲ್ಲ, ನನಗೆ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡುವ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕರ  ವಿರುದ್ಧವೂ ಕ್ರಮಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

ಪ್ರತಿಭಟನೆ ಎಚ್ಚರಿಕೆ:

‘ನಕಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಹಣ ನುಂಗುವ ಜೊತೆಗೆ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇಂತಹ ಹಲವು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇಲಾಖೆಯಲ್ಲಿ ಸಾಕಷ್ಟು ಅವಾಂತರಗಳು ನಡೆಯುತ್ತಿದ್ದರೂ ಜಿಲ್ಲೆಯ ಮೇಲಧಿಕಾರಿಗಳು ಮತ್ತು ಸಚಿವರು ಮೌನವಹಿಸಿದ್ದು ಖಂಡನೀಯ’ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯ ಕುಮಾರ ಅಜಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಣ ದುರ್ಬಳಕೆಯಾಗಿರುವ ಕುರಿತು ವಿಚಾರಣೆ ನಡೆಸುತ್ತೇವೆ. ತನಿಖಾ ವರದಿ ಆಧಾರದ ಮೇಲೆ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು
ರಿಷಿ ಆನಂದ್ಸಿಇಒಜಿಲ್ಲಾ ಪಂಚಾಯ್ತಿ ವಿಜಯಪುರ 
ಸಂಜು ಕಂಬಾಗಿ
ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳ ಹಣವನ್ನು ನುಂಗಿರುವ ಅಧಿಕಾರಿ ಸಿಬ್ಬಂದಿ ವಿರುದ್ಧ ತಕ್ಷಣ ಕ್ರಮಕೈಗೊಳ್ಳದೇ ಇದ್ದರೇ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು
ಸಂಜು ಕಂಬಾಗಿಜಿಲ್ಲಾ ಪ್ರಧಾನ ಸಂಚಾಲಕ ಡಿಎಸ್‌ಎಸ್‌
ಅಕ್ಷಯ ಕುಮಾರ ಅಜಮನಿ
ಸಮಾಜ ಕಲ್ಯಾಣ ಇಲಾಖೆಯ ಭ್ರಷ್ಟಾಚಾರದ ವಿರುದ್ಧ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯ್ತಿ ಸಿಇಒ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಕ್ರಮಕೈಗೊಳ್ಳಬೇಕು ಇಲ್ಲವಾದರೆ. ದಲಿತ ವಿದ್ಯಾರ್ಥಿ ಪರಿಷತ್‌ ಹೋರಾಟ ನಡೆಸಲಿದೆ  
ಅಕ್ಷಯ ಕುಮಾರ ಅಜಮನಿಜಿಲ್ಲಾ ಸಂಚಾಲಕ ದಲಿತ ವಿದ್ಯಾರ್ಥಿ ಪರಿಷತ್
ಸಾಕಷ್ಟು ಪುರಾವೆ ಲಭ್ಯ: ಮಾನವರ
‘ಪ್ರಕರಣದ ತನಿಖೆಗೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಹಣ ದುರುಪಯೋಗವಾಗಿರುವ ಬಗ್ಗೆ ಸಾಕಷ್ಟು ಪುರಾವೆಗಳ ಜೊತೆಗೆ ಅನುಮಾನಗಳು ಕಂಡುಬಂದಿವೆ. ಎರಡು ದಿನ ಕಾಯಿರಿ ಹಣ ದುರುಪಯೋಗ ಮಾಡಿದ ಸಿಬ್ಬಂದಿ ವಿರುದ್ಧ ಅಗತ್ಯ ಕ್ರಮ ಕೈಗೊಂಡು ಎಷ್ಟು ಫಲಾನುಭವಿಗಳ ಹಣ ದುರುಪಯೋಗವಾಗಿದೆ ಎಂಬ ಸಂಪೂರ್ಣ ಮಾಹಿತಿ ನೀಡುತ್ತೇನೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.