ADVERTISEMENT

ಶಿಕ್ಷಕರು ಹಣಕ್ಕೆ ಮತ ಮಾರಿಕೊಳ್ಳರು: ಬಿಜೆಪಿ ಅಭ್ಯರ್ಥಿ ಅರುಣ ಶಹಪೂರ ವಿಶ್ವಾಸ

ವಿಧಾನ ಪರಿಷತ್‌ ವಾಯವ್ಯ ಪದವೀಧರ ಕ್ಷೇತ್ರದ ಚುನಾವಣೆ

ಬಸವರಾಜ ಸಂಪಳ್ಳಿ
Published 9 ಜೂನ್ 2022, 12:49 IST
Last Updated 9 ಜೂನ್ 2022, 12:49 IST
ಅರುಣ ಶಹಪೂರ
ಅರುಣ ಶಹಪೂರ   

ವಿಜಯಪುರ: ವಿಧಾನ ಪರಿಷತ್‌ ವಾಯವ್ಯ ಪದವೀಧರ ಕ್ಷೇತ್ರದಿಂದ ಮೂರನೇ ಭಾರಿ ಆಯ್ಕೆ ಬಯಸಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಅವರೊಂದಿಗೆ ಚುನಾವಣೆ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಪೂರ್ಣಪಾಠ ಇಂತಿದೆ.

* ಚುನಾವಣೆ ಸಿದ್ಧತೆ ಹೇಗೆ ನಡೆದಿದೆ?
ಪಕ್ಷದ ಕಾರ್ಯಕರ್ತರು, ಶಿಕ್ಷಕರ ಸಂಘಟನೆಗಳು,ರಾಜ್ಯ ನಾಯಕರು, ಸಚಿವರು, ಶಾಸಕರು ನನ್ನ ಪರವಾಗಿ ಪ್ರಚಾರ ನಡೆಸಿದ್ದಾರೆ. ಪಕ್ಷದ ಸಾಧನೆಗಳ ಆಧಾರದಮೇಲೆ ಮತಯಾಚನೆ ನಡೆದಿದೆ. ವಿರೋಧ ಪಕ್ಷಗಳು ನಾನು ಕ್ಷೇತ್ರದಲ್ಲಿ ಓಡಾಡಿಲ್ಲ, ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಅಪಪ್ರಚಾರ ನಡೆಸಿದ್ದಾರೆ. ನನ್ನ ಮೇಲೆ ಸುಳ್ಳಿನ ಗದಾಪ್ರಹಾರ ನಡೆದಿದೆ. ಆದರೆ, ಮತದಾರರಲ್ಲಿ ನನ್ನ ಬಗ್ಗೆಅನುಕಂಪ ಸೃಷ್ಟಿಯಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ನನ್ನ ಪರವಾಗಿ ಕಾರ್ಯನಿರ್ವಹಿಸುತ್ತಿವೆ.

ADVERTISEMENT

* ಪ್ರತಿಸ್ಪರ್ಧಿಗಳ ಬಗ್ಗೆ ಏನು ಹೇಳಬಯಸುವಿರಿ?
ಕಾಂಗ್ರೆಸ್‌ ಅಭ್ಯರ್ಥಿಗೂ ನನಗೂ ಬಹಳ ವ್ಯತ್ಯಾಸವಿದೆ. ಅವರಿಗೆ 77 ವರ್ಷ, ನನಗೆ 47 ವರ್ಷ. ನಾನು 33 ವಿಧಾನಸಭಾ ಕ್ಷೇತ್ರಗಳಲ್ಲಿ 24X7 ಕಾರ್ಯನಿರ್ವಹಿಸುತ್ತಿದ್ದೇನೆ. ಇಡೀ ಕ್ಷೇತ್ರ ಸುತ್ತಾಡುತ್ತಿದ್ದೇನೆ. ಆದರೆ, ಕಾಂಗ್ರೆಸ್‌ ಅಭ್ಯರ್ಥಿಗೆ 33 ಹೆಜ್ಜೆ ದೃಢವಾಗಿ ಇಡುವುದು ಕಷ್ಟವಾಗಿದೆ. ಹೊರಟ್ಟಿ ಬಿಜೆಪಿಗೆ ಬಂದಿರುವುದರಿಂದ ನನಗೆ ಹೆಚ್ಚು ಅನುಕೂಲವಾಗಿದೆ.ಕಾಂಗ್ರೆಸ್‌ ಅಭ್ಯರ್ಥಿ ಆಮಿಷ ಒಡ್ಡುವ ಕಾರ್ಯ ನಡೆಸಿದ್ದಾರೆ. ವರ್ಷಕ್ಕೆ ಹತ್ತಾರು ಲಕ್ಷ ವೇತನ ಪಡೆಯುವ ಶಿಕ್ಷಕರು ಒಂದೆರಡು ಸಾವಿರಕ್ಕೆ ಮಾರಿಕೊಳ್ಳುವುದಿಲ್ಲ ಎಂಬ ವಿಶ್ವಾಸ ಇದೆ.

* ಶಿಕ್ಷಕ ಮತದಾರರಿಗೆ ಯಾವ ಭರವಸೆ ನೀಡುತ್ತೀರಿ?
ನಾಲ್ಕನೇ ವೇತನ ಆಯೋಗದ ಶಿಫಾರಸು ಜಾರಿಗೆ ಆದ್ಯತೆ. ಒಪಿಎಸ್‌ ಜಾರಿಗೆ ಈಗಾಗಲೇ ಬಿಜೆಪಿ ಸರ್ಕಾರ ಕಾರ್ಯಾಚರಣೆ ನಡೆಸಿದೆ. ಹಣಕಾಸು ಸ್ಥಿತಿ ಸುಧಾರಣೆಯಾದ ಬಳಿಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ವಿಸ್ತರಣೆ ಮಾಡಲಾಗುವುದು, ಕಾಲ್ಪನಿಕ ವೇತನ ಸಮಸ್ಯೆ ನಿವಾರಣೆಗೆ ಒತ್ತು, ವೇತನ ತಾರತಮ್ಯ ನಿವಾರಣೆಗೆ ಆದ್ಯತೆ, ಅತಿಥಿ ಉಪನ್ಯಾಸಕರ ಸೇವಾ ಸಕ್ರಮಕ್ಕೆ ಆದ್ಯತೆ ನೀಡಲಾಗುವುದು.

* ಪಕ್ಷದೊಳಗೆ ಟಿಕೆಟ್‌ ವಂಚಿತರ ಅಸಮಾಧಾನ ಚುನಾವಣೆಯಲ್ಲಿ ಹಿನ್ನೆಡೆಗೆ ಕಾರಣವಾಗುವುದೇ?
ಅಸಮಾಧಾನ ಸ್ವಾಭಾವಿಕ. ಆದರೆ, ರಾಜ್ಯ ನಾಯಕರು, ಸ್ಥಳೀಯ ನಾಯಕರು ಒಟ್ಟಾಗಿ ಹೋಗಲು ಸೂಚನೆ ನೀಡಿದ್ದಾರೆ. ನನ್ನ ಮತ್ತು ಪಕ್ಷದ ಪರವಾಗಿ ಕೆಲಸ ಮಾಡಲು ಮನವೊಲಿಸಿದ್ದಾರೆ. ಪಕ್ಷ ನಿಷ್ಠೆಯಿಂದ ನನಗೆ ಟಿಕೆಟ್ ಸಿಕ್ಕಿದೆ. ಟಿಕೆಟ್‌ ವಂಚಿತರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಲಭಿಸಲಿವೆ. ಯಾವುದೇ ಕಾರಣಕ್ಕೂ ಹಿನ್ನಡೆಯಾಗುವುದಿಲ್ಲ ಎಂಬ ವಿಶ್ವಾಸ ಇದೆ.

* ಮೂರನೇ ಬಾರಿಗೆ ನಿಮ್ಮನ್ನುಏಕೆ ಆಯ್ಕೆ ಮಾಡಬೇಕು?
ಎರಡು ಅವಧಿಯ ಅನುಭವ, ಕ್ರಿಯಾಶೀಲತೆ. ಸರ್ಕಾರ ಮತ್ತು ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದೇನೆ. ರಾಜಕೀಯ ಹೊರತಾಗಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಶಿಕ್ಷಣ ಕ್ಷೇತ್ರದ ಪರಿವರ್ತನೆ ಬಗ್ಗೆ ಸ್ಪಷ್ಟತೆ ಇದೆ. ನಾನು ಆಯ್ಕೆಯಾದರೆ ಶಿಕ್ಷಕರ ಸಮಸ್ಯೆ ಬಗೆಹರಿಯುತ್ತವೆ ಎಂಬ ವಿಶ್ವಾಸ ಮತದಾರರಲ್ಲಿ ಇದೆ. ಕಳೆದ ಎರಡು ಅವಧಿಯಲ್ಲಿ ಬಂದ ಪುಟ್ಟ, ಹೋದಪುಟ್ಟ ಎಂಬಂತೆ ವರ್ತಿಸಿಲ್ಲ. ಮೂರನೇ ಅವಧಿ ಮಹತ್ವಪೂರ್ಣವಾಗಿದೆ. ಶಿಕ್ಷಕರಿಗೆ ಕೊಡುಗೆ ಕೊಟ್ಟು ನನ್ನ ರಾಜಕೀಯ ಸ್ಥಾನವನ್ನೂ ಭದ್ರಪಡಿಸಿಕೊಳ್ಳುತ್ತೇನೆ.

* ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಚುನಾವಣೆ ಮೇಲೆ ಪರಿಣಾಮ ಬೀರುವುದೇ?
ಪಠ್ಯ ಪರಿಷ್ಕರಣೆ ಚರ್ಚೆ ತರಗತಿಯಲ್ಲಿ ನಡೆದಿಲ್ಲ, ವಿಷಯ ಶಿಕ್ಷಕರ ಫೋರಂನಲ್ಲಿ ನಡೆದಿಲ್ಲ, ಶಿಕ್ಷಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿಲ್ಲ. ಕೇವಲ ಮಾಧ್ಯಮಗಳಲ್ಲಿ, ರಾಜಕಾರಣಿಗಳಲ್ಲಿ ಹಾಗೂ ಸೋಕಾಲ್ಡ್‌ ಪ್ರಗತಿಪರರ ನಡುವೆ ಚರ್ಚೆ ನಡೆದಿದೆ. ಶೈಕ್ಷಣಿಕ ಹಿತದೃಷ್ಟಿಯಿಂದ ಆಕ್ಷೇಪಣೆಗಳನ್ನು ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿಗೆ, ಶಿಕ್ಷಣ ಸಚಿವರಿಗೆ ಮನವಿ ಮಾಡುತ್ತೇನೆ.

* ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಿಜೆಪಿ, ಆರ್‌ಎಸ್‌ಎಸ್‌ ಅಜೆಂಡಾದಿಂದ ಕೂಡಿದೆ ಎಂಬ ಆರೋಪ ಕೇಳಿಬರುತ್ತಿದೆಯಲ್ಲ?
–ಆರ್‌ಎಸ್‌ಎಸ್‌, ಬಿಜೆಪಿ ಅಜೆಂಡಾ ಎಂಬುದು ಪೂರ್ವಗ್ರಹ ಪೀಡಿತ ಅಭಿಪ್ರಾಯ. ಎನ್‌ಇಪಿಯು ಕೇಸರೀಕರಣ, ಹಸಿರೀಕರಣ, ಕೆಂಪೀಕರಣ ಮುಕ್ತವಾವಾಗಿದೆ. ಲೋಪಗಳಿದ್ದರೆ ತಿಳಿಸಿ, ಹುನ್ನಾರ ಇದ್ದರೂ ತಿಳಿಸಿ ಅದನ್ನು ಸರಿಪಡಿಸಲಾಗುವುದು.

* ಅಕ್ಕಮಹಾದೇವಿ ವಿ.ವಿ ಮುಚ್ಚಲು ಬಿಜೆಪಿ ಸರ್ಕಾರ ಮುಂದಾಗಿದೆ. ಇದರಲ್ಲಿ ನಿಮ್ಮ ಪಾತ್ರವೇ ಪ್ರಧಾನವಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ಅಕ್ಕನ ವಿ.ವಿ ಆರಂಭವಾಗಿ ಎರಡು ದಶಕವಾಗಿದೆ. ನಿರೀಕ್ಷಿತ ಗುರಿ ಸಾಧಿಸಿಲ್ಲ. ವಿ.ವಿಯ ದಿಕ್ಕು, ದೆಸೆ ಎತ್ತ ಎಂದು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.

ಯಾವುದೇ ಸರ್ಕಾರ ಬಂದರೂ ವಿ.ವಿ ಬಂದ್‌ ಮಾಡಲು ಸಾಧ್ಯವಿಲ್ಲ.ಮಹಿಳಾ ವಿ.ವಿ ಅಫಿಲೇಟೆಡ್‌ ಅಥವಾ ಯುನಿಟರಿ ವಿ.ವಿ ಆಗಬೇಕೇ ಎಂಬ ಚರ್ಚೆ ನಡೆದಿದೆ.ಬಂದ್‌ ಮಾಡುತ್ತೇವೆ ಎಂಬುದು ಕಾಂಗ್ರೆಸ್‌ನ ಅಪಪ್ರಚಾರ. ಲಿಂಗಾಯತ ಚಳವಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಕ್ಕಮಹಾದೇವಿ ಹೆಸರನ್ನು ಇಡಲಾಗಿದೆಯೇ ಹೊರತು, ಮತ್ತೇನೂ ಇಲ್ಲ. ವಿ.ವಿ ಕಾಯಕಲ್ಪಕ್ಕೆ ಸರ್ಕಾರ ಒತ್ತು ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.