ADVERTISEMENT

ಶಿಕ್ಷಕರಿಗಾಗಿ ಶಿಕ್ಷಕನಿಂದ ಸ್ಪರ್ಧೆ: ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರ ಲೋಣಿ ಅಭಿಮತ

ಬಸವರಾಜ ಸಂಪಳ್ಳಿ
Published 9 ಜೂನ್ 2022, 12:49 IST
Last Updated 9 ಜೂನ್ 2022, 12:49 IST
ಚಂದ್ರಶೇಖರ ಲೋಣಿ
ಚಂದ್ರಶೇಖರ ಲೋಣಿ   

ವಿಜಯಪುರ: ಇಂಡಿ ತಾಲ್ಲೂಕಿನ ಅಗಸನಾಳ ಗ್ರಾಮದ ಬೀರೇಶ್ವರ ಪ್ರೌಢಶಾಲೆಯ ಇಂಗ್ಲಿಷ್‌ ಭಾಷಾ ಶಿಕ್ಷಕ ಚಂದ್ರಶೇಖರ ಲೋಣಿ ಅವರು ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್‌ ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

2016ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲೋಣಿ ಅವರು 1,270 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಈ ಬಾರಿಯೂ ಪಕ್ಷೇತರರಾಗಿ ಸ್ಪರ್ಧೆಗಳಿದಿದ್ದ ಅವರಿಗೆ ಜೆಡಿಎಸ್‌ ‘ಬಿ’ ಫಾರಂ ನೀಡುವ ಮೂಲಕ ಬಿಜೆಪಿ, ಕಾಂಗ್ರೆಸ್‌ಗೆ ಕಣದಲ್ಲಿ ಸ್ಪರ್ಧೆ ಒಡ್ಡಿದೆ.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ವಿಜಯಪುರ ಜಿಲ್ಲಾ ಮುಖ್ಯೋಪಾಧ್ಯಾಯರು ಮತ್ತು ಪ್ರಾಚಾರ್ಯರ ಮಹಾಮಂಡಳಿಯ ಅಧ್ಯಕ್ಷರಾಗಿಯೂ ಅವರು ಪ್ರಸ್ತುತ ಕಾರ್ಯನಿರ್ವಹಿಸಿದ್ದಾರೆ.

ADVERTISEMENT

‘ಶಿಕ್ಷಕರಿಂದ ಶಿಕ್ಷಕರಿಗಾಗಿ ಸ್ಪರ್ಧಿಸಿರುವ ನನ್ನ ಗೆಲುವು ನಿಶ್ಚಿತ’ ಎಂದು ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

* ಶಿಕ್ಷಕ ಮತದಾರರಿಗೆ ಯಾವ ಭರವಸೆ ನೀಡಲು ಭಯಸುತ್ತೀರಿ?
ಜೆಡಿಎಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಅವೈಜ್ಞಾನಿಕವಾಗಿರುವ ಹಾಗೂ ನೌಕರರ ವಿರೋಧಿಯಾಗಿರುವ ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ ಜಾರಿಗೆ ಮೊದಲ ಆದ್ಯತೆ ನೀಡುತ್ತೇನೆ. 1995ರ ನಂತರದಿಂದ ಅನುದಾನಕ್ಕೆ ಒಳಪಡದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಲಾಗುವುದು.

1987ರಿಂದ 95ರ ವರೆಗೆ ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸಿರುವ ಶಿಕ್ಷಕರಿಗೆ ಪಿಂಚಣಿ, ಕಾಲ್ಪನಿಕ ವೇತನ ದೊರಕಿಸುವ ಉದ್ದೇಶ ಇದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ಪದೋನ್ನತಿ ತಾರತಮ್ಯ ಹೋಗಲಾಡಿಸಲು ಆದ್ಯತೆ ನೀಡುತ್ತೇನೆ.

2008ರಲ್ಲಿ ನೇಮಕವಾಗಿರುವ ಸರ್ಕಾರಿ ಶಾಲಾ ಶಿಕ್ಷಕರಿಗೆ ವಿಶೇಷ ಭತ್ಯೆ ಕೊಡಿಸಲು, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಲು, ಜೆಒಸಿ ಶಿಕ್ಷಕರಿಗೆ ಹಿಂದಿನ ಸೇವೆ ಪರಿಗಣಿಸಿ, ಪಿಂಚಣಿ ಕೊಡಿಸಲಾಗುವುದು.

* ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ಸಂಘಟನೆ ಕ್ಷೀಣವಾಗಿದೆ. ಪ್ರತಿಪಕ್ಷಗಳು ಸಾಕಷ್ಟು ಪ್ರಬಲವಾಗಿವೆ. ನಿಮ್ಮ ಸ್ಪರ್ಧೆ ಕೇವಲ ನೆಪಮಾತ್ರವೇ?
–ಹಾಗೇನಿಲ್ಲ.ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಯಾವ ಪಕ್ಷವೂ ವಿಧಾನ ಪರಿಷತ್‌ ಚುನಾವಣೆಯಲ್ಲಿ ಶಿಕ್ಷಕರಿಗೆ ಟಿಕೆಟ್‌ ನೀಡುತ್ತಿಲ್ಲ. ಇದನ್ನು ಪ್ರತಿಭಟಿಸಿ ಪ್ರಥಮ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೆ. ಇದೀಗ ನನ್ನ ಸಾಮರ್ಥ್ಯ ಮನಗಂಡು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟಿಕೆಟ್‌ ನೀಡಿದ್ದಾರೆ. ಈಗಾಗಲೇ ಕ್ಷೇತ್ರದಾದ್ಯಂತ ಪ್ರಚಾರ ನಡೆಸಲಾಗಿದೆ. ಶಿಕ್ಷಕ ಕ್ಷೇತ್ರಕ್ಕೆ ಶಿಕ್ಷಕನೇ ಸ್ಪರ್ಧಿಸಿರುವುದರಿಂದಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಜೆಪಿ ಅಭ್ಯರ್ಥಿ ಅರುಣ್‌ ಶಹಪುರ ಎರಡು ಅವಧಿಯಲ್ಲಿ ಶಿಕ್ಷಕರ ಕುಂದುಕೊರತೆಗಳಿಗೆ ಸ್ಪಂದಿಸಿಲ್ಲ. ಶಿಕ್ಷಕರ ಕೈಗೆ ಸಿಕ್ಕಿಲ್ಲ. ಅಲ್ಲದೇ, ಅವರು ಶಿಕ್ಷಕರೇ ಅಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಹುಕ್ಕೇರಿಗೆ ವಯಸ್ಸಾಗಿದೆ. ಅವರು ರಾಜಕಾರಣಿಯೇ ಹೊರತು ಶಿಕ್ಷಕರ ಪ್ರತಿನಿಧಿಯಲ್ಲ. ಶಿಕ್ಷಕರ ಸಮಸ್ಯೆ, ಬೇಡಿಕೆಗಳ ಬಗ್ಗೆ ಅವರಿಗೆ ಅರಿವಿಲ್ಲ. ಹೀಗಾಗಿ ನನ್ನ ಗೆಲುವು ನಿಶ್ಚಿತ.

ಈ ಹಿಂದೆ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಎಸ್‌.ಎಸ್‌.ಪೂಜಾರಿ ಅವರು ಮೂರು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಹೀಗಾಗಿ ವಾಯವ್ಯ ಶಿಕ್ಷಕರ ಕ್ಷೇತ್ರ ಜೆಡಿಎಸ್‌ ಭದ್ರಕೋಟೆಯಾಗಿದೆ.

* ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಬಗ್ಗೆ ನಿಮ್ಮ ಅಭಿಪ್ರಾಯವೇನು?
–ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಪುಸ್ತಕವನ್ನು ಮಕ್ಕಳಿಗೆ ಬೋಧಿಸಬಾರದು. ಗೊಂದಲ, ವಿವಾದಕ್ಕೆ ಕಾರಣವಾಗಿರುವ ಪರಿಷ್ಕೃತ ಪಠ್ಯವನ್ನು ರದ್ದುಗೊಳಿಸಬೇಕು. ಹಳೇ ಪಠ್ಯ ಪುಸ್ತಕಗಳನ್ನೇ ವಿತರಿಸಬೇಕು.

* ಚುನಾವಣೆಗೆ ಸಿದ್ಧತೆ ಹೇಗೆ ನಡೆದಿದೆ?
–ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಕಾರ್ಯಕರ್ತರು, ಮುಖಂಡರು, ಕರ್ನಾಟಕ ರಾಜ್ಯ ಮಾಧ್ಯಮಿಕ ನೌಕರರ ಸಂಘದ ಪದಾಧಿಕಾರಿಗಳು ಮೂರು ಜಿಲ್ಲೆಗಳಲ್ಲಿ ಪ್ರತಿ ಶಾಲಾ, ಕಾಲೇಜಿಗೆ ಭೇಟಿ ನೀಡಿ ನನ್ನ ಪರ ಪ್ರಚಾರ ನಡೆಸಿದ್ದಾರೆ. ಶಿಕ್ಷಕರು ತಮ್ಮ ಮತವನ್ನು ಶಿಕ್ಷಕನಿಗೆ ನೀಡುವ ಮೂಲಕ ವಿಧಾನ ಪರಿಷತ್‌ನಲ್ಲಿ ಶಿಕ್ಷಕ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.