ADVERTISEMENT

ವಿಜಯಪುರ | ನಕಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಹಣ ಗುಳುಂ!

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಸಿಬ್ಬಂದಿ ವಿರುದ್ಧ ಆರೋಪ

ಬಸವರಾಜ ಸಂಪಳ್ಳಿ
Published 5 ಸೆಪ್ಟೆಂಬರ್ 2024, 5:42 IST
Last Updated 5 ಸೆಪ್ಟೆಂಬರ್ 2024, 5:42 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ವಿಜಯಪುರ: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸಮಾಜ ಕಲ್ಯಾಣ ಇಲಾಖೆ ಕೊಡುವ ₹20 ಸಾವಿರ ನಗದು ಯೋಜನೆಯ ಹಣವನ್ನು ಇಲಾಖೆ ಸಿಬ್ಬಂದಿಯೇ ಲಪಟಾಯಿಸಿದ ಆರೋಪ ಕೇಳಿ ಬಂದಿದೆ.

‘2023–24ನೇ ಸಾಲಿನಲ್ಲಿ ಜಿಲ್ಲೆಯ ಎಸ್‌ಸಿ, ಎಸ್‌ಟಿ ನೈಜ ಫಲಾನುಭವಿಗಳ ಬದಲಿಗೆ ನಕಲಿ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಆನ್‌ ಲೈನ್‌ ಮೂಲಕ ಮಾಹಿತಿ ದಾಖಲಿಸಿ, ಬ್ಯಾಂಕ್‌ನ ನಕಲಿ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತ ಮೊಹಮ್ಮದ್ ಹನೀಫ್ ಮನಿಯಾರ ದೂರಿದ್ದಾರೆ.

ADVERTISEMENT

‘ನಗದು ಬಹುಮಾನ ಪಡೆದ ಫಲಾನುಭವಿಗಳ ಪಟ್ಟಿಯಲ್ಲಿನ ವಿದ್ಯಾರ್ಥಿಗಳ ಹೆಸರಿಗೂ ಅವರ ತಂದೆ ಹೆಸರಿಗೂ ಮತ್ತು ಅವರ ಜಾತಿಗೂ ತಾಳೆಯಾಗುತ್ತಿಲ್ಲ. ಅರ್ಜಿಯಲ್ಲಿ ನಮೂದಿಸಿದ ವಿದ್ಯಾರ್ಥಿ ಮತ್ತು ತಂದೆಯ ಜಾತಿ ಬೇರೆ ಬೇರೆ ಇದೆ. ಅರ್ಹ ವಿದ್ಯಾರ್ಥಿಗಳ ಬದಲು ನಕಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ತೆರೆಯಲಾದ ಖಾತೆಗಳಿಗೆ ನಗದು ವರ್ಗಾವಣೆಯಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದಾಹರಣೆಗೆ ಅರ್ಜಿಯಲ್ಲಿ ವಿದ್ಯಾರ್ಥಿನಿ ಹೆಸರು ತುಳಸವ್ವ ಮುಕಂದ ಚನ್ನದಾಸರ ಎಂದಿದ್ದರೆ,  ತಂದೆ ಹೆಸರು ಸುರೇಶ ರಾಮ್ಜಿ ರಾಠೋಡ ಎಂದು ನಮೂದಾಗಿದೆ. ವಿದ್ಯಾರ್ಥಿನಿ ಚನ್ನದಾಸರ ಜಾತಿಗೆ ಸೇರಿದ್ದರೆ, ತಂದೆ ಲಂಬಾಣಿ ಸಮಾಜದವರು ಎಂದು ದಾಖಲಾಗಿದೆ. ಮತ್ತೊಂದು ಅರ್ಜಿಯಲ್ಲಿ ವಿದ್ಯಾರ್ಥಿ ಹೆಸರು ಸಂದೀಪ ಮಲಕಣ್ಣ ಬಿರಾದಾರ ಎಂದಿದ್ದರೆ, ತಂದೆ ಹೆಸರು ಸುಭಾಶ ಲಂಬಾಣಿ ಎಂದಿದೆ. ವಿದ್ಯಾರ್ಥಿ ಜಾತಿಗೂ ತಂದೆ ಜಾತಿಗೂ ಸಾಮ್ಯತೆ ಇಲ್ಲ’ ಎಂದರು. 

ಪರಿಶೀಲಿಸಿ ಸೂಕ್ತ ಕ್ರಮ:

‘ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆ, ಆಧಾರ್‌ ಕಾರ್ಡ್‌ ಮತ್ತು ಶಾಲೆ ದಾಖಲಾತಿಗಳ ಸಂಪೂರ್ಣ ಮಾಹಿತಿ ಪರಿಶೀಲಿಸಿದ ಬಳಕವೇ ಅರ್ಹ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ನಗದು ಬಹುಮಾನ ಪಾವತಿಸಲಾಗಿದೆ. ಒಂದು ವೇಳೆ ವ್ಯತ್ಯಾಸ ಆಗಿದ್ದರೆ ಈ ಕೃತ್ಯ ಎಸಗಿದ ಸಿಬ್ಬಂದಿ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು’ ಎಂದು ವಿಜಯಪುರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘2023–24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಎಷ್ಟು ಮಂದಿ ಅರ್ಹ ವಿದ್ಯಾರ್ಥಿಗಳಿಗೆ ಎಷ್ಟು ನಗದು ಬಹುಮಾನ ನೀಡಲಾಗಿದೆ ಎಂಬ ಮಾಹಿತಿ ಸದ್ಯಕ್ಕಿಲ್ಲ. ಪರಿಶೀಲಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.