ADVERTISEMENT

‘ಅಭ್ಯರ್ಥಿಗಳ ಖರ್ಚು, ವೆಚ್ಚದ ಮೇಲೆ ನಿಗಾ ವಹಿಸಿ’

ಚುನಾವಣಾ ವೆಚ್ಚ ವೀಕ್ಷಕ ಅನುಪಕುಮಾರ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 14:27 IST
Last Updated 13 ಏಪ್ರಿಲ್ 2024, 14:27 IST
ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ವೆಚ್ಚ ವೀಕ್ಷಕ ಐ.ಆರ್.ಎಸ್ ಅಧಿಕಾರಿ ಅನುಪಕುಮಾರ ಮಾತನಾಡಿದರು
ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ವೆಚ್ಚ ವೀಕ್ಷಕ ಐ.ಆರ್.ಎಸ್ ಅಧಿಕಾರಿ ಅನುಪಕುಮಾರ ಮಾತನಾಡಿದರು   

ವಿಜಯಪುರ: ಲೋಕಸಭಾ ಚುನಾವಣೆಗಾಗಿ ಅಭ್ಯರ್ಥಿಗಳು ಮಾಡುವ ಖರ್ಚು, ವೆಚ್ಚದ ಮೇಲೆ ತೀವ್ರ ನಿಗಾವಹಿಸಬೇಕು ಎಂದು ವಿಜಯಪುರ ಲೋಕಸಭಾ ಚುನಾವಣಾ ವೆಚ್ಚ ವೀಕ್ಷಕರಾದ ಐ.ಆರ್.ಎಸ್ ಅಧಿಕಾರಿ ಅನುಪಕುಮಾರ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಂತೆ ಲೋಕಸಭಾ ಚುನಾವಣೆಯನ್ನು ಅಷ್ಟೇ ಗಂಬೀರವಾಗಿ ಪರಿಗಣಿಸಿ ಅಭ್ಯರ್ಥಿಗಳು ಮಾಡುವ ಖರ್ಚು, ವೆಚ್ಚಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದರು.

ಅಭ್ಯರ್ಥಿಗಳಿಂದ ಬ್ಯಾಂಕ್‌ಗಳಲ್ಲಿ ಹೊಸ ಖಾತೆ ತೆರೆಯಲಾಗುತ್ತಿದೆಯಾ, ಆ ಖಾತೆಗಳಿಗೆ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ವರ್ಗಾವಣೆಯಾಗುತ್ತಿದೆಯಾ ಎಂದು ವಿಚಾರಿಸಿ ಖಚಿತಪಡಿಸಿಕೊಳ್ಳಬೇಕು, ಚೆಕ್ ಪೋಸ್ಟ್‌ಗಳಲ್ಲಿ ಕಾಟಾಚಾರಕ್ಕೆ ತಪಾಸಣೆ ಮಾಡದೇ, ಕಟ್ಟು ನಿಟ್ಟಾಗಿ ಪರಿಶೀಲಿಸಬೇಕು, ಸಾರ್ವಜನಿಕರಿಗೆ ತೊಂದೆಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ADVERTISEMENT

ಮದ್ಯದಂಗಡಿಗಳಲ್ಲಿ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಮಟ್ಟದ ಸಾರಾಯಿ ಮಾರಾಟವಾದಲ್ಲಿ ತಕ್ಷಣ ಗಮನಕ್ಕೆ ತರಬೇಕು. ವಿಜಯಪುರ ಗಡಿ ಜಿಲ್ಲೆಯಾಗಿರುವುದರಿಂದ ಅಬಕಾರಿ ಇಲಾಖಾ ಅಧಿಕಾರಿ ಹೆಚ್ಚು ಗಮನಹರಿಸಬೇಕು. ಪ್ರಿಂಟಿಂಗ್ ಪ್ರೆಸ್‍ಗಳ ಮೇಲೆ ನಿಗಾ ಇಡುವುದು ಅವಶ್ಯ ಎಂದರು.

ಜಿಲ್ಲಾ ಚುನಾವಣಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಜ.22 ರಂದು ಹೊರಡಿಸಲಾದ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 19,19,048 ಮತದಾರರಿದ್ದು, 9,76,073 ಪುರುಷ, 9,42,757 ಮಹಿಳಾ ಹಾಗೂ 218 ತೃತೀಯ ಲಿಂಗ ಮತದಾರರಿದ್ದಾರೆ. ಗ್ರಾಮೀಣ ಭಾಗದಲ್ಲಿ 1507 ಹಾಗೂ ಪಟ್ಟಣ ಪ್ರದೇಶದಲ್ಲಿ 578 ಸೇರಿ ಒಟ್ಟು 2085 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ ಅನೇಕರಿದ್ದರು.

‘ಕಡಿಮೆ ಮತದಾನವಾದ ಪ್ರದೇಶಗಳಲ್ಲಿ ಜಾಗೃತಿ’

ಜಿಲ್ಲಾ ಪಂಚಾಯಿತಿ ಸಿಇಒ ರಿಶಿ ಆನಂದ ಮಾತನಾಡಿ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿಯಿಂದ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಪ್ರದೇಶಗಳನ್ನು ಗುರುತಿಸಿ ಆ ಪ್ರದೇಶಗಳಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮನೆ ಮನೆಗೆ ಭೇಟಿ ಸೈಕಲ್ ಜಾಥಾ ಹಾಗೂ ಬೈಕ್ ರ‍್ಯಾಲಿ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.