ADVERTISEMENT

ಹದಗೆಟ್ಟ ಹೊರ್ತಿ-ನಿಂಬಾಳ ಕೆ.ಡಿ ರಸ್ತೆ: ವಾಹನ ಸವಾರರ ಪರದಾಟ

ಕೆ.ಎಸ್.ಈಸರಗೊಂಡ
Published 23 ಅಕ್ಟೋಬರ್ 2024, 5:49 IST
Last Updated 23 ಅಕ್ಟೋಬರ್ 2024, 5:49 IST
ಹೊರ್ತಿ–ನಿಂಬಾಳ ಕೆ.ಡಿ ರಸ್ತೆ ಸಂಪೂರ್ಣ ಹಾಳಾಗಿರುವುದು
ಹೊರ್ತಿ–ನಿಂಬಾಳ ಕೆ.ಡಿ ರಸ್ತೆ ಸಂಪೂರ್ಣ ಹಾಳಾಗಿರುವುದು   

ಹೊರ್ತಿ: ಹೊರ್ತಿ-ನಿಂಬಾಳ ಕೆ.ಡಿ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ತುಂಬ ಬೃಹತ್ ಗುಂಡಿಗಳು ಉಂಟಾಗಿವೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಕೂಡಿಸುವ ಪ್ರಮುಖ ಸಂಪರ್ಕ ರಸ್ತೆ ಇದಾಗಿದೆ. ಮುಂದೆ ಇಂಚಗೇರಿ ಕನಕನಾಳ ಮೂಲಕ ಮಹಾರಾಷ್ಟ್ರದ ಆಕಳವಾಡಿ, ಮಾನಿಕನಾಳ, ಗಿರಗಾಂವ ಗ್ರಾಮಗಳನ್ನು ಸೇರಿಸುತ್ತದೆ. ಈ 7.5 ಕಿ.ಮೀ. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ತಗ್ಗು-ಗುಂಡಿ ತಪ್ಪಿಸುತ್ತ ವಾಹನ ಚಲಾಯಿಸಬೇಕಿದೆ. ಕನಿಷ್ಠ ಈ ರಸ್ತೆಗೆ ಪ್ಯಾಚ್ ವರ್ಕ್‌ ಮಾಡಿಯಾದರೂ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೊರ್ತಿ ಮತ್ತು ನಿಂಬಾಳ ಗ್ರಾಮದ ರೈತರು ಮತ್ತು ವಾಹನ ಸವಾರರು ಒತ್ತಾಯಿಸಿದ್ದಾರೆ.

‘ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ’ ಎಂದು ಜೀಪ್‌ ಚಾಲಕ ಶರಬಸು ಎಂ. ಡೋಣಗಿ ದೂರಿದರು.

ADVERTISEMENT

ಹೊರ್ತಿಯಿಂದ ನಿಂಬಾಳ ಕೆಡಿ ಗ್ರಾಮ ಮತ್ತು ತತ್ವಜ್ಞಾನಿ ಗುರುದೇವ ರಾನಡೆಯವರ ದೇವಸ್ಥಾನಕ್ಕೆ ತೆರಳಲು ಭಕ್ತರು ಇದೇ ರಸ್ತೆಯ ಮೂಲಕ ತೆರಳಬೇಕು. ಪವಿತ್ರ ಧಾರ್ಮಿಕ ಸ್ಥಳವಾದ ಮಹಾರಾಷ್ಟ್ರದ ಗುಡ್ಡಾಪುರಕ್ಕೆ ಭಕ್ತರು ಇದೇ ರಸ್ತೆಯ ಮೂಲಕ ತೆರಳಬೇಕು. ಈ 7.5 ಕಿ.ಮೀ. ರಸ್ತೆಯನ್ನು ಕ್ರಮಿಸಬೇಕಾದರೆ 40 ನಿಮಿಷ ಸಮಯ ವ್ಯಯಿಸಬೇಕಾಗುತ್ತಿದೆ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ರೈತರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೊರ್ತಿ–ನಿಂಬಾಳ ಕೆ.ಡಿ ರಸ್ತೆ ಸಂಪೂರ್ಣ ಹಾಳಾಗಿರುವುದು

‘ಟೆಂಡ‌ರ್ ಹಂತದಲ್ಲಿ’

ಹೊರ್ತಿ-ನಿಂಬಾಳ ಕೆಡಿ ರಸ್ತೆ ಹಾಳಾಗಿದ್ದು ಗಮನಕ್ಕೆ ಬಂದಿದೆ. ಕಾಮಗಾರಿಯು ಟೆಂಡ‌ರ್ ಹಂತದಲ್ಲಿದೆ. ಸರ್ಕಾರದಿಂದ ಮಂಜೂರಾತಿ ದೊರೆತ ತಕ್ಷಣ ಕಾಮಗಾರಿ ಆರಂಭಿಸುತ್ತೇವೆ. ಈ ಹಿಂದೆ ಕೂಡ ಶಾಸಕರು ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ಲೋಕೋಪಯೋಗಿ ಇಲಾಖೆಯ ಎಇಇ ದಯಾನಂದ ಮಠ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.