ADVERTISEMENT

ಸಂದರ್ಶನ | ಮೋದಿ ಪ್ರಭಾವ, ಮತದಾರರ ಪ್ರೀತಿಯಿಂದ ಗೆಲುವು: ಸಂಸದ ರಮೇಶ ಜಿಗಜಿಣಗಿ

ವಿಜಯಪುರವಿಜಯಪುರ ಸಂಸದ ರಮೇಶ ಜಿಗಜಿಣಗಿ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 6:21 IST
Last Updated 22 ಜೂನ್ 2024, 6:21 IST
ರಮೇಶ ಜಿಗಜಿಣಗಿ
ರಮೇಶ ಜಿಗಜಿಣಗಿ   

ವಿಜಯಪುರ ಎಸ್‌.ಸಿ. ಮೀಸಲು ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿಯ ಹಿರಿಯ ನಾಯಕ ರಮೇಶ ಜಿಗಜಿಣಗಿ ಅವರು ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದ ಆಯ್ದ ಭಾಗ ಇಂತಿದೆ.

*ಚುನಾವಣೆಗಳಲ್ಲಿ ನಿರಂತರ ಗೆಲುವಿನ ನಿಮ್ಮ ಗುಟ್ಟೇನು? 

–ನಿರಂತರ ಗೆಲುವಿನಲ್ಲಿ ನನ್ನದೇನೂ ಗುಟ್ಟಿಲ್ಲ, ಕೇವಲ ನನ್ನ ಅದೃಷ್ಟ ಎಂದು ಹೇಳಲು ಬಯಸುತ್ತೇನೆ. ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ಒಬ್ಬ ದಲಿತ ಮನುಷ್ಯನ ಮೇಲೆ ಇಷ್ಟೊಂದು ಪ್ರೀತಿ, ವಿಶ್ವಾಸ ತೋರಿಸಿರುವುದಕ್ಕೆ ನಾನು ಅವರಿಗೆ ಚಿರಋಣಿಯಾಗಿರಲು ಬಯಸುತ್ತೇನೆ. ಚಿಕ್ಕೋಡಿಯಿಂದ ಮೂರು ಸಲ, ವಿಜಯಪುರದಿಂದ ನಾಲ್ಕನೇ ಬಾರಿಗೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಮತದಾರರು ಮತ್ತು ಪಕ್ಷದ ಕಾರ್ಯಕರ್ತರಿಂದ ನಾನು ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ನಾನು ಇತಿಹಾಸ ನಿರ್ಮಿಸುವ ಕೆಲಸ ಮತದಾರರು ಮಾಡಿದ್ದಾರೆ.

ADVERTISEMENT

*ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ 6 ಶಾಸಕರು, ಮೂವರು ವಿಧಾನ ಪರಿಷತ್‌ ಸದಸ್ಯರಿದ್ದರೂ ನೀವು ಗೆಲುವು ಸಾಧಿಸಲು ಪೂರಕ ಅಂಶಗಳೇನು?

–ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯ ಪರಿಣಾಮ ನಾನು ಈ ಬಾರಿ ಗೆಲುವು ಸಾಧಿಸಿದ್ದೇನೆ. ಕಾಂಗ್ರೆಸ್‌ ಸಚಿವರು, ಶಾಸಕರು ಮತ ಕೇಳಲು ಹಳ್ಳಿಗಳಿಗೆ ಹೋದಾಗ ಜನರು, ‘ಗೌಡ್ರೇ, ಇದು ನಿಮ್ಮ ಚುನಾವಣೆಯಲ್ಲ, ಈಗಾಗಲೇ ನಿಮ್ಮನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿದ್ದೇವೆ. ಇದು ಲೋಕಸಭೆ ಚುನಾವಣೆ, ಮೋದಿ ಇನ್ನೊಮ್ಮೆ ಪ್ರಧಾನಿ ಆಗಬೇಕು, ನಾವು ಅವರಿಗೆ ಮತ ಹಾಕುತ್ತೇವೆ, ನಿಮಗೆ ಕೊಡಲ್ಲ, ನೀವು ಸುಮ್ಮನೆ ತೆರಳಿ’ ಎಂದು ಹೇಳಿ ಗೌರವದಿಂದ ಕಳುಹಿಸಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ.

*ಜಿಲ್ಲೆಯಲ್ಲಿ ಕಾಂಗ್ರೆಸ್‌ ಶಾಸಕರಿರುವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್‌ ಸಿಕ್ಕಿದೆ. ಆದರೆ, ಬಿಜೆಪಿ ಶಾಸಕರಿರುವ ವಿಜಯಪುರ ನಗರ ಕ್ಷೇತ್ರದಲ್ಲಿ ನಿಮಗೆ ಹಿನ್ನಡೆಯಾಗಲು ಕಾರಣವೇನು?

–ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸ್ಟಾರ್‌ ಪ್ರಚಾರಕರನ್ನಾಗಿ ಪಕ್ಷ ನಿಯೋಜಿಸಿದ ಕಾರಣ ಅವರು ರಾಜ್ಯದ ಬೇರೆ, ಬೇರೆ ಕಡೆ ಪ್ರವಾಸ ಮಾಡಬೇಕಾಯಿತು. ಹೀಗಾಗಿ ಅವರಿಗೆ ವಿಜಯಪುರದಲ್ಲಿ ಹೆಚ್ಚು ಪ್ರಚಾರ ಮಾಡಲು ಸಮಯ ಸಿಗಲಿಲ್ಲ. ಅಲ್ಲದೇ, ಯತ್ನಾಳ ಅವರು ನಗರದ ಚುನಾವಣೆ ಜವಾಬ್ದಾರಿಯನ್ನು ಪಾಲಿಕೆ ಸದಸ್ಯರಿಗೆ, ಅವರ ಆಪ್ತರಿಗೆ ವಹಿಸಿದ್ದರು. ಈ  ಕಾರಣಕ್ಕಾಗಿ ಸ್ವಲ್ಪ ಹಿನ್ನಡೆಯಾಗಿದೆಯೇ ಹೊರತು, ಬಸನಗೌಡ ನನ್ನ ವಿರುದ್ಧ ಚುನಾವಣೆ ಮಾಡಿದ್ದಾರೆ ಎಂದು ಹೇಳಲು ನಾನು ಬಯಸುವುದಿಲ್ಲ. 

*‌‘ಸಂಸದ ಜಿಗಜಿಣಗಿ ಅವರು ನನ್ನ ವಿರುದ್ಧ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದ ಕಾರಣ ನಾನು ಸೋಲಬೇಕಾಯಿತು’ ಎಂದು ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

–ಚುನಾವಣೆಯಲ್ಲಿ ಆಲಗೂರ ವಿರುದ್ಧ ನಾನು ಯಾವುದೇ ಅಪಪ್ರಚಾರ ಮಾಡಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ಯಾರ ಚಾರಿತ್ರ್ಯ ಹರಣ ಮಾಡಿಲ್ಲ. ‘ಕಾಂಗ್ರೆಸ್‌ ಅಭ್ಯರ್ಥಿ ಈ ಹಿಂದೆ ದಲಿತ ಸಂಘಟನೆಯಲ್ಲಿದ್ದಾಗ ಅವರ ಹಿಂದಿರುವವರು ಲಿಂಗಾಯತ ಸಮುದಾಯದವರ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸಿ ತೊಂದರೆ ನೀಡಿದ್ದರು ಎಂದು ಹಳ್ಳಿಗಳಲ್ಲಿ ಲಿಂಗಾಯತ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ’ ಎಂದು ಮಾಧ್ಯಮಗಳ ಎದುರು ಹೇಳಿದ್ದೇನೆಯೇ ಹೊರತು, ಇದು ನನ್ನ ಆರೋಪ ಆಗಿರಲಿಲ್ಲ. ನಾನೂ ಒಬ್ಬ ದಲಿತ, ಕಾಂಗ್ರೆಸ್‌ ಅಭ್ಯರ್ಥಿಯೂ ದಲಿತನಿರುವಾಗ ಹೇಗೆ ತಾನೆ ಅವರ ವಿರುದ್ಧ ಆರೋಪ ಮಾಡಲು ಸಾಧ್ಯ? ರಾಜಕಾರಣದಲ್ಲಿ ಎಂದಿಗೂ ನಾನು ಒಂದು ಜಾತಿ, ಸಮಾಜ ಕಟ್ಟಿಕೊಂಡು ರಾಜಕಾರಣ ಮಾಡಿಲ್ಲ. ಹೀಗಾಗಿ ನಾನು ಎಲ್ಲ ಸಮಾಜಗಳನ್ನು ಒಟ್ಟಿಗೆ ಕರೆದುಕೊಂಡು ಹೋದ ಪರಿಣಾಮ ನನ್ನನ್ನು ಎಲ್ಲರೂ ಇಷ್ಟಪಡುತ್ತಾರೆ. ನಾನು ಒಂದು ಜಾತಿ ಬೆಂಬಲಿಸಿದರೆ ಮತ್ತೊಂದು ಜಾತಿಯವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತಿತ್ತು. ಇದರ ತಂಟೆಗೆ ಎಂದಿಗೂ ಹೋಗಿಲ್ಲ.

*ಕೇಂದ್ರ ಸಚಿವ ಸ್ಥಾನ ತಪ್ಪಲು ಕಾರಣವೇನು? 

ಸತತ ಏಳು ಬಾರಿ ಲೋಕಸಭೆ ಸದಸ್ಯನಾಗಿ ಆಯ್ಕೆಯಾಗಿರುವ ನನಗೆ ಕೇಂದ್ರ ಸಚಿವನಾಗುವ ಎಲ್ಲ ಅರ್ಹತೆ ಮತ್ತು ಹಿರಿತನ ಇತ್ತು. ಆದರೆ, ರಾಜ್ಯ ಬಿಜೆಪಿ ನಾಯಕರ ಒಳ ರಾಜಕೀಯದಿಂದಾಗಿ ಅವಕಾಶ ತಪ್ಪಿತು. ನಾನು ಸಚಿವನಾಗಬೇಕು ಎಂಬುದು ಸಮಾಜದ ಹಾಗೂ ಉತ್ತರ ಕರ್ನಾಟಕ ಭಾಗದ ಜನರ ಆಶಯವಾಗಿತ್ತು. ರಾಜ್ಯದ ಬಿಜೆಪಿ ನಾಯಕರು ನನ್ನ ಹೆಸರು ಸೂಚಿಸುತ್ತಾರೆ ಎಂಬ ವಿಶ್ವಾಸ ಇತ್ತು. ಅವರ ಜವಾಬ್ದಾರಿಯೂ ಇತ್ತು. ಆದರೆ, ಯಾರೊಬ್ಬರೂ ನನ್ನ ಪರವಾಗಿ ಬಾಯಿ ಬಿಡಲಿಲ್ಲ. ಈ ವಿಷಯದಲ್ಲಿ ತಪ್ಪು ಮಾಡಿದ್ದಾರೆ.

*ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಗಳಿಸಲು ಸಾಧ್ಯವಾಗದೇ ಇರುವುದಕ್ಕೆ ಕಾರಣಗಳೇನು?

– ಈ ಬಗ್ಗೆ ವಿಶ್ಲೇಷಣೆ ಮಾಡುವಷ್ಟು ನಾನು ದೊಡ್ಡವನಲ್ಲ. ಆದರೂ ಸಹ 300ಕ್ಕೂ ಅಧಿಕ ಸ್ಥಾನ ಬಿಜೆಪಿಗೆ ಬರಬೇಕಿತ್ತು. ಯಾವ ಕಾರಣಕ್ಕೆ ಹಿನ್ನೆಡೆಯಾಗಿದೆ ಎಂಬುದು ತಿಳಿದಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಈ ಬಗ್ಗೆ ನಾನು ಕಾರಣ ಹೇಳಲು ಬಯಸುವುದಿಲ್ಲ. ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷರಿಗೆ ಈ ಬಗ್ಗೆ ತಿಳಿದಿದೆ.

ರಾಜ್ಯ ರಾಜಕೀಯಕ್ಕೆ ಬರಲು ಸಿದ್ಧ ಪಕ್ಷದ ವರಿಷ್ಠರು ಸೂಚಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯಕ್ಕೆ ಬರಲು ಸಿದ್ಧನಿದ್ದೇನೆ. 30 ವರ್ಷ ಲೋಕಸಭೆ ಸದಸ್ಯನಾಗಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಕರ್ನಾಟಕದ ರಾಜಕಾರಣಕ್ಕೆ ಹೋಗುವಂತೆ ಪಕ್ಷದ ವರಿಷ್ಠರು ಹೇಳಿದರೆ ಇಲ್ಲಿಯೂ ಸೇವೆ ಸಲ್ಲಿಸುವ ಇಚ್ಛೆ ಇದೆ. –ರಮೇಶ ಜಿಗಜಿಣಗಿ ಸಂಸದ

ಜನತೆಯ ಅಜೆಂಡಾ ಅನುಷ್ಠಾನಕ್ಕೆ ಆದ್ಯತೆ ವಿಜಯಪುರ: ಜಿಲ್ಲೆಯ ಅಭಿವೃದ್ಧಿ ವಿಷಯವಾಗಿ ನನ್ನದೇ ಆದ ಯಾವುದೇ ಅಜೆಂಡಾ ಇಲ್ಲ. ಆದರೆ ಜನರು ಜಿಲ್ಲೆಗೆ ಏನು ಮಾಡಬೇಕು ಎಂದು ಹೇಳುತ್ತಾರೆಯೋ ಅದನ್ನು ಆದ್ಯತೆ ಮೇಲೆ ಮಾಡುವುದು ನನ್ನ ಧರ್ಮ ಕರ್ತವ್ಯ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ನೀವು ಹಮ್ಮಿಕೊಂಡಿರುವ ಯೋಜನೆಗಳ ರೂಪುರೇಷೆಗಳೇನು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ವಿಜಯಪುರ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನ ಯುನೆಸ್ಕೋ ಪಟ್ಟಿಗೆ ಗೋಳಗುಮ್ಮಟ ಸೇರ್ಪಡೆ ಧಾರವಾಡದಲ್ಲಿರುವ ಎಎಸ್ಐ ಕಚೇರಿ ವಿಜಯಪುರಕ್ಕೆ ಸ್ಥಳಾಂತರ ವಿಜಯಪುರ ವಿಮಾನ ನಿಲ್ದಾಣ ಶೀಘ್ರ ಕಾರ್ಯಾರಂಭ ಮತ್ತು ಉಡಾನ್‌ ಯೋಜನೆಗೆ ಸೇರ್ಪಡೆ ವಂದೇ ಭಾರತ್‌ ರೈಲು ಸಂಚಾರ ಯುಕೆಪಿ ಗೆಜೆಟ್‌ ನೋಟಿಫಿಕೇಶನ್‌ ಹಾಗೂ ರಾಷ್ಟ್ರೀಯ ಯೋಜನೆ ಮಾಡುವ ಸಂಬಂಧ ಕೇಂದ್ರ ಸಚಿವರ ಮೇಲೆ ಒತ್ತಡ ಹೇರಿ ಅನುಷ್ಠಾನಕ್ಕೆ ಆದ್ಯತೆ ನೀಡುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.