ADVERTISEMENT

ಸಂಸದರ ನಿಧಿ ಅಡಿ ನೋಡಲ್‌ ಜಿಲ್ಲೆಯಾಗಿ ವಿಜಯಪುರ ಆಯ್ಕೆ ಮಾಡಿದ ಸಂಸದೆ ಸುಧಾ ಮೂರ್ತಿ

ಜಮಖಂಡಿ ತಾಲ್ಲೂಕಿನ ಸಾವಳಗಿಯಲ್ಲಿ ನಮ್ಮ ಪೂರ್ವಿಕರು ಸುಮಾರು 600 ವರ್ಷಗಳಿಂದ ವಾಸವಾಗಿದ್ದಾರೆ. ಹೀಗಾಗಿ ಅವಿಭಜಿತ ವಿಜಯಪುರ ಜಿಲ್ಲೆಯೊಂದಿಗೆ ಭಾವನಾತ್ಮಕ ಸಂಬಂಧ: ಸುಧಾ ಮೂರ್ತಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 10:06 IST
Last Updated 13 ಆಗಸ್ಟ್ 2024, 10:06 IST
<div class="paragraphs"><p>ಸುಧಾ ಮೂರ್ತಿ</p></div>

ಸುಧಾ ಮೂರ್ತಿ

   

ವಿಜಯಪುರ: ವಿಜಯಪುರವನ್ನು ನೋಡಲ್‌ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಂಡಿರುವುದಾಗಿ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅವಿಭಜಿತ ವಿಜಯಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿಯಲ್ಲಿ ನಮ್ಮ ಪೂರ್ವಿಕರು ಸುಮಾರು 600 ವರ್ಷಗಳಿಂದ ವಾಸವಾಗಿದ್ದಾರೆ. ಹೀಗಾಗಿ ವಿಜಯಪುರ ಜಿಲ್ಲೆಯೊಂದಿಗೆ ಭಾವನಾತ್ಮಕ ಸಂಬಂಧ ಇರುವುದರಿಂದ ಹಾಗೂ ವಿಜಯಪುರ ಜಿಲ್ಲೆಯ ಮೇಲೆ ವಿಶೇಷ ಪ್ರೀತಿ ಇರುವುದರಿಂದ ನೋಡಲ್‌ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಂಡಿರುವುದಾಗಿ ಹೇಳಿದರು.

ADVERTISEMENT

ರಾಜ್ಯಸಭೆಗೆ ಸದಸ್ಯೆಯಾಗಿ ದೇಶದ ಯಾವುದೇ ಜಿಲ್ಲೆಯನ್ನು ಬೇಕಾದರೂ ನೋಡಲ್‌ ಜಿಲ್ಲೆಯನ್ನಾಗಿ ಆಯ್ಕೆ ಮಾಡಬಹುದಿತ್ತು. ಆದರೆ, ನಾನು ಕರ್ನಾಟಕದವಳು, ಕನ್ನಡತಿ ಎಂಬ ಹೆಮ್ಮೆ, ಅಭಿಮಾನ ಇರುವುದರಿಂದ ವಿಜಯಪುರವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಸಮರ್ಥಿಸಿಕೊಂಡರು.

ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ಧರ್ಮಶಾಲೆ ನಿರ್ಮಾಣ

ರಾಜ್ಯಸಭೆ ಸದಸ್ಯೆಯಾಗಿರುವುದರಿಂದ ಸಂಸದರ ಅನುದಾನ(ಎಂಪಿ ಲ್ಯಾಡ್‌) ಬರುತ್ತಿದೆ. ಈ ಅನುದಾನದಲ್ಲಿ ವಿಜಯಪುರ ಜಿಲ್ಲೆಯ ಜನಸಾಮಾನ್ಯರಿಗೆ ಉಪಯೋಗವಾಗುವಂತ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದೇನೆ ಎಂದರು.

ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಉಳಿದುಕೊಳ್ಳಲು ಅನುಕೂಲವಾಗುವಂತೆ ಧರ್ಮಶಾಲೆಯೊಂದನ್ನು ನಿರ್ಮಾಣ ಮಾಡುವ ಉದ್ದೇಶವಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿರುವುದಾಗಿ ತಿಳಿಸಿದರು.

ಈ ಧರ್ಮಶಾಲೆಯಲ್ಲಿ ಮಹಿಳೆಯರು, ಪುರುಷರು ಪ್ರತ್ಯೇಕವಾಗಿ ಉಳಿದುಕೊಳ್ಳಲು ಸಕಲ ಸೌಲಭ್ಯ ಕಲ್ಪಿಸಲಾಗುವುದು. ರಿಯಾಯಿತಿ ದರ ನಿಗದಿಪಡಿಸಲಾಗುವುದು ಎಂದು ಹೇಳಿದರು.

ಗ್ರಂಥಾಲಯ

ತಾಳಿಕೋಟೆ, ಬಸವನ ಬಾಗೇವಾಡಿ, ಸಿಂದಗಿಯಲ್ಲಿ ಸುಸಜ್ಜಿತವಾದ ಎರಡು ಅಂತಸ್ಥಿನ ಗ್ರಂಥಾಲಯ ನಿರ್ಮಾಣ ಮಾಡಲಾಗುವುದು. ಇದಕ್ಕೆ ಅಧಿಕಾರಿಗಳ, ಜನರ ಸಹಕಾರ ಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯ, ಸಭಾಂಗಣ ನಿರ್ಮಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು.

ಅರಮನೆ ನವೀಕರಣ

ಇನ್ಫೋಸಿಸ್‌ ಪ್ರತಿಷ್ಠಾನದಿಂದ ₹ 2 ಕೋಟಿ ಅನುದಾನದಲ್ಲಿ ಕುಮಟಗಿ ಬೇಸಿಗೆ ಅರಮನೆ ನವೀಕರಣ ಮಾಡಲಾಗುವುದು ಎಂದರು.

ಯುನೆಸ್ಕೊ ಪಟ್ಟಿಗೆ ಯತ್ನ

ದೇಶದಲ್ಲಿ ವಿಶ್ವಪ್ರಸಿದ್ಧ 57 ಪ್ರವಾಸಿತಾಣಗಳಿವೆ. ಇದರಲ್ಲಿ 42 ಪ್ರವಾಸಿತಾಣಗಳು ಮಾತ್ರ ಇದುವರೆಗೆ ಯುನೆಸ್ಕೊ ಪಟ್ಟಿಗೆ ಸೇರ್ಪಡೆಯಾಗಿವೆ. ವಿಜಯಪುರದ ಅನರ್ಘ್ಯರತ್ನಗಳಾದ ಗೋಳಗುಮ್ಮಟ, ಇಬ್ರಾಹಿಂರೋಜಾ ಕೂಡ ಸೇರಲು ಅರ್ಹವಾಗಿವೆ ಎಂದರು.

ಯುನೆಸ್ಕೊ ಪಟ್ಟಿಗೆ ಯಾವುದೇ ಸ್ಮಾರಕ ಸೇರಬೇಕು ಎಂದಾದರೆ ಅನೇಕ ಹಂತಗಳಿವೆ. ಅವುಗಳ ಇತಿಹಾಸ ಕರಾರುವಕ್ಕಾದ ಮಾಹಿತಿ, ವಿವರವಾದ ವರದಿಯನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು.  ಪ್ರತಿ ವರ್ಷಕ್ಕೆ ಒಂದು ದೇಶದ ಒಂದು ಸ್ಮಾರಕವನ್ನು ಮಾತ್ರ ಯುನೆಸ್ಕೊ ಪಟ್ಟಿಗೆ ಸೇರಿಸಲಾಗುತ್ತದೆ. ಈ ಬಗ್ಗೆ ಹಲವು ಸ್ಮಾರಕಗಳ ದೊಡ್ಡ ಸರದಿಯೇ ಇದೆ. ಗೋಳಗುಮ್ಮಟ ಸೇರಿಸಲು ಪ್ರಯತ್ನಗಳು ನಡೆಯಬೇಕಿದೆ. ಈ ಸಂಬಂಧ ನಾನು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತೇನೆ ಎಂದು ಹೇಳಿದರು. 

ವಿಜಯಪುರ ನೂತನ ವಿಮಾನ ನಿಲ್ದಾಣ ಇನ್ನೆರಡು ಮೂರು ತಿಂಗಳಲ್ಲಿ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಮಾನ ನಿಲ್ದಾಣ ಆರಂಭವಾದರೆ ಮುಂಬೈ, ಬೆಂಗಳೂರು ಸೇರಿದಂತೆ ದೇಶದ ವಿವಿಧಡೆಯಿಂದ ‍ಪ್ರವಾಸಿಗರು ಬಂದು ಹೋಗಲು ಅನುಕೂಲವಾಗಲಿದೆ ಎಂದರು.

ವಿಜಯಪುರದಲ್ಲಿ ಇನ್ಫೋಸಿಸ್‌ ಘಟಕ ಆರಂಭಿಸುವ ಉದ್ದೇಶವೇನಾದರೂ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಂದು ಸ್ಥಳದಲ್ಲಿ ಒಂದು ಕಂಪನಿ ಮಾಡಬೇಕಾದರೆ ಅದರ ಹಿಂದೆ ವಾಣಿಜ್ಯಾತ್ಮಕ ನಿರ್ಧಾರಗಳಿರುತ್ತವೆ. ಅದರಲ್ಲಿ ಭಾವನಾತ್ಮಕ ನಿರ್ಧಾರ ಇರುವುದಿಲ್ಲ ಎಂದರು.

ಜಿಲ್ಲಾಧಿಕಾರಿ ಟಿ.ಭೂಬಾಲನ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.