ADVERTISEMENT

ಅನ್ಯಾಯವಾದರೆ ಶಾಸಕರ ವಿರುದ್ಧವೂ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ; ಮಾದಿಗ ಸಮುದಾಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 12:59 IST
Last Updated 29 ಫೆಬ್ರುವರಿ 2024, 12:59 IST
ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಮಾದಿಗ ದಂಡೋರಾ ಹೋರಾಟ ಸಮಿತಿ ಪದಾಧಿಕಾರಿಗಳು ಗ್ರೇಡ್-2 ತಹಶೀಲ್ದಾರ್ ಗುರುರಾಜ ಕಟ್ಟಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು
ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಮಾದಿಗ ದಂಡೋರಾ ಹೋರಾಟ ಸಮಿತಿ ಪದಾಧಿಕಾರಿಗಳು ಗ್ರೇಡ್-2 ತಹಶೀಲ್ದಾರ್ ಗುರುರಾಜ ಕಟ್ಟಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು   

ಮುದ್ದೇಬಿಹಾಳ: ‘ಮಾದಿಗ ಸಮುದಾಯಕ್ಕೆ ಸಂವಿಧಾನ ಬದ್ಧವಾಗಿ ದೊರಕಬೇಕಾದ ಹಕ್ಕುಗಳು ಸಿಗದಿದ್ದಲ್ಲಿ ಶಾಸಕರ ವಿರುದ್ಧವೂ ಹೋರಾಟ ಮಾಡುತ್ತೇವೆ’ ಎಂದು ಮಾದಿಗ ದಂಡೋರಾ ಹೋರಾಟ ಸಮಿತಿ ಅಧ್ಯಕ್ಷ ತಿಪ್ಪಣ್ಣ ದೊಡಮನಿ (ಮಾದರ) ಹೇಳಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ಮಾದಿಗ ದಂಡೋರಾ ಸಮಿತಿ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯ ಬಳಿಕ ತಹಶೀಲ್ದಾರ್ ಕಚೇರಿಯಲ್ಲಿ ಸಮಾವೇಶಗೊಂಡ ಬಹಿರಂಗ ಸಭೆಯಲ್ಲಿ ಮಾತನಾಡಿದರು.

‘ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಪರಿಶಿಷ್ಟರಿಗೆ ಸ್ಮಶಾನ ಜಾಗವಿಲ್ಲ. ಅಧಿಕಾರಿಗಳಿಗೆ ಕೇಳಲು ಹೋದರೆ ನೆಪ ಹೇಳುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ಅಸ್ಪೃಶ್ಯತೆ ಜೀವಂತವಾಗಿರಿಸಿದ್ದಾರೆ’ ಎಂದು ದೂರಿದರು.

ADVERTISEMENT

ವಕೀಲ ಕೆ.ಬಿ.ದೊಡಮನಿ, ‘ಮುದ್ದೇಬಿಹಾಳ ನಗರದಲ್ಲಿ ಬಾಬು ಜಗಜೀವನರಾಂ ಪ್ರತಿಮೆ ಸ್ಥಾಪಿಸಬೇಕು. ಘಾಳಪೂಜಿ ವಸತಿ ನಿಲಯದ ಅಗ್ನಿ ಅವಘಡದ ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಕೇಂದ್ರಕ್ಕೆ ಸದಾಶಿವ ಆಯೋಗದ ವರದಿ ಶಿಫಾರಸು ಮಾಡಬೇಕು. ಚೆನ್ನಯ್ಯ ಭವನ ಮತ್ತು ಉದ್ಯಾನ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡ ಡಿ.ಬಿ.ಮುದೂರ, 2012ರಲ್ಲಿ ನಾಗರಾಳ ಮಹಿಳಾ ಮೀನುಗಾರಿಕೆ ಸಂಘಕ್ಕೆ ಡಿಸಿಸಿ ಬ್ಯಾಂಕ್‌ನಿಂದ ಮೀನುಗಾರರ ತೆಪ್ಪ, ಬಲೆ ಖರೀದಿಸಲು ಪಡೆದ ಸಾಲ ಮನ್ನಾ ಮಾಡಬೇಕು. ತಾಳಿಕೋಟಿ ತಹಶೀಲ್ದಾರ್‌ ಅವರನ್ನು ವರ್ಗಾಯಿಸಬೇಕು ಎಂಬುದೂ ಸೇರಿದಂತೆ 15 ಬೇಡಿಕೆಗಳನ್ನು ಈಡೇರಿಸುವಂತೆ ಗ್ರೇಡ್-2 ತಹಶೀಲ್ದಾರ್ ಗುರುರಾಜ ಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಪದಾಧಿಕಾರಿಗಳಾದ ಎಸ್.ಬಿ.ಬಸರಕೋಡ, ಮುತ್ತು ಪೂಜಾರಿ, ಹುಲಗಪ್ಪ ನಾಗರಬೆಟ್ಟ, ಮಾರುತಿ ಸಿದ್ದಾಪೂರ, ಕಾಶಪ್ಪ ತೊಗರಿ, ಡಿ.ಎಸ್.ಹೊಸಮನಿ, ಪರಶುರಾಮ ಕೂಚಬಾಳ, ಎಸ್.ಎಸ್.ಶಿವಪೂರ, ಬಿ.ಎ.ಹೊಸಮನಿ, ಬಸವರಾಜ ವನಕಿಹಾಳ, ಎಚ್.ವೈ.ಮಾದರ, ರಾಮು ತಂಬೂರಿ, ಇತರರು ಇದ್ದರು.

ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿ ವರೆಗೆ ಹೋರಾಟಗಾರರು ತಮಟೆ ಬಾರಿಸುತ್ತಾ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.