ADVERTISEMENT

ಮುದ್ದೇಬಿಹಾಳ | ಮೂಲ ಸೌಕರ್ಯ ಕೊರತೆ: ತಪ್ಪದ ಗೋಳು

ಗ್ರಾಮಕ್ಕೆ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ; ಸಾಕಾಗುವಷ್ಟು ಬಾರದ ನೀರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 4:55 IST
Last Updated 19 ಜೂನ್ 2024, 4:55 IST
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದ ಹೊಸ ಪ್ಲಾಟ್‌ನಲ್ಲಿ ಅಲ್ಪ ಮಳೆಯಿಂದ ನೀರು ಹರಿದು ಹೋಗದೇ ಸಂಗ್ರಹಗೊಂಡಿದ್ದರಿಂದ ರಸ್ತೆ ಕೆಸರುಮಯವಾಗಿತ್ತು
ಮುದ್ದೇಬಿಹಾಳ ತಾಲ್ಲೂಕಿನ ಅಮರಗೋಳದ ಹೊಸ ಪ್ಲಾಟ್‌ನಲ್ಲಿ ಅಲ್ಪ ಮಳೆಯಿಂದ ನೀರು ಹರಿದು ಹೋಗದೇ ಸಂಗ್ರಹಗೊಂಡಿದ್ದರಿಂದ ರಸ್ತೆ ಕೆಸರುಮಯವಾಗಿತ್ತು   

ಮುದ್ದೇಬಿಹಾಳ: ತಂಗಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ದೊಡ್ಡದಾದ ಗ್ರಾಮ ಅಮರಗೋಳ. ಅಣ್ಣ ಬಸವಣ್ಣನವರ ಕಾಲದಲ್ಲಿ ಸಾಮಾಜಿಕ ಕ್ರಾಂತಿಯ ಸಮಯದಲ್ಲಿ ಶರಣರ 60 ಗಣಗಳು ಇಲ್ಲಿ ಆಶ್ರಯ ಪಡೆದು ನೆಲೆಸಿದ್ದ ಕಾರಣ ಈ ಊರಿಗೆ ಅಮರಗೋಳ ಎಂಬ ಹೆಸರು ಬಂದಿದೆ ಎಂಬುದು ಪುರಾಣ ದಾಖಲೆಗಳಲ್ಲಿ ಉಲ್ಲೇಖವಿದೆ. ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ಅಮರಗೋಳ ಗ್ರಾಮ ಮೂಲಸೌಕರ್ಯದಿಂದ ಬಳಲುತ್ತಿದೆ.

ಕುಡಿವ ನೀರಿನ ಸಮಸ್ಯೆ: ಗ್ರಾಮಕ್ಕೆ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಆದರೆ ಎಲ್ಲರಿಗೂ ಸಾಕಾಗುವಷ್ಟು ನೀರು ಬಾರದ ಕಾರಣ ಗ್ರಾಮಸ್ಥರು ಅವರಿವರ ಹೊಲದಲ್ಲಿರುವ ಬೋರವೆಲ್‌ಗೆ ಹೋಗಿ ನೀರು ತರುವ ಪರಿಸ್ಥಿತಿ ಇದೆ. ಪಕ್ಕದಲ್ಲೇ ಕೃಷ್ಣಾ ನದಿ ಇರುವುದರಿಂದ ಅಲ್ಲಿಗೆ ಅಳವಡಿಸಿರುವ ಹೊಲದ ಪಂಪ್‌ಸೆಟ್‌ಗಳಿಂದ ನೀರು ತರುವ ಕಷ್ಟದ ಸ್ಥಿತಿ ಅಮರಗೋಳ ಗ್ರಾಮಸ್ಥರದ್ದು. ಜಲಜೀವನ ಮಿಷನ್ ಯೋಜನೆಯಡಿ ಈವರೆಗೂ ಗ್ರಾಮಸ್ಥರಿಗೆ ಸಂಪೂರ್ಣವಾಗಿ ನೀರು ಪೂರೈಕೆ ಆಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಚರಂಡಿ ವ್ಯವಸ್ಥೆ: ಗ್ರಾಮದಲ್ಲಿ ಐದಾರು ಕಡೆ ಪ್ರಮುಖ ಸಿಸಿ ರಸ್ತೆಗಳಿದ್ದು, ಅವುಗಳಿಗೆ ಚರಂಡಿ ನಿರ್ಮಿಸದ ಕಾರಣ ನೀರು ಅಲ್ಲಲ್ಲಿ ನಿಂತು ಕೊಳಚೆ ಗುಂಡಿಗಳ ತಾಣವಾಗಿ ರೂಪುಗೊಳ್ಳುತ್ತಿದೆ. ಇದರಿಂದ ಸೊಳ್ಳೆಗಳು ಹೆಚ್ಚಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ADVERTISEMENT

‘ಗ್ರಾಮದ ಬಹುತೇಕ ಕಡೆಗಳಲ್ಲಿ ಬೀದಿ ದೀಪಗಳಿಲ್ಲ. ರಾತ್ರಿಯಾದರೆ ಊರಿನ ಜನ ಕತ್ತಲೆಯಲ್ಲಿ ಮೊಬೈಲ್ ಟಾರ್ಚ್‌ ಹಿಡಿದು ತಿರುಗಾಡಬೇಕಾಗಿದೆ’ ಎಂಬುದು ಗ್ರಾಮಸ್ಥ ದ್ಯಾಮಣ್ಣ ಹೊರಪೇಟೆ ಅವರ ದೂರು.

ನೀರು, ಊರಿನಲ್ಲಿ ಸ್ವಚ್ಛತೆಗಾಗಿ ನಿತ್ಯವೂ ಗ್ರಾಮಸ್ಥರು ಗೋಳಾಡುವ ಪರಿಸ್ಥಿತಿ ಇದೆ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಿಂದ ಅಮರಗೋಳಕ್ಕೆ ಸಮಪರ್ಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

‘ಅಮರಗೋಳದ ಪ್ಲಾಟ್‌ನಲ್ಲಿ ಮಳೆಯಾಗಲೀ, ಮಳೆಯಾಗದೇ ಇರಲಿ ಕೊಳಚೆ ನೀರು ಹರಿದು ಸಂಗ್ರಹವಾಗಿ ರಸ್ತೆಗಳು ಸದಾ ಚರಂಡಿಯಂತಾಗುತ್ತವೆ. ಈ ಸಮಸ್ಯೆ ಬಗ್ಗೆ ಕಳೆದ ಚುನಾವಣೆಗಳ ಸಮಯದಲ್ಲಿ ಸಿ.ಎಸ್.ನಾಡಗೌಡರ ಗಮನಕ್ಕೆ ತಂದಾಗ, ‘ಕೆಲಸ ಮಾಡೋಣ, ನಮ್ಮನ್ನು ಬೆಂಬಲಿಸಿ’ ಎಂದು ಕೋರಿದ್ದರು. ಈ ಪ್ಲಾಟಿನಲ್ಲಿರುವ ಜನರು ನಾಡಗೌಡರನ್ನು ಬೆಂಬಲಿಸಿದ್ದೇವು. ಆಗ ನಾಡಗೌಡರ ಪರವಾಗಿ ಬಂದು ಮತ ಕೇಳಿದ್ದ ಸಿದ್ಧಣ್ಣ ಮೇಟಿ ಅವರು ಈಗ ಊರಿನ ಸಮಸ್ಯೆಯತ್ತ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ನಮ್ಮ ಗೋಳು ಯಾರೂ ಕೇಳುತ್ತಿಲ್ಲ. ನಾಡಗೌಡರು ಈಗ ಶಾಸಕರಾಗಿದ್ದಾರೆ. ಸಿಸಿ ರಸ್ತೆ, ಚರಂಡಿಯೂ ನಿರ್ಮಾಣ ಮಾಡಿಸಬೇಕು. ಪಂಚಾಯಿತಿಯವರಿಗೆ ಎಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರಾದ ಮಹಾಂತೇಶ ಯರಝರಿ, ಶಿವರಾಜ ಮುರನಾಳ ತಿಳಿಸಿದರು.

‘₹2 ಲಕ್ಷ ಅನುದಾನದಲ್ಲಿ ಕಾಮಗಾರಿ’

ಹದಿನೈದನೇ ಹಣಕಾಸು ಯೋಜನೆಯಡಿ ₹2 ಲಕ್ಷ ಅನುದಾನದಲ್ಲಿ ಗರಸು ಹಾಕಿ ಸಮತಟ್ಟುಗೊಳಿಸಿದ ಬಳಿಕ ಸಿಸಿ ರಸ್ತೆ ನಿರ್ಮಾಣ ಮಾಡಲು ಕ್ರಿಯಾಯೋಜನೆ ಮಾಡಲಾಗಿದೆ. ಅನುದಾನ ಕೂಡ ಲಭ್ಯವಿದೆ. ಅಲ್ಲಿರುವ ಪ್ಲಾಟ್‌ನಲ್ಲಿ ವಾಸಿಸುವ ನಿವಾಸಿಯೊಬ್ಬರು ತಮ್ಮ ಮನೆಯ ತಳಮಟ್ಟದಿಂದ ಕೆಳಗಡೆ ಗುಂಡಿ ಅಗೆದು ರಸ್ತೆ ನಿರ್ಮಾಣ ಮಾಡುವ ಬೇಡಿಕೆ ಇಟ್ಟು ಕೆಲಸಕ್ಕೆ ತಡೆಯೊಡ್ಡಿದ್ದಾರೆ. ಇದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ತಂಗಡಗಿ ಗ್ರಾ.ಪಂ ಕಾರ್ಯದರ್ಶಿ ಪರಶುರಾಮ ರತ್ನಾಕರ ತಿಳಿಸಿದರು. ಒಂದು ವೇಳೆ ಅವರು ಹೇಳಿದಂತೆ ರಸ್ತೆ ಅಗೆದರೆ ಒಳಗಿರುವ ಪೈಪಲೈನ್‌ಗಳು ಒಡೆದು ಹಾಳಾಗುವ ಪರಿಸ್ಥಿತಿ ಇದೆ. ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಸಲು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.