ADVERTISEMENT

ಪುರಸಭೆ ನಿರ್ಲಕ್ಷ್ಯ, ಸ್ವಚ್ಛತೆ ಮರೀಚಿಕೆ: ಕೊಳಚೆ ಗುಂಡಿಯಂತಾದ ಇಂಡಿ

ಎ.ಸಿ.ಪಾಟೀಲ
Published 22 ಜುಲೈ 2024, 6:27 IST
Last Updated 22 ಜುಲೈ 2024, 6:27 IST
ಇಂಡಿ ಪಟ್ಟಣದ ವಿದ್ಯಾನಗರದಲ್ಲಿ ನಿಂತಿರುವರ ಕೊಳಚೆ ನೀರು
ಇಂಡಿ ಪಟ್ಟಣದ ವಿದ್ಯಾನಗರದಲ್ಲಿ ನಿಂತಿರುವರ ಕೊಳಚೆ ನೀರು   

ಇಂಡಿ: ಇಡೀ ಇಂಡಿ ಪಟ್ಟಣ ಸ್ವಚ್ಛತೆ ಇಲ್ಲದೇ ಕೊಳಚೆ ಗುಂಡಿಯತಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಇಂಡಿ ಪಟ್ಟಣದ ವಿದ್ಯಾನಗರದಲ್ಲಿ ಗಟಾರ ಮಾಡದಿರುವುದರಿಂದ ಸಾರ್ವಜನಿಕರು ಅಡ್ಡಾಡುವ ದೊಡ್ಡ ರಸ್ತೆಯಲ್ಲಿಯೇ ಕಳೆದ ಸುಮಾರು 10 ವರ್ಷಗಳಿಂದ ಗಟಾರದ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರ ಪಕ್ಕದಲ್ಲಿಯೇ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆಗಳು, ನಾಗರಿಕರು ವಾಸಿಸುವ ವಾಸಸ್ಥಳಗಳು ಇವೆ. ಇದನ್ನು ಸ್ವಚ್ಛಗೊಳಿಸಿ, ಪಟ್ಟಣದ ಜನವಸತಿಯ ಕೊನೆಯವರೆಗೆ ಗಟಾರ ಮಾಡಬೇಕು ಎಂದು ಈ ಭಾಗದ ನಾಗರಿಕರು ಸಾಕಷ್ಟು ಸಲ ಪುರಸಭೆಗೆ ವಿನಂತಿಸಿದರೂ ಪ್ರಯೋಜನವಾಗಿಲ್ಲ.

ಇಂಡಿ ಪಟ್ಟಣದ ಗಣಪತಿ ಗುಡಿಯ ಹತ್ತಿರದಿಂದ ಮಿನಿ ವಿಧಾನ ಸೌಧಕ್ಕೆ ತಲುಪುವ ಸುಮಾರು 200 ಮೀಟರ್ ರಸ್ತೆಯನ್ನು ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರು ಅತಿಕ್ರಮಣ ಮಾಡಿ ಇಡೀ ರಸ್ತೆ ಕದ್ದು ಬಿಟ್ಟಿದ್ದಾರೆ. ಇದರಿಂದ ಈ ಮಾರ್ಗವಾಗಿ ಹಾದು ಹೋಗಿರುವ ಪುರಸಭೆಯ ಗಟಾರ್‌ ಬಂದ್ ಆಗಿ ನೀರು ನಿಂತು ಮಲೀನಗೊಂಡು 20 ವರ್ಷಗಳೇ ಕಳೆದಿವೆ. ಇದರ ಬಗ್ಗೆ 16 ವರ್ಷಗಳಿಂದ ಪುರಸಭೆಗೆ, ತಹಶೀಲ್ದಾರ್‌ ಕಚೇರಿಗೆ, ಸರ್ವೆ ಇಲಾಖೆಗೆ, ಲೋಕಾಯುಕ್ತರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಈ ರಸ್ತೆ ತೆರವು ಮಾಡಿಲ್ಲ. ಇದು ಈಗ ಸಾಂಕ್ರಾಮಿಕ ರೋಗಗಳನ್ನು ಕೈಬೀಸಿ ಕರೆಯುತ್ತಿದೆ.

ADVERTISEMENT

ಇಂಡಿ ಪಶ್ಚಿಮ ದಿಕ್ಕಿನಲ್ಲಿ ಹರಿದಿರುವ ಹಿರೇ ಇಂಡಿ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಕ್ಕದಲ್ಲಿ ಕಸದ ರಾಶಿಯೇ ತುಂಬಿಕೊಂಡಿದೆ. ಮಳೆ ಬಂದರೂ ಈ ಕಸದ ರಾಶಿ ಮುಂದೆ ಹೋಗುವುದಿಲ್ಲ. ಇದರಿಂದ ಸುಮಾರು ಅರ್ಧ ಕಿ.ಮೀ ಗಬ್ಬು ವಾಸನೆ ಹರಡಿದೆ. ಹಿರೇಇಂಡಿ ಹಳ್ಳ ಪಟ್ಟಣದಲ್ಲಿಯೇ ಹರಿದಿದೆ. ಇದು ಸ್ವಚ್ಛಗೊಳ್ಳದ ಕಾರಣ ಇದರಲ್ಲಿ ಮುಳ್ಳು ಕಂಟಿಗಳು ಬೆಳೆದು, ಮಳೆ ಬಂದರೂ ನೀರು ಮುಂದೆ ಹರಿಯದೇ ತಗ್ಗು ಪ್ರದೇಶದಲ್ಲಿ ನಿಂತು ಮಲೀನಗೊಂಡಿವೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಇಂಡಿ ಪುರಸಭೆಯ ಪಕ್ಕದಲ್ಲಿಯೇ ಪೊಲೀಸ್ ವಸತಿಗೃಹವಿತ್ತು. ಅದು ಹಳೆಯದಾದದ್ದರಿಂದ ಅದನ್ನು ತೆರವುಗೊಳಿಸಲಾಗಿದೆ. ಆ ಸ್ಥಳ ಇಂದು ಕೊಳಚೆ ಪ್ರದೇಶವಾಗಿ ಪರಿಣಮಿಸಿದೆ. ಇದನ್ನು ಕೂಡಾ ಸ್ವಚ್ಛಗೊಳಿಸಿಲ್ಲ.

ಇಂಡಿ-ವಿಜಯಪುರ ಮುಖ್ಯ ರಸ್ತೆಗೆ ಭೀರಪ್ಪನಗರದ ಕೂಡು ರಸ್ತೆಯಲ್ಲಿ ಗಟಾರ ತೆರೆದುಕೊಂಡು ವರ್ಷಗಳೇ ಕಳೆದಿವೆ. ರಸ್ತೆಯಲ್ಲಿ ಹರಿಯುತ್ತಿರುವ ಗಟಾರದ ನೀರಿನಲ್ಲಿಯೇ ಹಾದು ಹೋಗಬೇಕಿದೆ. ಪಟ್ಟಣದ ಶಂಕರಪಾರ್ವತಿ ಮಂಗಲಕಾರ್ಯಾಲಯ ಪಕ್ಕದಲ್ಲಿ ಗಟಾರ ತೆರೆದುಕೊಂಡಿದ್ದು, ಗಬ್ಬು ವಾಸನೆ ಬೀರಿದೆ.

ಹೀಗೆ ಪಟ್ಟಣದಲ್ಲಿ ಕೊಳಚೇ ಪ್ರದೇಶಗಳನ್ನು ಸ್ವಚ್ಛಗೊಳಿಸಿ, ನಂತರ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರೆ ಅವರು ಅಧಿಕಾರಿಗಳ ಕೆಲಸವನ್ನು ಕಂಡು ತಾವೂ ಸ್ವಚ್ಛವಾಗಿರಬೇಕು, ಸಾಂಕ್ರಾಮಿಕ ರೋಗಗಳ ವಿರುದ್ದ ಹೋರಾಡಬೇಕೆಂದು ಅರಿವು ಮೂಡಿಸಿಕೊಳ್ಳುತ್ತಾರೆ.

ಪಟ್ಟಣವನ್ನು ಸ್ವಚ್ಛವಾಗಿಡಲು ಸರ್ಕಾರ ಪುರಸಭೆಗೆ 4 ಟ್ರ್ಯಾಕ್ಟರ್‌, 11 ಟಾಟಾ ಎಸಿ ವಾಹನಗಳು, 2 ಜೆಸಿಬಿ ಯಂತ್ರಗಳು, 2 ಮುಕ್ತಿವಾಹನಗಳನ್ನು ನೀಡಿದೆ. ಇವುಗಳ ಸಹಾಯದಿಂದ ಪಟ್ಟಣ ಸ್ವಚ್ಛಗೊಳಿಸಲು 56 ಜನ  ಕಾರ್ಮಿಕರು, 14 ಜನ ಚಾಲಕರು, 20 ಜನ ಹೊರಗುತ್ತಿಗೆದಾರರನ್ನು ನೇಮಕ ಮಾಡಿದೆ. ಇವರ ಮೇಲೆ ಇಬ್ಬರು ಮೇಲ್ವಿಚಾರಕ ಅಧಿಕಾರಿಗಳು, ಮುಖ್ಯಾಧಿಕಾರಿ ಮುಂತಾದವರು ಇದ್ದಾರೆ.

ಪಟ್ಟಣದ ಕಸ ವಿಲೇವಾರಿಗಾಗಿಯೇ ಹೊರೊಲಯದಲ್ಲಿ 5 ಎಕರೆ ಜಮೀನು ಇದೆ. ಅಲ್ಲಿ ಒಣ ಕಸ, ಹಸಿಕಸ ವಿಂಗಡಣೆ ಮಾಡಿ ಗೊಬ್ಬರ ತಯಾರಿಕೆಯ ಮಷಿನ್ ಇದೆ. ಗೊಬ್ಬರ ತಯಾರಿಸಿ ಅದನ್ನು ಟೆಂಡರ್ ಮೂಲಕ ವಿತರಣೆ ಮಾಡಲಾಗುತ್ತದೆ. ಇಷ್ಟಿದ್ದರೂ ಇಂಡಿ ಪಟ್ಟಣ ಸ್ವಚ್ಛವಾಗದೇ ಗಬ್ಬೆದ್ದು ನಾರುತ್ತಿದೆ.

ಪಟ್ಟಣದಲ್ಲಿ 165 ಮಕ್ಕಳ ಆಟದ ಮೈದಾನಗಳಿವೆ. ಇವುಗಳಲ್ಲಿ ಕೈಬೆರಳೆಣಿಕೆಯಷ್ಟು ಮಾತ್ರ ಸ್ವಚ್ಛವಾಗಿದ್ದು, ಇನ್ನುಳಿದ ಮೈದಾನಗಳು ಕೊಳಚೆ ಪ್ರದೇಶಗಳಾಗಿವೆ.

ಕಳೆದ ಒಂದು ತಿಂಗಳಿಂದ ಡೆಂಗಿ ಜ್ವರದ ಬಗ್ಗೆ ಅರಿವು ಮೂಡಿಸುವ ಜನ ಜಾಗೃತಿ ಸಭೆಗಳು, ಪ್ರಭಾತಪೇರಿ, ಸರ್ಕಾರು ಕಚೇರಿಗಳಲ್ಲಿ ಕಸ ಗೂಡಿಸುವುದು, ಸ್ವಚ್ಛತೆಯ ಬಗ್ಗೆ ಸಭೆಗಳು ನಡೆಯುತ್ತಿವೆಯೇ ಹೊರತಾಗಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಮಾಡಲು ಮಾತ್ರ ಇನ್ನೂವರೆಗೆ ಮುಂದಾಗಿಲ್ಲದಿರುವುದು ವಿಪರ್ಯಾಸವೇ ಸರಿ.

ಇಂಡಿ-ಸಾಲೋಟಗಿ ಹಳೆಯ ರಸ್ತೆಯನ್ನು ಗಣಪತಿ ಗುಡಿಯ ಬಳಿ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಅತಿಕ್ರಮಣ ಮಾಡಿದ್ದರಿಂದ ಗಟಾರದ ನೀರು ಮುಂದೆ ಹರಿಯದೇ ನಿಂತಿರುವುದು
ಹಿರೇಇಂಡಿ ಹಳ್ಳಕ್ಕೆ ಕಟ್ಟಿರುವ ಸೇತುವೆ ಪಕ್ಕದಲ್ಲಿ ಕಸ ತುಂಬಿಕೊಂಡು ಕೊಳಚೇ ಪ್ರದೇಶವಾಗಿದೆ
ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮುಗಿದು 15 ತಿಂಗಳಾಯಿತು. ಇದೀಗ ಅದಕ್ಕೆ ನಾವಿಕರಿಲ್ಲ. ಪುರಸಭೆಯಲ್ಲಿ ಕಾರ್ಮಿಕರ ಕೊರತೆಯಿದೆ. ಇದರಿಂದ ಪಟ್ಟಣದಲ್ಲಿ ಸ್ವಚ್ಛತೆಯ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ 
ಅನೀಲಗೌಡ ಬಿರಾದಾರ ಪುರಸಭೆಯ ಸದಸ್ಯ ಇಂಡಿ
ವಿದ್ಯಾನಗರದಲ್ಲಿ ಕಳೆದ 20 ವರ್ಷಗಳಿಂದ ಗಟಾರದ ನೀರು ಮಲಿತು ನಿಂತಿದೆ. ಸ್ವಚ್ಛಗೊಳಿಸುತ್ತಿಲ್ಲ. ಡೆಂಗಿ ಹರಡುವ ಭೀತಿ ಎದುರಾಗಿದೆ.
ಟಿ.ಎಚ್.ಬಿರಾದಾರ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.