ADVERTISEMENT

ನೇಮಕಾತಿಗೂ ತಂದೆಯ ರಾಜಕೀಯಕ್ಕೂ ಸಂಬಂಧ ಇಲ್ಲ: ಧ್ರುವ ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 0:11 IST
Last Updated 29 ಜುಲೈ 2024, 0:11 IST
ಧ್ರುವ ಪಾಟೀಲ
ಧ್ರುವ ಪಾಟೀಲ   

ವಿಜಯಪುರ: ‘ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯನಾಗಿ ನನ್ನನ್ನು ನೇಮಿಸಿರುವುದಕ್ಕೂ ನಮ್ಮ‌ ತಂದೆಯವರ (ಸಚಿವ ಎಂ. ಬಿ. ಪಾಟೀಲ) ರಾಜಕಾರಣಕ್ಕೂ ಸಂಬಂಧವಿಲ್ಲ. ವನ್ಯಜೀವಿ ಛಾಯಾಗ್ರಹಣ ಮತ್ತು ಸಂರಕ್ಷಣೆ ಕ್ಷೇತ್ರಗಳಲ್ಲಿ ನಾನು 11 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇದನ್ನು ಗುರುತಿಸಿ ನನ್ನನ್ನು ಈಗ ಸದಸ್ಯನಾಗಿ ನೇಮಿಸಲಾಗಿದೆ’ ಎಂದು ಧ್ರುವ ಪಾಟೀಲ ಹೇಳಿದರು.

ಬಬಲೇಶ್ವರ ತಾಲ್ಲೂಕಿನ ಮಮದಾಪುರದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯ ವನ್ಯಜೀವಿ ಮಂಡಳಿಗೆ ನಾನು ಸಚಿವರ ಪುತ್ರ ಎಂಬ ಕಾರಣಕ್ಕೆ ಸದಸ್ಯನಾಗಿ ನೇಮಿಸಲಾಗಿದೆ ಎನ್ನುವ ಆರೋಪ ಸರಿಯಲ್ಲ. ನಾನು ಅಮೆರಿಕದಲ್ಲಿ ಓದುತ್ತಿದ್ದರೂ ನಾಲ್ಕು ತಿಂಗಳ ರಜೆಯಲ್ಲಿ ಇಲ್ಲಿಗೆ ಬರುತ್ತೇನೆ. ಆ ದಿನಗಳಲ್ಲಿ ಮೂರು ತಿಂಗಳನ್ನು ನಾನು ಕಬಿನಿ‌, ಬಂಡಿಪುರ, ದಾಂಡೇಲಿ ಅರಣ್ಯ ಪ್ರದೇಶಗಳಲ್ಲೇ ಕಳೆಯುತ್ತೇನೆ’ ಎಂದರು.

‘ಮನುಷ್ಯ ಮತ್ತು ವನ್ಯಜೀವಿ ಸಂರ‍ಕ್ಷಣೆ ಕುರಿತು ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಜತೆಗೆ ಕಪ್ಪು ಚಿರತೆ ಹಾಗೂ ಹುಲಿಗಳ ಛಾಯಾಗ್ರಹಣ ಮಾಡಿದ್ದೇನೆ. ಅಲ್ಲದೆ, ವಿಜಯಪುರದ ವನ್ಯಜೀವಿ ಸಂಪತ್ತನ್ನು ಕುರಿತು ‘ವೈಲ್ಡ್ ವಿಜಯಪುರ’ ಎನ್ನುವ ಸಾಕ್ಷ್ಯಚಿತ್ರ ಮಾಡಿದ್ದೇನೆ. ಅದನ್ನು ಸಿದ್ಧೇಶ್ವರ ಸ್ವಾಮೀಜಿ ಕೂಡ ವೀಕ್ಷಿಸಿ, ಮೆಚ್ಚಿಕೊಂಡಿದ್ದರು’ ಎಂದು ಅವರು ವಿವರಿಸಿದರು.

ADVERTISEMENT

‘ಎಂಟು ವರ್ಷದ ಹುಡುಗನಾಗಿದ್ದ ದಿನಗಳಿಂದಲೂ ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿದ್ದೇನೆ. ಈಗ ವನ್ಯಜೀವಿ ಮಂಡಳಿಯ ಸದಸ್ಯನಾಗಿರುವುದು ಒಂದು ಅಧಿಕೃತ ಸ್ಥಾನಮಾನವಷ್ಟೆ. ಈ ಮೂಲಕ ವನ್ಯಜೀವಿ ಸಂರಕ್ಷಣೆಗೆ ರೂಪಿಸುವ ನೀತಿ ನಿರೂಪಣೆಗಳ ಮೇಲೆ ಸಕಾರಾತ್ಮಕ ಕೊಡುಗೆ ನೀಡಬಹುದು ಎನ್ನುವುದು ನನ್ನ ಭಾವನೆಯಾಗಿದೆ’ ಎಂದರು.

‘ಮಂಡಳಿಗೆ ಈಗ ಸಾಕಷ್ಟು ವಿಜ್ಞಾನಿಗಳು, ಪರಿಸರ ತಜ್ಞರನ್ನು ನೇಮಿಸಲಾಗಿದೆ. ಯುವಜನರ ಪ್ರತಿನಿಧಿಯಾಗಿ ನಾನು  ಅಲ್ಲಿ ಕೆಲಸ ಮಾಡಲಿದ್ದೇನೆ. ನನ್ನ ನೇಮಕಾತಿಯನ್ನು ತಂದೆಯ ರಾಜಕಾರಣದೊಂದಿಗೆ ತಳಕು ಹಾಕುವುದು ಬೇಡ’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.