ಬಸವನಬಾಗೇವಾಡಿ: ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ನಡೆಯುತ್ತಿರುವ ಇಲ್ಲಿನ ಬಸವೇಶ್ವರ ದೇವಾಲಯ ಅಂತರರಾಷ್ಟ್ರೀಯ ಶಾಲೆಯು (ಸಿಬಿಎಸ್‌ಇ) ಗುಣಮಟ್ಟದ ಶಿಕ್ಷಣದ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ.
ಕೂಡಲಸಂಗಮ ಅಭಿವೃದ್ಧಿ ಮಂಡಳಿ ವಿಶೇಷಾಧಿಕಾರಿಯಾಗಿದ್ದ ಡಾ.ಎಸ್.ಎಂ.ಜಾಮದಾರ ಅವರು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಕೊಡುವ ಉದ್ದೇಶದೊಂದಿಗೆ 2005ರಲ್ಲಿ ಈ ಶಾಲೆಯನ್ನು ಪ್ರಾರಂಭಿಸಿದರು.
43 ವಿದ್ಯಾರ್ಥಿಗಳ ಪ್ರವೇಶದೊಂದಿಗೆ ಆರಂಭವಾದ ಈ ಶಾಲೆಯಲ್ಲಿ ಇಂದು 724 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿನ ಬಸ್ ನಿಲ್ದಾಣ ಮುಂಭಾಗದಲ್ಲಿನ ವಿಶಾಲ ಮೈದಾನದಲ್ಲಿನ ಸುಸಜ್ಜಿತ ಕಟ್ಟಡದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಲಾಗಿದೆ.
ಎಲ್‌ಕೆಜಿಯಿಂದ 10ನೇ ತರಗತಿವರೆಗಿನ ಶಿಕ್ಷಣಕ್ಕೆ ಅವಕಾಶ ಇರುವ ಈ ಶಾಲೆಯು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದೆ. ಭವ್ಯವಾದ ಕಟ್ಟಡದ 20 ಕೊಠಡಿಗಳನ್ನು ಬೋಧನೆಗೆ ಬಳಸಿಕೊಂಡಿದ್ದು, ಇನ್ನುಳಿದ ಕೊಠಡಿಗಳನ್ನು ಕಂಪ್ಯೂಟರ್ ಶಿಕ್ಷಣ, ಸುಸಜ್ಜಿತ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯಕ್ಕಾಗಿ ಬಳಸಿಕೊಳ್ಳಲಾಗಿದೆ. ಪ್ರಾಚಾರ್ಯರ ಮಾರ್ಗದರ್ಶನದಲ್ಲಿ 28 ಶಿಕ್ಷಕರು, 5 ಜನ ಸಿಬ್ಬಂದಿ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ.
ಪ್ರವೇಶ ಪರೀಕ್ಷೆ ಮೂಲಕ ಈ ಶಾಲೆಯಲ್ಲಿ ಪ್ರವೇಶ ನೀಡಲಾಗುತ್ತದೆ. ಸ್ಮಾರ್ಟ್ ಕ್ಲಾಸ್ ಮೂಲಕ ಬೋಧನೆ, ಗ್ರಂಥಾಲಯ ಹಾಗೂ ಪ್ರಯೋಗಾಲಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರೊಂದಿಗೆ ಕಂಪ್ಯೂಟರ್ ಶಿಕ್ಷಣವನ್ನೂ ನೀಡಲಾಗುತ್ತಿದೆ.
ಪ್ರಬಂಧ ಸ್ಪರ್ಧೆ, ಪದಜೋಡಣೆ ಸ್ಪರ್ಧೆ, ರಚನಾತ್ಮಕ ಕಲೆ, ವಾರ್ಷಿಕ ಕ್ರೀಡಾಕೂಟ, ವಾರ್ಷಿಕೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಮಕ್ಕಳು ಉತ್ಸಾಹದಿಂದ ಕಲಿಕೆಯಲ್ಲಿ ತೊಡಗುವಂತೆ ಮಾಡಲಾಗುತ್ತಿದೆ. ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಎನಿಮೇಷನ್ ಚಿತ್ರಗಳನ್ನು ಪ್ರದರ್ಶಿಸುತ್ತಿರುವುದು ವಿಶೇಷವಾಗಿದೆ.
ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತರು ಹಾಗೂ ಅಧಿಕಾರಿಗಳು ಸೇರಿದಂತೆ ಸಲಹಾ ಸಮಿತಿ ಸದಸ್ಯರು ಶಾಲೆಯ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಿದ್ದಾರೆ. ಸತತ ಆರು ವರ್ಷಗಳಿಂದ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.