ದೇವರಹಿಪ್ಪರಗಿ: ಹಕ್ಕಿಗಳ ಚಿಲಿಪಿಲಿ, ಸುತ್ತಲೂ ಹುಲ್ಲು ಹಾಸಿಗೆ, ವಾಯು ವಿಹಾರಕ್ಕೆ ಬರುವ ಜನತೆ, ನೀರು ಅರಸಿ ಬಂದ ಜಾನುವಾರು, ಕಣ್ಣು ಹಾಯಿಸಿದಲ್ಲೆಲ್ಲ ಜಲರಾಶಿ. ಈ ದೃಶ್ಯ ಕಂಡು ಬರುವುದು ದೇವರಹಿಪ್ಪರಗಿ ತಾಲ್ಲೂಕಿನ ಸಾತಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರವಾಡಗಿ ಗ್ರಾಮದ ಅಮೃತ ಸರೋವರದಲ್ಲಿ.
ನರೇಗಾ ಯೋಜನೆಯ ಅಡಿಯಲ್ಲಿ ದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇರುವ ನಿರುಪಯುಕ್ತ ಕೆರೆಗಳನ್ನು ‘ಅಮೃತ ಸರೋವರ’ ಹೆಸರಿನಲ್ಲಿ ಪುನರುಜ್ಜೀವನಗೊಳಿಸಲಾಗುತ್ತದೆ. ಗ್ರಾಮೀಣ ಪ್ರದೇಶದ ಜನರಿಗೆ ನೀರಿನ ಮಹತ್ವ, ಸಂರಕ್ಷಣೆ ತಿಳಿಸಿಕೊಡುವ ಪ್ರಮುಖ ಉದ್ದೇಶ ಹೊಂದಿರುವ ಈ ಯೋಜನೆ 2022ರ ಏ. 24ರಂದು ಜಾರಿಗೆ ಬಂದಿದೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಸಾತಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೈರವಾಡಗಿ ಗ್ರಾಮದ ಸುಮಾರು 10 ಎಕರೆ ಸರ್ಕಾರಿ ಜಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಕೆರೆ ನಿರ್ಮಿಸಲಾಗಿತ್ತು. ಇದು ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಮುಳ್ಳು, ಜಾಲಿ ಕಂಟಿ, ತಗ್ಗು–ದಿನ್ನೆಗಳಿಂದ ಕೂಡಿ ಉಪಯೋಗಕ್ಕೆ ಬಾರದಂತಾಗಿತ್ತು. ಅಷ್ಟೇಕೆ ಇಲ್ಲಿ ಜನರು ನಡೆದಾಡಲು ಸಹ ಹೆದರುತ್ತಿದ್ದರು. ಗ್ರಾಮದ ಈ ನಿರ್ಜನ, ನಿರುಪಯುಕ್ತ ಪ್ರದೇಶ ಮಳೆಗಾಲದಲ್ಲಿ ನೀರು ಹೊಂದಿದ್ದು, ಬೇಸಿಗೆ ಸಮಯದಲ್ಲಿ ಒಣಗಿ ಜನ, ಜಾನುವಾರಿಗೆ ಉಪಯೋಗಕ್ಕೆ ಬಾರದಂತಾಗಿತ್ತು.
ಬೇಸಿಗೆ ಹಾಗೂ ಬರಗಾಲದಲ್ಲಿ ನೀರಿನ ಅಗತ್ಯ ಅರಿತ ಗ್ರಾಮದ ಜನರು ಈ ಕೆರೆ ಅಭಿವೃದ್ಧಿಪಡಿಸಲು ತಾಲ್ಲೂಕು ಪಂಚಾಯಿತಿಗೆ ಮನವಿ ಮಾಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಅಧಿಕಾರಿಗಳು ನರೇಗಾ ಯೋಜನೆಯ ಅಡಿಯಲ್ಲಿ 2022 ಜುಲೈನಲ್ಲಿ ಯೋಜನೆ ಸಿದ್ಧಪಡಿಸಿದರು. ಈಗ ಗ್ರಾಮದ 5000 ಜನಸಂಖ್ಯೆಗೆ ಅಮೃತ ಸರೋವರ ಅಕ್ಷರಃ ಜೀವಜಲವಾಗಿದೆ.
ಪ್ರಸ್ತುತ ಗ್ರಾಮದ ಕೆರೆಯ ಸುತ್ತ ತಂತಿ ಬೇಲಿ ನಿರ್ಮಿಸಿ ಅಂತರ್ಜಲ ಮಟ್ಟ ವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಜನತೆ, ಜಾನುವಾರಿಗೆ ಕುಡಿಯಲು ನೀರು ಒದಗಿದೆ. ಕೆರೆಯ ಸುತ್ತಲೂ ಬೇವು, ಆಲದಮರಗಳನ್ನು ನೆಡಲಾಗಿದೆ. ಗ್ರಾಮದ ಜನತೆ ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ತಂಡೋಪತಂಡವಾಗಿ ಬರುತ್ತಿದ್ದಾರೆ. ಪಕ್ಷಿ, ಪ್ರಾಣಿ, ಜಲಚರಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಕೆರೆಯಿಂದ ತೆರೆದ ಬಾವಿ, ಬೋರವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ.
ಗ್ರಾಮದ ಜನರು ತಮ್ಮ ಜಮೀನುಗಳ ಕೃಷಿ ಚಟುವಟಿಕೆಗೆ ಕೆರೆಯ ನೀರು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ರೈತರು ಹೆಚ್ಚಿನ ಇಳುವರಿ ಪಡೆದು ಆದಾಯ ಗಳಿಸಲು ಸಹಕಾರಿಯಾಗಿದೆ. ಗ್ರಾಮದ ಪರಿಸರ ಕಾಳಜಿ, ಕೃಷಿಗೆ ಆರ್ಥಿಕಬಲ, ವಾಯುವಿಹಾರಕ್ಕೆ ಉದ್ಯಾನ, ಹೀಗೆ ಹಲವು ಪ್ರಯೋಜನಗಳಿಗೆ ಸಾಕ್ಷಿಯಾಗಿ, ಮುಂದಿನ ಪೀಳಿಗೆಗೆ ನೀರನ್ನು ಸಂರಕ್ಷಿಸುವ ಉದ್ದೇಶಗಳೊಂದಿಗೆ ಯೋಜನೆ ಯಶಸ್ವಿಯಾಗಿದೆ.
ಧ್ವಜಾರೋಹಣ, ಯೋಗ ದಿನಾಚರಣೆ: ಕೆರೆಯನ್ನು ಅಂದಾಜು ₹ 30 ಲಕ್ಷ ಮೊತ್ತದ ಯೋಜನೆಯನ್ನು (₹ 10.80 ಲಕ್ಷ ಕೂಲಿ ಮೊತ್ತ, ₹ 12.70 ಲಕ್ಷ ಸಾಮಗ್ರಿ ಮೊತ್ತ) 3417 ಒಟ್ಟು ಮಾನವ ದಿನಗಳನ್ನು ಸೃಜಿಸಿ ನಿರ್ಮಿಸಲಾಗಿದೆ. ಅಮೃತ ಸರೋವರದ ದಡದಲ್ಲಿ 2024 ಜನವರಿ 26 ರಂದು ಗಣರಾಜ್ಯೋತ್ಸವ ಧ್ವಜಾರೋಹಣ ಮತ್ತು ಜೂನ್ 21 ವಿಶ್ವಯೋಗ ದಿನ ಆಚರಿಸಲಾಗಿದೆ.
ಸಾತಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರವಾಡಗಿ ಗ್ರಾಮದ ಜನರ ಬೇಡಿಕೆ ಅನುಗುಣವಾಗಿ ದುಡಿಯುವ ಕೈಗಳಿಗೆ ಕೆಲಸ ನೀಡುವ ಜೊತೆಗೆ ಈ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ ದೇವರಹಿಪ್ಪರಗಿ–ಶಾಂತಗೌಡ ನ್ಯಾಮಣ್ಣವರ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ ಖಾತರಿ) ತಾಲ್ಲೂಕು ಪಂಚಾಯಿತಿ
ಉಳಿದ ಗ್ರಾ.ಪಂಗಳಿಗೂ ವಿಸ್ತರಣೆ
ಜಿಲ್ಲೆಯಾದ್ಯಂತ ಕೆರೆ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಅಮೃತ ಸರೋವರ ಯೋಜನೆಯ ಅಡಿಯಲ್ಲಿ ನಿರ್ಮಾಣವಾದ ಕೆರೆಗಳು ಮಳೆಯಿಂದಾಗಿ ತುಂಬಿದ್ದು ಈ ಮೂಲಕ ರೈತರ ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ. ಉಳಿದ ಗ್ರಾಮ ಪಂಚಾಯಿತಿಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು. ರಿಷಿ ಆನಂದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಿಲ್ಲಾ ಪಂಚಾಯಿತಿ ವಿಜಯಪುರ ಒಟ್ಟು 7 ಕೆರೆ ಅಭಿವೃದ್ಧಿ ನರೇಗಾ ಯೋಜನೆಯ ಅಡಿಯಲ್ಲಿ ತಾಲ್ಲೂಕಿನ ಒಟ್ಟು 7 ಅಮೃತ ಸರೋವರ (ಕೆರೆ) ಅಭಿವೃದ್ಧಿ ಪಡಿಸಲಾಗಿದೆ ಗ್ರಾಮದ ಜನರಿಗೆ ಕುಡಿಯಲು ಹಾಗೂ ಕೃಷಿ ಚಟುವಟಿಕೆಗೆ ನೀರನ್ನು ಬಳಸಿಕೊಂಡು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಯೋಜನೆಯ ಬಹಳಷ್ಟು ಪ್ರಯೋಜನಕಾರಿಯಾಗಿದೆ ಭಾರತಿ ಚೆಲುವಯ್ಯ ಕಾರ್ಯನಿರ್ವಾಹಕ ಅಧಿಕಾರಿ(ಇಒ) ತಾ.ಪಂ. ದೇವರಹಿಪ್ಪರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.