ವಿಜಯಪುರ: ಪ್ರಧಾನಿ ಮೋದಿ ಅವರು ತಮ್ಮ 10 ವರ್ಷಗಳ ಆಡಳಿತದಲ್ಲಿ ಮಾಡಿರುವ ಕೆಲಸಗಳ ಆಧಾರದ ಮೇಲೆ ಚುನಾವಣೆ ಮಾಡುವುದು ಬಿಟ್ಟು ಜಾತಿ, ಧರ್ಮದ ಆಧಾರ ಮೇಲೆ ಮತಯಾಚನೆ ಮಾಡುತ್ತಿರುವುದನ್ನು ಗಮನಿಸಿದರೆ ಮೋದಿ ಅವರು ರಾಜಕಾರಣದಲ್ಲಿ ವಿಫಲವಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಅಥಣಿ ಕ್ಷೇತ್ರದ ಶಾಸಕ, ಕಾಂಗ್ರೆಸ್ ತಾರಾ ಪ್ರಚಾರಕ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಳ, ಅಗಲ ನೋಡಿ ಬಂದಿದ್ದೇನೆ. ಚುನಾವಣೆಯಲ್ಲಿ ಭಾವನಾತ್ಮಕ ವಿಷಯ ಕೆದಕಿ, ಜಾತಿ–ಧರ್ಮಗಳ ನಡುವೆ ವಿಷಬೀಜ ಬಿತ್ತಿ ಮತಗಳನ್ನು ಪಡೆಯುವ ತಂತ್ರ ನಡೆಸುವುದು ನನಗೆ ಗೊತ್ತಿದೆ. ಈ ಚುನಾವಣೆಯಲ್ಲಿ ಅವರ ಈ ಆಟ ನಡೆಯದು ಎಂದರು.
10 ವರ್ಷಗಳ ಆಡಳಿತಾವಧಿಯಲ್ಲಿ ಮೋದಿ ನೀಡಿದ್ದ ಭರವಸೆಗಳು ಈಡೇರಿಲ್ಲ. ‘ಗುಜರಾತ್ ಮಾದರಿ’ ಅಭಿವೃದ್ಧಿ ಆಧಾರಿತ ಆಡಳಿತ ದೇಶದಲ್ಲಿ ತರುತ್ತೇವೆ, ಅಟಲ್ ಬಿಹಾರಿ ವಾಜಪೇಯಿ ಕನಸು ನನಸು ಮಾಡುತ್ತೇವೆ, ನದಿ ಜೋಡಣೆ ಮಾಡುತ್ತೇವೆ ಎಂದು ಅಬ್ಬರದ ಪ್ರಚಾರ ನಡೆಸಿದ್ದರು. ದೇಶದ ಜನತೆ ನಂಬಿ ಮತಹಾಕಿದ್ದರು. ಆದರೆ, ಯಾವೊಂದು ಭರವಸೆಯೂ ಈಡೇರಿಲ್ಲ ಎಂದು ಆರೋಪಿಸಿದರು.
ಸ್ವಿಸ್ ಬ್ಯಾಂಕ್ ಹಣ ತಂದು ದೇಶದ ಸಾಲ ತೀರಿಸಿ, ಉಳಿದ ಹಣದಲ್ಲಿ ದೇಶದ ಎಲ್ಲ ರಸ್ತೆಗಳಿಗೆ ಚಿನ್ನದ ಲೇಪನ ಮಾಡುತ್ತೇವೆ, ನಿರುದ್ಯೋಗ ಸಮಸ್ಯೆ ನಿವಾರಣೆ ಸಂಬಂಧ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ, ಬೆಲೆ ಏರಿಕೆ ನಿಯಂತ್ರಿಸಲಾಗುವುದು, ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಹೆಚ್ಚಿಸುತ್ತೇವೆ, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂಬ ಒಂದು ಭರವಸೆಯೂ ಈಡೇರಿಸಿಲ್ಲ. ದೇಶದ ಬಡವರು, ಮತದಾರರು, ರೈತರು ಭ್ರಮನಿರಸನವಾಗಿದ್ದಾರೆ ಎಂದರು.
ಕಾಂಗ್ರೆಸ್ ಸಂಕಲ್ಪಕ್ಕೆ ಸ್ಪಂದನೆ:
ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬಡ ಜನರಿಗೆ ಹೆಚ್ಚು ಅನುಕೂಲವಾಗಿದೆ. ಪರಿಣಾಮ ಕಾಂಗ್ರೆಸ್ ಸರ್ಕಾರದ ಪರ ಜನರ ಒಲವು ಹೆಚ್ಚಾಗಿದೆ. 20 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ ಕಾಂಗ್ರೆಸ್ ಸಂಕಲ್ಪಕ್ಕೆ ನಾಡಿನ ಮತದಾರರು ಸ್ಪಂದಿಸಲಿದ್ದಾರೆ. ಪೂರಕ ವಾತಾವಣ ನಿರ್ಮಾಣವಾಗಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಗೆಲ್ಲುವುದು ಸೂರ್ಯಚಂದ್ರ ಉದಯಿಸುವಷ್ಟೇ ನಿಶ್ಚಿತ, ಕನಿಷ್ಠ 1 ಲಕ್ಷ ಮತಗಳ ಅಂತರದಿಂದ ಗೆಲುವು ನಿಶ್ಚಿತ ಎಂದರು.
ಮೂರು ಬಾರಿ ಸಂಸದರಾದ ರಮೇಶ ಜಿಗಜಿಣಗಿ ಅವರು ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ನಿರೀಕ್ಷಿತ ಅಭಿವೃದ್ಧಿ ಕೆಲಸ ಮಾಡಿಲ್ಲ, ಜನರ ಕಷ್ಟ ಆಲಿಸಿಲ್ಲ, ಹಳ್ಳಿ ಸಂಪರ್ಕ ಮಾಡಿಲ್ಲದಿರುವುದು ಕಾಂಗ್ರೆಸ್ ಗೆಲುವಿಗೆ ಪೂರಕವಾಗಲಿದೆ ಎಂದರು.
ವಿಜಯಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಶಾಸಕ ವಿಠಲ ಕಟಕಧೋಂಡ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಸುರೇಶ ಗೊಣಸಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.