ಆಲಮಟ್ಟಿ: ಕೃಷ್ಣೆಯ ಹಿನ್ನೀರಿನ ಹಳೆ ಚಿಮ್ಮಲಗಿ ಬಳಿಯ ಬಾವಾಸಾಬ ಗುಡ್ಡದ ಬಳಿ ನಿಷೇಧಿತ ಚಿಕ್ಕ ಚಿಕ್ಕ ಮೀನುಗಳು (ಜಿಂಗಿ ಮೀನು)ಗಳನ್ನು ಕೃಷ್ಣೆಯ ತೀರದಲ್ಲಿ ಅನಧಿಕೃತವಾಗಿ ವಾಸವಿರುವ ಆಂಧ್ರಪ್ರದೇಶ ಮೂಲದ ಮೀನುಗಾರರು ಹಿಡಿಯುತ್ತಿರುವ ದೂರುಗಳು ವ್ಯಾಪಕವಾಗಿದೆ.
ಕೃಷ್ಣೆಯ ಹಿನ್ನೀರಿನ ಒಳಭಾಗದಲ್ಲಿರುವ ಬಾವಾಸಾಬನ ಗುಡ್ಡದ ಪರಿಸರದಲ್ಲಿ ಕೃಷ್ಣೆಯ ತೀರದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಆಂಧ್ರ ಮೂಲದ ಈ ಮೀನುಗಾರರು ಮೀನು ಬಲೆ ಹಾಕಲು ಮೀನುಗಾರಿಕೆ ಇಲಾಖೆಯಿಂದ ಪಡೆದ ಲೈಸನ್ಸ್ ನವೀಕರಣಗೊಂಡಿಲ್ಲ ಎಂದಬ ಆರೋಪ ಕೇಳಿಬಂದಿದೆ.
ಜಲಾಶಯದ ಹಿನ್ನೀರು ಕಡಿಮೆಯಾದಂತೆ ಇಲ್ಲಿಗೆ ಆಗಮಿಸುವ ಅವರು, ಸುಮಾರು ಆರು ತಿಂಗಳ ಕಾಲ ಗುಡಿಸಲಿನಲ್ಲಿ ವಾಸವಿದ್ದು, ಮೀನುಗಾರಿಕೆ ನಡೆಸುತ್ತಾರೆ. ಹಿನ್ನೀರು ಹೆಚ್ಚಿದಂತೆ ಇವರು ತಮ್ಮ ತಮ್ಮ ಗ್ರಾಮಗಳಿಗೆ ವಾಪಸ್ಸು ತೆರಳುತ್ತಾರೆ.
ಜನ ಸಂಪರ್ಕದಿಂದ ದೂರ:
ಸಮೀಪದ ಗ್ರಾಮಗಳಿಂದ, ಜನಸಂಪರ್ಕದಿಂದ ದೂರ ಇರುವ ಇವರು ಗುಡಿಸಲು ಹಾಕಿಕೊಂಡು ನದಿ ತೀರದಲ್ಲಿಯೇ ವಾಸವಾಗಿದ್ದಾರೆ. ಅಲ್ಲಿ ಜನ ಸಂಚಾರ ಬಹುತೇಕ ವಿರಳ. ಒಂದೆಡೆಯಿಂದ ಮತ್ತೊಂದೆಡೆ ಸಾಗಲು ಇವರು ಕಡ್ಡಾಯವಾಗಿ ದೋಣಿಯನ್ನೇ ಬಳಸಬೇಕು. ಮೂಲತಃ ಆಂಧ್ರಪ್ರದೇಶದ ರೈತರಾದರೂ ಇವರೆಲ್ಲಾ ಮುದ್ದೇಬಿಹಾಳ ತಾಲ್ಲೂಕಿನ ಬಲದಿನ್ನಿ ಬಳಿಯ ರಹವಾಸಿ ಹೊಂದಿದ್ದಾರೆ.
ಜಿಂಗಿ ಮೀನು:
ಇವರು ದೊಡ್ಡ ದೊಡ್ಡ ಮೀನುಗಳನ್ನು ಹಿಡಿದು ಜೀವನ ಸಾಗಿಸಿದರೂ, ನಿಷೇಧಿತವಾಗಿರುವ ಕೇವಲ ಒಂದು ಸೆಂ.ಮೀ, ಅರ್ಧ ಸೆಂ.ಮೀ ಅಗಲ ತೂತು ಇರುವ ಬಲೆಯನ್ನು ಹಾಕಿ ಜಿಂಗಿ ಮೀನು ಹಿಡಿಯುತ್ತಾರೆ. ಅವರು ವಾಸವಿರುವ ಸ್ಥಳಗಳಲ್ಲಿ ಹೆಚ್ಚಿನ ಜನ ಸಂಚಾರ ಇಲ್ಲ. ಹೀಗಾಗಿ ನಿಷೇಧಿತ ಚಿಕ್ಕ ಚಿಕ್ಕ ಜಿಂಗಿ ಮೀನು ಹಿಡಿಯುವುದರ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ.
ಜಿಂಗಿ ಮೀನು ನಿಷೇಧ:
ಚಿಕ್ಕ ಚಿಕ್ಕ ಅಗಲ ತೂತಿನ ಬಲೆ ಹಾಕಿದಾಗ ಲಕ್ಷಾಂತರ ಜಿಂಗಿ ಮೀನುಗಳು ಬಲೆಗೆ ಬೀಳುತ್ತವೆ. ಇದರಿಂದ ಮತ್ಸ್ಯ ಕ್ಷಾಮ (ಮೀನಿನ ಕೊರತೆ) ಉಂಟಾಗುತ್ತದೆ. ಜಿಂಗಿ ಮೀನು ಹಿಡಿಯುವುದರಿಂದ ದೊಡ್ಡ ದೊಡ್ಡ ಮೀನುಗಳ ಕೊರತೆ ಹೆಚ್ಚಾಗುತ್ತದೆ. ಹೀಗಾಗಿ ಚಿಕ್ಕ ಮೀನುಗಳ ಮೀನುಗಾರಿಕೆ ಸರ್ಕಾರ ನಿಷೇಧಿಸಿದೆ. ಆದರೆ, ಈ ಜಿಂಗಿ ಮೀನು ಬಲು ರುಚಿ ಹಾಗೂ ಬೆಲೆಯೂ ಹೆಚ್ಚು. ದೊಡ್ಡ ಮೀನುಗಳು ಬೀಳದ ಕಾರಣ ಈ ಜಿಂಗಿ ಮೀನು ಹಿಡಿಯುವುದು ಇವರ ಕಾಯಕ.
ಅಧಿಕಾರಿಗಳ ಭೇಟಿ:
ಶುಕ್ರವಾರ ಸ್ಥಳೀಯ ಮೀನುಗಾರರ ದೂರಿನ ಮೇರೆಗೆ ವಿಜಯಪುರ ಮೀನುಗಾರಿಕೆ ಇಲಾಖೆಯ ಮೇಲ್ವಿಚಾರಕ ಪಾಂಡುರಂಗ ಕುಲಕರ್ಣಿ ಆಂಧ್ರಪ್ರದೇಶದ ಮೀನುಗಾರರು ವಾಸಿಸುವ ಬಾವಾಸಾಬ್ ಗುಡ್ಡದ ಬಳಿ ತೆರಳಿ ಅವರ ಲೈಸನ್ಸ್ ಪರಿಶೀಲಿಸಿದರು. ಇವರು ಸ್ಥಳಕ್ಕೆ ಭೇಟಿ ನೀಡಿದಾಗ ನಿಷೇಧಿತ ಜಿಂಗಿ ಮೀನು ಇರಲಿಲ್ಲ. ಆದರೆ ಜಿಂಗಿ ಮೀನು ಹಿಡಿಯುವ ಬಲೆಗಳಿದ್ದವು. ಮೀನು ಹಿಡಿಯುವ ಆಧುನಿಕ ತಂತ್ರಜ್ಞಾನದ ಯಂತ್ರಗಳು ಇದ್ದವು.
ಅನಧಿಕೃತ ವಾಸ:
ಈ ಮೀನುಗಾರರು ಕೃಷ್ಣಾ ನದಿ ದಂಡೆಯ ಮೇಲೆ ಅನಧಿಕೃತವಾಗಿ ವಾಸಿಸುತ್ತಿದ್ದಾರೆ. ಮೀನು ಹಿಡಿಯುವ ಲೈಸನ್ಸ್ ನವೀಕರಣಗೊಂಡಿಲ್ಲ. ಸೋಮವಾರದೊಳಗೆ (ಜೂನ್ 26)ರೊಳಗೆ ಸ್ಥಳ ತೆರವುಗೊಳಿಸಲು ಸೂಚಿಸಿದ್ದೇನೆ. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದೇನೆ. ಹಿರಿಯ ಅಧಿಕಾರಿಗಳ ಗಮನಕ್ಕೂ ತರುತ್ತೇನೆ ಎಂದು ಮೀನುಗಾರಿಕೆ ಇಲಾಖೆಯ ಮೇಲ್ವಿಚಾರಕ ಪಾಂಡುರಂಗ ಕುಲಕರ್ಣಿ ಹೇಳಿದರು.
ತೆರವುಗೊಳಿಸಿ:
ಕೃಷ್ಣೆಯ ಹಿನ್ನೀರಿನ ತೀರದಲ್ಲಿ ಅನಧಿಕೃತವಾಗಿ ವಾಸವಿರುವ ಇವರನ್ನು ತೆರವುಗೊಳಿಸಿ, ಜಿಂಗಿ ಮೀನು ಹಿಡಿಯುವುದರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅರಳದಿನ್ನಿಯ ಮೀನುಗಾರ ವಿಶ್ವನಾಥ ವಾಲೀಕಾರ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.