ADVERTISEMENT

ವಿಜಯಪುರ: ನರ್ಸರಿಯಲ್ಲಿ ಬಗೆಬಗೆಯ ಗಿಡಗಳನ್ನು ಬೆಳೆಸಿ ಯಶಸ್ವಿಯಾದ ನಿಶಾ ಮಾಳಿ

ಸಿದ್ದು ತ.ಹತ್ತಳ್ಳಿ
Published 5 ಜನವರಿ 2024, 5:47 IST
Last Updated 5 ಜನವರಿ 2024, 5:47 IST
ನಿಶಾ ಮಾಳಿ
ನಿಶಾ ಮಾಳಿ   

ವಿಜಯಪುರ: ನಗರದ ಹೊರವಲಯದ ಸೋಲಾಪುರ ಹೆದ್ದಾರಿ ಪಕ್ಕದಲ್ಲಿ ಐದು ಎಕರೆ ಬರಡು ಭೂಮಿಯನ್ನು ಬಾಡಿಗೆ ಪಡೆದು ನಿಂಬೆ ಸಸಿ, ಚೆಂಡು ಹೂವು, ಪಪಾಯಿ ಮತ್ತು ತೆಂಗಿನ ಸಸಿಗಳನ್ನು ಬೆಳೆಸಿ, ಮಾರಾಟ ಮಾಡುತ್ತಿದ್ದ ರೈತ ಮಹಿಳೆ ನಿಶಾ ನೀಲಪ್ಪ ಮಾಳಿ ಅವರು ಸದ್ಯ 60 ಎಕರೆಗೆ ನರ್ಸರಿಯನ್ನು ವಿಸ್ತರಿಸುವ ಮೂಲಕ ವಿಭಿನ್ನ ಸಾಧನೆ ಮಾಡಿದ್ದಾರೆ.

ಬರಡು ಭೂಮಿಯಾಗಿದ್ದ ಹೊಲದಲ್ಲಿ ನರ್ಸರಿಯನ್ನು ಆರಂಭಿಸಿ ಆ ಮೂಲಕ ಕಬ್ಬು, ಬಾಳೆ, ದಾಳಿಂಬೆ, ಬಾರಿ, ಗುಲಾಬಿ, ಬಾಲಸಿಂಧೂರ, ಚೆಂಡು ಹೂವು, ಪಪ್ಪಾಯ, ತೆಂಗು, ತೊಗರಿ, ಗೋಧಿ, ಮಾವು, ಚಿಕ್ಕು, ಹೆಬ್ಬೆವು, ಮೆಣಸಿನ ಗಿಡಗಳು ಬೆಳೆಯುವುದರ ಮೂಲಕ ರೈತ ಮಹಿಳೆ ನಿಶಾ ನೀಲಪ್ಪ ಮಾಳಿ ಯುವ ರೈತರಿಗೆ ಮಾದರಿಯಾಗಿದ್ದಾರೆ.

ರೈತಾಪಿ ಕುಟುಂಬದಲ್ಲಿ ಜನಿಸಿದ ನಿಶಾ ನೀಲಪ್ಪ ಮಾಳಿ ಅವರು ಪದವಿ ಶಿಕ್ಷಣ ಪಡೆದುಕೊಂಡಿದ್ದಾರೆ. ಮಳೆ, ಚಳಿ, ಬಿಸಿಲು ಲೆಕ್ಕಿಸದೇ ನಿತ್ಯ ನರ್ಸರಿಯಲ್ಲಿ ಬೆವರು ಸುರಿಸಿ ದುಡಿದು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವ ಮೂಲಕ ಮಹಿಳೆ ದೃಢ ಮನಸ್ಸು ಮಾಡಿದರೆ ಅಸಾಧ್ಯ ಎಂಬುದು ಯಾವುದೂ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ADVERTISEMENT

60 ಎಕರೆ ನರ್ಸರಿಯಲ್ಲಿ ಕಬ್ಬು ನಾಲ್ಕು ಎಕರೆ, ಬಾಳಿ ಎರಡು ಎಕರೆ, ದಾಳಿಂಬೆ ಆರು ಎಕರೆ, ಹೆಬ್ಬೆವು ಎರಡು ಎಕರೆ, ಬಾರಿ ಗಿಡ ನಾಲ್ಕು ಎಕರೆ, ಬಾಲಸಿಂದೂರ ಚೆಂಡು ಹೂವು ಎರಡು ಎಕರೆ, ಗುಲಾಬಿ ಹೂವು ಎರಡು ಎಕರೆ, ತೆಂಗಿನಗಿಡ 2 ಸಾವಿರ, ತೊಗರಿ ಆರು ಎಕರೆ, ಗೋಧಿ ಎಂಟು ಎಕರೆ, ಮಾವಿನಗಿಡ ಮೂರು ಎಕರೆ, ಚಿಕ್ಕು ನಾಲ್ಕು ಎಕರೆ, ಪಪಾಯಿ ಐದು ಎಕರೆ, ಮೆಣಸಿನ ಗಿಡ ಐದು ಎಕರೆ, ಎರಡು ಪಾಲಿಹೌಸ್‌, ನಾಲ್ಕು ಗ್ರಿನ್ ಹೌಸ್‌ ಇವೆ. ಇದರಲ್ಲಿ 60 ಜನ ಕೂಲಿ ಕಾರ್ಮಿಕರು ದಿನಾಲು ಕೆಲಸ ಮಾಡುತ್ತಿದ್ದಾರೆ.

ಪತಿಯ ಸಲಹೆ ಪಡೆದು ನಿಶಾ ಅವರು ಹೊಸ ಬಗೆಯ ಕೃಷಿಯುತ್ತ ಹೆಜ್ಜೆ ಹಾಕಿದ್ದು, ಮೊದಲ ಯತ್ನದಲ್ಲೇ ಸಾಧನೆ ಮಾಡಿದ್ದಾರೆ. ನರ್ಸರಿಯನ್ನು ವೀಕ್ಷಿಸಲು ಮತ್ತು ಬಗೆಬಗೆಯ ಗಿಡಗಳನ್ನು ಕೊಳ್ಳಲು ಜಿಲ್ಲೆಯ ವಿವಿಧ ಗ್ರಾಮಗಳ ರೈತರು ನಿತ್ಯ ಭೇಟಿ ನೀಡುತ್ತಿರುವುದು ವಿಶೇಷ.

ವಿಜಯಪುರ ನಗರದ ಹೊರವಲಯದ ಸೋಲಾಪುರ ಹೆದ್ದಾರಿ ಪಕ್ಕದಲ್ಲಿ ಇರುವ ನಿಶಾ ನೀಲಪ್ಪ ಮಾಳಿ ಅವರ ನರ್ಸರಿ
ಕೃಷಿಯಲ್ಲಿ ಹೆಚ್ಚು ಆಸಕ್ತಿ ಇರುವುದರಿಂದ  ಶ್ರೀ ಸಿದ್ದೇಶ್ವರ ನರ್ಸರಿ ಪ್ರಾರಂಭಿಸಿ ನಂಬಿಕೆಯಿಂದ ದುಡಿಯುತ್ತಿರುವ ನನಗೆ ಲಾಭ ಹಾಗೂ ಖುಷಿ ಎರಡನ್ನೂ ನರ್ಸರಿ ತಂದಿದೆ
  -ನಿಶಾ ನೀಲಪ್ಪ ಮಾಳಿ ಮಾಲೀಕರು ಶ್ರೀ ಸಿದ್ದೇಶ್ವರ ನರ್ಸರಿ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.