ವಿಜಯಪುರ: ‘ನಾಲ್ಕು ತಿಂಗಳಿಂದ ವೇತನವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದೇವೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ವೇತನ ನೀಡುವ ಮೂಲಕ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ’ ಎಂದು ಅಖಿಲ ಕರ್ನಾಟಕ ಆರೋಗ್ಯ ಕವಚ(108) ನೌಕರರ ಸಂಘದ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅಖಿಲ ಕರ್ನಾಟಕ ಆರೋಗ್ಯ ಕವಚ(108) ನೌಕರರ ಸಂಘದ ವಿಜಯಪುರ ಜಿಲ್ಲಾ ಘಟಕದ ಗೌರವ ಅಧ್ಯಕ್ಷ, ಮಾಜಿ ಶಾಸಕ ವಿಠ್ಠಲ ಕಟಕದೊಂಡ, 108 ಅಂಬುಲೆನ್ಸ್ ಸಿಬ್ಬಂದಿಗೆ ರಾಜ್ಯ ಸರ್ಕಾರ ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 108 ಅಂಬುಲೆನ್ಸ್‌ನಲ್ಲಿ ಚಾಲಕರು ಮತ್ತು ಸ್ಟಾಫ್ ನರ್ಸ್ ಸೇರಿದಂತೆ 3200 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಜಿವಿಕೆ ಕಂಪನಿಯು ಸಿಬ್ಬಂದಿಗೆ ಆಯಾ ತಿಂಗಳ ವೇತನವನ್ನು ಆಯಾ ತಿಂಗಳು ನೀಡದೇ. ನಾಲ್ಕು– ಐದು ತಿಂಗಳಿಗೆ ಒಮ್ಮೆ ನೀಡುತ್ತಿದೆ. ಇದರಿಂದ ಸಿಬ್ಬಂದಿ ಆರ್ಥಿಕವಾಗಿ ಸಮಸ್ಯೆಗೆ ಒಳಗಾಗಿದ್ದಾರೆ ಎಂದರು.
108 ಅಂಬುಲೆನ್ಸ್ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡುವ ಬದಲು ಸರ್ಕಾರವೇ ನಿರ್ವಹಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸಿಬ್ಬಂದಿಗೆ ವೇತನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ವೇತನ ತಾರತಮ್ಯ ಸರಿಪಡಿಸಿ ಎಲ್ಲರಿಗೂ ಸಮಾನ ವೇತನ ನೀಡಬೇಕು ಎಂದು ಸರ್ಕಾರ ಆದೇಶ ಮಾಡಿದ್ದರೂ ಸಹ ತಾರತಮ್ಯ ಇನ್ನೂ ನಿವಾರಣೆಯಾಗಿಲ್ಲ ಎಂದರು.
ಸಿಬ್ಬಂದಿಗೆ ಎರಡು ವರ್ಷದ ಇನ್‌ಕ್ರಿಮೆಂಟ್, 2020–21ನೇ ಸಾಲಿನ ಅರಿಯರ್ಸ್ ಕೊಟ್ಟಿಲ್ಲ. ಆದಷ್ಟು ಬೇಗನೆ ನಮ್ಮ ಎಲ್ಲ ಸಿಬ್ಬಂದಿಗೆ ಎರಡು ವರ್ಷದ ಇನ್‌ಕ್ರಿಮೆಂಟ್ ನೀಡಬೇಕು ಎಂದು ಆಗ್ರಹಿಸಿದರು.
ಸಣ್ಣಪುಟ್ಟ ಕಾರಣಗಳಿಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕುವುದು ನಿಲ್ಲಬೇಕು. ಸಿಬ್ಬಂದಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಅಂಬುಲೆನ್ಸ್ ವಾಹನವನ್ನು ಸರಿಯಾಗಿ ರಿಪೇರಿ ಮಾಡಿಸಬೇಕು ಹಾಗೂ ಟಯರ್‌ಗಳನ್ನು ಆಗಾಗ ಬದಲಾವಣೆ ಮಾಡಬೇಕು. ಅಂಬುಲೆನ್ಸ್‌ನಲ್ಲಿ ಇರಬೇಕಾದ ಔಷಧ, ಚುಚ್ಚುಮದ್ದುಗಳನ್ನು ಸರಿಯಾದ ಸಮಯಕ್ಕೆ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಮುಷ್ಕರ ನಡೆಸಿದ್ದ 634 ಸಿಬ್ಬಂದಿನ್ನು ತೆಗೆದುಹಾಕಿದ್ದು, ಅದರಲ್ಲಿ ಯಾವುದೇ ತಪ್ಪು ಮಾಡದ ಸಿಬ್ಬಂದಿಯನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳುವಂತೆ ಜಿವಿಕೆ ಕಂಪನಿಗೆ ಸರ್ಕಾರ ಸೂಚನೆ ನೀಡಿದ್ದರೂ ಇದುವರೆಗೂ ಸಿಬ್ಬಂದಿಯನ್ನು ಮರಳಿ ತೆಗೆದುಕೊಂಡಿಲ್ಲ ಎಂದು ಹೇಳಿದರು.
108 ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಯನ್ನು ಮುಖ್ಯಮಂತ್ರಿ, ಆರೋಗ್ಯ ಸಚಿವರು 15 ದಿನಗಳ ಒಳಗಾಗಿ ಬಗೆಹರಿಸದೇ ಇದ್ದರೆ ಅಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಿ ಸಾಮೂಹಿಕವಾಗಿ ಮುಷ್ಕರ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
108 ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶ್ರೀಶೈಲ ಹಳ್ಳೂರ, ರಾಜ್ಯ ಸಂಚಾಲಕ ದಯಾನಂದ ಸಾಸನೂರ, ಜಿಲ್ಲಾ ಘಟಕದ ಅಧ್ಯಕ್ಷ ರಾವುತಪ್ಪ ಸಾರವಾಡ, ಉಪಾಧ್ಯಕ್ಷ ಅಲ್ಲಾ ಪಟೇಲ್ ಗಣಿಯಾರ, ಖಚಾಂಚಿ ಮಲ್ಲಿಕಾರ್ಜುನ ಅರವತ್ತು, ಸಂಘಟನಾ ಕಾರ್ಯದರ್ಶಿ ಸುನೀಲ ಪೋಳ, ಸಲಹೆಗಾರ ವಿಶ್ವನಾಥ ಬನಹಟ್ಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
***
ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು, ಕುಟುಂಬದಿಂದ ದೂರವಿದ್ದು ಕಾರ್ಯನಿರ್ವಹಿಸಿರುವ 108 ಅಂಬುಲೆನ್ಸ್ ಸಿಬ್ಬಂದಿಗೆ ಸರ್ಕಾರ ವೇತನ, ಅಗತ್ಯ ಸೌಲಭ್ಯ ನೀಡಬೇಕು
–ವಿಠ್ಠಲ ಕಟಕದೊಂಡ
ಗೌರವ ಅಧ್ಯಕ್ಷ, ಆರೋಗ್ಯ ಕವಚ 108 ನೌಕರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.