ಮುದ್ದೇಬಿಹಾಳ: ರಾಜ್ಯೋತ್ಸವ ಆಚರಣೆಯನ್ನು ವಿನೂತನವಾಗಿ ಆಚರಿಸಲು ಮುಂದಾಗಿರುವ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕ ಜೊತೆಗೂಡಿ ಇಡೀ ಬಸ್‌ನಲ್ಲಿ ಕರ್ನಾಟಕದ 31 ಜಿಲ್ಲೆಗಳ ವಿಶೇಷತೆಗಳನ್ನು ಕಟ್ಟಿಕೊಡುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ.
ತಾಳಿಕೋಟಿ-ಹಿರೇಕೆರೂರು ಸಾರಿಗೆ ಸಂಸ್ಥೆಯ ಬಸ್ ಚಾಲಕ ಪರಶುರಾಮ ಭೋವಿ, ನಿರ್ವಾಹಕ ಶಶಿಕುಮಾರ ಭೋಸಲೆ ಅವರು ಎರಡು ದಿನದಲ್ಲಿ ₹50 ಸಾವಿರ ಖರ್ಚು ಮಾಡಿ ಇಡೀ ಬಸ್ ಅನ್ನು ಕನ್ನಡಮಯವನ್ನಾಗಿಸಿ ಗಮನ ಸೆಳೆದಿದ್ದಾರೆ. ಜೊತೆಗೆ ಬಸ್ ಮುಂಭಾಗದಲ್ಲಿ ಭುವನೇಶ್ವರಿ ಮೂರ್ತಿಯನ್ನೂ ಪ್ರತಿಷ್ಠಾಪಿಸಿದ್ದಾರೆ.
ತಾಳಿಕೋಟೆ- ಹುಬ್ಬಳ್ಳಿ-ಹಿರೇಕೆರೂರು ಮಾರ್ಗದಲ್ಲಿ ಈ ಬಸ್ ಸಂಚರಿಸುತ್ತಿದ್ದು ಮುದ್ದೇಬಿಹಾಳ, ಬಾಗಲಕೋಟೆ, ಶಿಗ್ಗಾವಿ, ಹಾನಗಲ್, ತಿಳವಳ್ಳಿ ಊರುಗಳಿಗೆ ಸಂಚರಿಸುತ್ತದೆ. ಭಾನುವಾರ ಈ ಬಸ್ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಕಂಡ ನಾಗರಿಕರು ಮುಗಿ ಬಿದ್ದು ಬಸ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಮುದ್ದೇಬಿಹಾಳದ ನಾಗರಿಕರು ಬಸ್ ಚಾಲಕ, ನಿರ್ವಾಹಕ ಅವರನ್ನು ಅಭಿನಂದಿಸಿದರು.
ಆಸನಗಳಿಗೆ ಕೆಂಪು–ಹಳದಿ ಬಣ್ಣದ ಕವರ್ ಹಾಕಿದ್ದು ಅದರ ಹಿಂದೆ ನದಿಗಳ ಹೆಸರು ಬರೆಯಲಾಗಿದೆ. ಓದಲು ಕನ್ನಡದ ಪುಸ್ತಕಗಳನ್ನು ಇಡಲಾಗಿದೆ. ಬಸ್ ಸಂಚರಿಸಿದರೆ ಕನ್ನಡದ ರಥದಲ್ಲಿ ಕೂತು ಸಂಚರಿಸಿದ ಅನುಭವ ಪ್ರಯಾಣಿಕರಿಗೆ ಆಗುತ್ತದೆ.
ಬಸ್‌ನಲ್ಲಿರುವ ವಿಶೇಷ: ಹಾವೇರಿ ಹಾಗೂ ವಿಜಯಪುರ ಜಿಲ್ಲೆಯ ಪ್ರಮುಖ ಪ್ರೇಕ್ಷಣಿಯ ಸ್ಥಳಗಳು, ಜಿಲ್ಲೆಯ ಪ್ರಮುಖ ನದಿಗಳು, ದೊರೆಯುವ ಖನಿಜಗಳು, ಜನಿಸಿದ ಪ್ರಮುಖ ವ್ಯಕ್ತಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಜ್ಞಾನಪೀಠ ಪ್ರಶಸ್ತಿ ಪಡೆದ ಪುಸ್ತಕಗಳು, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು, ಕನ್ನಡದ ನುಡಿಮುತ್ತುಗಳು, ಕನ್ನಡ ಸಾಹಿತ್ಯ ಸಮ್ಮೇಳನಗಳು, ಕನ್ನಡ ಪುಸ್ತಕ ಭಂಡಾರ, ಕನ್ನಡ ದಿನಪತ್ರಿಕೆಗಳು, ಪರಿಸರ ಸಂರಕ್ಷಣೆಯ ಜಾಗೃತಿ, ಜಲ ಸಂರಕ್ಷಣೆ ಜಾಗೃತಿ, ಕರ್ನಾಟಕದ ಏಳು ಅದ್ಭುತಗಳ ಬಗ್ಗೆ ಮಾಹಿತಿ ನೀಡುತ್ತದೆ.
ಬಸ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ನಿತ್ಯವೂ ಒಂದಿಷ್ಟು ಹಣ ಉಳಿತಾಯ ಮಾಡುತ್ತೇವೆ. ನವೆಂಬರ್ ತಿಂಗಳ ವೇತನವನ್ನು ಇದಕ್ಕಾಗಿಯೇ ವೆಚ್ಚ ಮಾಡುತ್ತೇವೆ. ಇದಕ್ಕೆ ಮೇಲಧಿಕಾರಿಗಳ ಸಹಕಾರವೂ ಇದೆ ಎನ್ನುತ್ತಾರೆ ತಾಳಿಕೋಟಿ-ಹಿರೇಕೆರೂರು ಬಸ್ ನಿರ್ವಾಹಕ ಶಶಿಕುಮಾರ ಭೋಸಲೆ.
ಸ್ವಂತ ಹಣದಿಂದ ಕನ್ನಡ ಭಾಷೆ ಸೊಗಡನ್ನು ನಾಡಿಗೆ ಪರಿಚಯಿಸುತ್ತಿರುವ ತಾಳಿಕೋಟೆ-ಹಿರೇಕೆರೂರು ಬಸ್ ಚಾಲಕ, ನಿರ್ವಾಹಕಗೆ ಸರ್ಕಾರ ಪ್ರಶಸ್ತಿ ನೀಡಬೇಕು.–ಶರಣು ದೇಗಿನಾಳ, ಕಾಂಗ್ರೆಸ್ ಮುಖಂಡರು, ಮುದ್ದೇಬಿಹಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.