ವಿಜಯಪುರ: ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಒಂದು ವಾರಗಳ ಕಾಲ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರೀಯ ಭಾವೈಕ್ಯ ಶಿಬಿರದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ 15ಕ್ಕೂ ಹೆಚ್ಚೂ ವಿಶ್ವವಿದ್ಯಾಲಯಗಳ ಸುಮಾರು 159 ಸ್ವಯಂ ಸೇವಕಿಯರು ಹಾಗೂ ಕಾರ್ಯಕ್ರಮಾಧಿಕಾರಿಗಳು ಭಾಗವಹಿಸಿದ್ದರು.
ಶಿಬಿರಾರ್ಥಿಗಳಿಗೆ ಪ್ರತಿದಿನ ಯೋಗಾಸನ, ವ್ಯಾಯಾಮ, ಜುಂಬಾ ನೃತ್ಯಗಳನ್ನು ಏರ್ಪಡಿಸುವ ಮೂಲಕ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಲು ಉತ್ತೇಜನ ನೀಡಲಾಯಿತು.
ಕೋಮು ಸೌಹಾರ್ದ,ವ್ಯಕ್ತಿತ್ವ ವಿಕಸನ,ಮಹಿಳೆ ಮತ್ತು ಮಾಧ್ಯಮ,ಮಹಿಳೆ ಮತ್ತು ಆರೋಗ್ಯ,ಯುವತಿಯರಿಗೆ ಪೌಷ್ಠಿಕ ಆಹಾರ,ಪರಿಸರ ಮತ್ತು ಜಲಸಂರಕ್ಷಣೆ, ಪ್ರಸ್ತುತದಲ್ಲಿ ರಾಷ್ಟ್ರೀಯ ಏಕತೆಯ ಮಹತ್ವ, ಭಾರತ ಸಂವಿಧಾನ ಮತ್ತು ಯುವಜತೆ,ಮಹಿಳಾ ಸಬಲೀಕರಣ ಮತ್ತು ಉದ್ಯಮಶೀಲತೆ ಎಂಬ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು.
ಶಿಬಿರಾರ್ಥಿಗಳಿಗೆ ಏಕವ್ಯಕ್ತಿ ಗಾಯನ ಸ್ಫರ್ಧೆ, ಸಮೂಹ ಗಾಯನ, ಚರ್ಚಾಸ್ಪರ್ಧೆ, ಮಿಮಿಕ್ರಿ, ಮೂಕಾಭಿನಯ, ನಾಟಕ, ಮೆಹಂದಿ, ಕೇಶ ವಿನ್ಯಾಸ,ಸೌಂದರ್ಯವರ್ಧಕ ಸ್ಪರ್ಧೆ, ಸಮೂಹ ನೃತ್ಯ, ಪ್ರಬಂಧ ಸ್ಪರ್ಧೆ, ಭಿತ್ತಿಪತ್ರ, ಕೋಲೆಜ್ ಸ್ಪರ್ಧೆ, ಸಾಂಸ್ಕೃತಿಕ ಉಡುಗೆ-ತೊಡಗೆ ಸ್ಪರ್ಧೆಯ ಮೂಲಕ ಅವರ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು.
ಪ್ರತಿನಿತ್ಯ ಸಂಜೆ ವಿವಿಧ ರಾಜ್ಯಗಳ ಶಿಬಿರಾರ್ಥಿಗಳು ಅವರವರ ಸಂಸ್ಕೃತಿ ಪ್ರತಿಬಿಂಬಿಸುವ ವೇಷಭೂಷಣ ಧರಿಸಿ ನೃತ್ಯ, ಜನಪದ, ಗಾಯನ, ನಾಟಕ, ಜನ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ತುಳಸಿಮಲಾ ಮತ್ತು ಮೌಲ್ಯಮಾಪನ ಕುಲಸಚಿವ ಕೆ.ರಮೇಶ್ ಅವರ ಸಮ್ಮುಖದಲ್ಲಿ ಶಿಬಿರಾರ್ಥಿಗಳು ಸುಮಾರು 60 ಗಿಡಗಳನ್ನು ವಸತಿನಿಲಯದ ಆವರಣದಲ್ಲಿ ನೆಟ್ಟು ನೀರುಣಿಸಿದರು.
ವಿಶ್ವವಿದ್ಯಾಲಯದ ಸಮೀಪವೇ ಇರುವ ತೊರವಿ ತಾಂಡಾಕ್ಕೆ ಶಿಬಿರಾರ್ಥಿಗಳು ಭೇಟಿ ನೀಡಿ ಹೆಣ್ಣು ಮಕ್ಕಳನ್ನು ಉಳಿಸಿ-ಹೆಣ್ಣುಮಕ್ಕಳನ್ನು ಓದಿಸಿ, ಜಲ ಮತ್ತು ಪರಿಸರ ಸಂರಕ್ಷಣೆ, ಬಾಲ್ಯವಿವಾಹ, ಸ್ವಚ್ಛಭಾರತದ ಬಗ್ಗೆ ಆರಿವು ಮೂಡಿಸಿದರು. ಭಿತ್ತಿಪತ್ರಗಳನ್ನು ಆಂಟಿಸಿದರು ಮತ್ತು ತೊರವಿ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ, ಅಧಿಕಾರಿಗಳು ಮತ್ತು ಸದಸ್ಯರ ಬಳಿ ಗ್ರಾಮೀಣಾಭಿವೃದ್ಧಿ ಬಗ್ಗೆ ಚರ್ಚಿಸಿದರು.
ವಿಜಯಪುರದ ಪ್ರೇಕ್ಷಣೀಯ ಸ್ಥಳಗಳಾದ ವಿಶ್ವಪ್ರಸಿದ್ಧ ಗೋಳಗುಮ್ಮಟ, ಬಾರಾಕಮಾನ್, ಸಂಗೀತ ಮಹಲ್, ಉಪಲಿ ಬುರ್ಜ್‍ಗೆ
ಶಿಬಿರಾರ್ಥಿಗಳು ಭೇಟಿ ನೀಡಿ ಸ್ತ್ರೀಶಿಕ್ಷಣ, ಪರಿಸರ ಸಂರಕ್ಷಣೆ, ಧೂಮಪಾನ, ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ವಿಶ್ವವಿದ್ಯಾಲಯದ ಆಡಳಿತ ಭವನದ ಮುಂಭಾಗದಲ್ಲಿಭಾರತದ ಬೃಹತ್ ನಕ್ಷೆಯನ್ನು ರಚಿಸುವ ಮೂಲಕ ಶಿಬಿರಾರ್ಥಿಗಳಿಗೆ ರಾಷ್ಟ್ರೀಯ ಭಾವೈಕ್ಯತಾ ಪ್ರತಿಜ್ಞೆ ಕೈಗೊಂಡು ನಕ್ಷೆಯ ಗಡಿಯುದ್ದಕ್ಕೂ ದೀಪಗಳನ್ನು ಜೋಡಿಸಿದ ದೃಶ್ಯ ದೇಶದ ಆಖಂಡತೆಗೆ ಸಾಕ್ಷಿಯಾಗಿತ್ತು.
ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ವೀರಯೋಧರನ್ನು ಸ್ಮರಿಸುವ ಸ್ವಾತಂತ್ರ್ಯ ಹೋರಾಟಗಾರರ ಭಿತ್ತಿಪತ್ರಗಳನ್ನು ಹಿಡಿದು ಮೆರವಣಿಗೆ ಮಾಡಿ ಗೌರವ ಸಲ್ಲಿಸಲಾಯಿತು ಎಂದು ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಪ್ರೊ.ನಾಮದೇವ ಎಂ.ಗೌಡಾ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.