ADVERTISEMENT

ಎಸ್ಎಲ್ಒ ಕಚೇರಿ ಜಪ್ತಿಗೆ ಆದೇಶ

ಜಮೀನಿಗೆ ಪರಿಹಾರ ನೀಡದ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 14:55 IST
Last Updated 28 ನವೆಂಬರ್ 2019, 14:55 IST
ಆಲಮಟ್ಟಿ ಯುಕೆಪಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಜಪ್ತಿಗೆ ಹೊರಗೆ ತಂದು ಇಟ್ಟಿದ್ದ ಕುರ್ಚಿಗಳನ್ನು ಮರಳಿ ಕಚೇರಿಯೊಳಗೆ ಒಯ್ಯಲಾಯಿತು
ಆಲಮಟ್ಟಿ ಯುಕೆಪಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಜಪ್ತಿಗೆ ಹೊರಗೆ ತಂದು ಇಟ್ಟಿದ್ದ ಕುರ್ಚಿಗಳನ್ನು ಮರಳಿ ಕಚೇರಿಯೊಳಗೆ ಒಯ್ಯಲಾಯಿತು   

ಆಲಮಟ್ಟಿ: ಭೂಸ್ವಾಧೀನಗೊಂಡ ಜಮೀನಿಗೆ ಪರಿಹಾರ ನೀಡದ್ದರಿಂದ ಬಸವನಬಾಗೇವಾಡಿ ಜೆಎಂಎಫ್‌ ನ್ಯಾಯಾಲಯವು ಇಲ್ಲಿಯ ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನ ಕಚೇರಿ ಜಪ್ತಿಗೆ ಆದೇಶಿಸಿದೆ.

ಆದರೆ, ಗುರುವಾರ ಜಪ್ತಿಗೆ ಬಂದಿದ್ದ ನ್ಯಾಯಾಲಯದ ಬೇಲಿಫ್‌ಗೆ ವಿಶೇಷ ಭೂಸ್ವಾಧೀನಾಧಿಕಾರಿ ಅಸಹಕಾರ ನೀಡಿದ್ದಾರೆ ಎಂದು ರೈತ ಪರ ವಕೀಲ ಎಸ್.ಎಂ.ಚಿಂಚೋಳಿ ತಿಳಿಸಿದರು.

ಬಸವನಬಾಗೇವಾಡಿ ತಾಲ್ಲೂಕಿನ ಕವಲಗಿ ಗ್ರಾಮದ ಯಲಗೂರದಪ್ಪ ಈರಗಾರ ಅವರಿಗೆ ಸೇರಿದ್ದ 2 ಎಕರೆ 3 ಗುಂಟೆ ಜಮೀನನ್ನು 1999ರಲ್ಲಿಯೇ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ರೈತ ಬಸವನಬಾಗೇವಾಡಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಇಲ್ಲಿಯವರೆಗಿನ ಬಡ್ಡಿ ಸಮೇತ ₹58 ಲಕ್ಷ ಪರಿಹಾರ ನೀಡಲು ಆದೇಶಿಸಿತ್ತು ಎಂದು ವಕೀಲ ಚಿಂಚೋಳಿ ತಿಳಿಸಿದರು.

ADVERTISEMENT

‘ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡುವಂತೆ ಹಲವಾರು ಬಾರಿ ಮನವಿ ಮಾಡಿದರೂ ವಿಶೇಷ ಭೂಸ್ವಾಧೀನಾಧಿಕಾರಿ ಪರಿಹಾರ ನೀಡಿರಲಿಲ್ಲ. ಅದಕ್ಕಾಗಿ ನ್ಯಾಯಾಲಯ ಕಚೇರಿಯ ವಿವಿಧ ಸಾಮಗ್ರಿಗಳ ಜಪ್ತಿಗೆ ಆದೇಶಿಸಿತ್ತು. ಹೀಗಾಗಿ ಗುರುವಾರ ಸಂಜೆ 4ರ ಸುಮಾರು ಜಪ್ತಿಗೆ ಬಂದಿದ್ದ ನ್ಯಾಯಾಲಯದ ಸಿಬ್ಬಂದಿಗೆ ಎಸ್‌ಎಲ್‌ಒ ಅವರು ಸಹಕರಿಸಲಿಲ್ಲ’ ಎಂದು ಆಪಾದಿಸಲಾಗಿದೆ.

ಮೊದಲು ಕಚೇರಿಯ ಎಲ್ಲಾ ಕುರ್ಚಿಗಳನ್ನು ಹೊರಕ್ಕೆ ತಂದು ಇಡಲಾಗಿತ್ತು. ನ್ಯಾಯಾಲಯದ ಬೇಲಿಫ್‌ ಹಾಗೂ ರೈತ ಪರ ವಕೀಲರಿಗೆ ಆಲಮಟ್ಟಿ ಎಸ್‌ಎಲ್‌ಒ ಕಚೇರಿ ಅಧಿಕಾರಿಗಳು ಮನವಿ ಮಾಡಿ, ಇದೇ 30 ರ ವರೆಗೆ ಆದೇಶ ಪಾಲನೆಗೆ ಅವಕಾಶವಿದೆ. ನ.30 ರೊಳಗೆ ನ್ಯಾಯಾಲಯಕ್ಕೆ ಬಂದು ಮನವಿ ಮಾಡುವುದಾಗಿ, ಅಲ್ಲಿಯವರೆಗೆ ಜಪ್ತಿಯನ್ನು ಹಿಂಪಡೆಯುವಂತೆ ಮನವಿ ಮಾಡಿದರು.

‘ಜಪ್ತಿಗಾಗಿ ಕಚೇರಿಯ ಸಾಮಗ್ರಿಗಳನ್ನು ಹೊರಗೆ ಇಡಲಾಗಿತ್ತು. ನಂತರ ಎಲ್ಲ ಸಾಮಗ್ರಿಗಳನ್ನು ಕಚೇರಿಯೊಳಗೆ ಇಡಲಾಯಿತು. ಜಪ್ತಿಗೆ ಭೂಸ್ವಾಧೀನಾಧಿಕಾರಿ ಸಹಕಾರ ನೀಡಿಲ್ಲ’ ಎಂದು ಚಿಂಚೋಳಿ ಆರೋಪಿಸಿದರು.ಈ ಕುರಿತು ಆಲಮಟ್ಟಿ ವಿಶೇಷ ಭೂಸ್ವಾಧೀನಾಧಿಕಾರಿ ರಘು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.