ವಿಜಯಪುರ:ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಪೂರ್ವದಲ್ಲಿ ನೀಡಿದ್ದ ಕಪ್ಪುಹಣ ವಾಪಸ್, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ, ಭ್ರಷ್ಟಾಚಾರ ನಿಯಂತ್ರಣದಂತಹ ಭರವಸೆಗಳನ್ನು ಈಡೇರಿಸಲಾಗದೆ ಇಂದು ಕಾಶ್ಮೀರ ಪಂಡಿತರು, ಹಿಜಾಬ್‌ನಂತಹ ಸಮಸ್ಯೆಗಳನ್ನು ಸೃಷ್ಟಿಸಿದ್ದಾರೆ ಎಂದುಎ.ಐ.ಟಿ.ಯು.ಸಿಯ ರಾಜ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆರೋಪಿಸಿದರು.
ಮಾರ್ಚ್ 28, 29ರಂದು ನಡೆಯುವ ರಾಷ್ಟ್ರವ್ಯಾಪಿ ಮುಷ್ಕರವನ್ನು ವಿಜಯಪುರ ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕರ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೊರೊನಾ ಪೀಡಿತರಿಗೆ ಉಪಚಾರವನ್ನು ಒದಗಿಸಿಲ್ಲ, ಸತ್ತವರಿಗೆ ಪರಿಹಾರವನ್ನು ನೀಡಿಲ್ಲ. ಮೋದಿ ಅವರು ತನ್ನೆರಡು ಸ್ನೇಹಿತರಿಗೆ ಇಡೀ ದೇಶವನ್ನೇ ಒತ್ತಿ ಇಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಮಿಕರು ಹೋರಾಟದಿಂದ ಪಡೆದ ಮುಷ್ಕರದ ಹಕ್ಕು, ವೇತನದ ಹಕ್ಕು, ಸಂಘಟನೆ ಕಟ್ಟುವ ಹಕ್ಕನ್ನು ಕಿತ್ತುಕೊಂಡು ಕಾರ್ಮಿಕರನ್ನು ಇನ್ನಷ್ಟು ಬೀದಿಪಾಲು ಮಾಡುವ ಹುನ್ನಾರವಡಗಿದೆ ಎಂದರು.
ಸ್ಕೀಮ್ ವರ್ಕರ್ಸ್‌ಗಳಾದ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಬಿಸಿ ಊಟದ ಕಾರ್ಯಕರ್ತೆಯರು ಯೋಗ್ಯ ಸಂಬಳವಿಲ್ಲದೆ ನರಳುವಂತಾಗಿದೆ. ರೈತ ಕಾರ್ಮಿಕರ ಐಕ್ಯತೆಯೊಂದಿಗೆ ಈ ಹೋರಾಟ ಯಶಸ್ವಿಮಾಡುವಂತೆ ಮನವಿ ಮಾಡಿದರು.
ಸಿ.ಐ.ಟಿ.ಯುನ ರಾಜ್ಯ ಮುಖಂಡರಾದ ಕೆ. ಸುನಂದಾ ಮಾತನಾಡಿ ಬೆಲೆ ಏರಿಕೆಯಿಂದ ಜನಜೀವನ ನರಕವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಕೋಮುವಾದ, ಹಿಜಾಬ್‌ನಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ರೈಲ್ವೆ, ಬ್ಯಾಂಕ್, ಬಿ.ಎಸ್.ಎನ್.ಎಲ್‌ಗಳಂತಹ ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ಮಾಡಿ ಕಾರ್ಮಿಕರನ್ನು ಬೀದಿಪಾಲು ಮಾಡಲಾಗುತ್ತಿದೆ. ಬಡವರು ಬಡವರಾಗಿಯೇ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿಯೇ ಬೆಳೆಯುವ ಈ ವ್ಯವಸ್ಥೆಯಲ್ಲಿ ನಾವೆಲ್ಲ ಹೋರಾಟಕ್ಕೆ ಮುಂದಾಗಬೇಕಿದೆ ಎಂದರು.
ಎ.ಐ.ಯು.ಟಿ.ಯುಸಿಯ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ ಯಾದಗಿರಿ ಮಾತನಾಡಿ. ಪ್ರತಿವರ್ಷ ಕೇಂದ್ರ ಬಜೆಟ್‌ಗಿಂತ ಮುಂಚೆ ನಮ್ಮ ಹಕ್ಕೊತ್ತಾಯಗಳನ್ನು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತೇವೆ. ಆದರೆ, ಇತ್ತೀಚೆಗೆ ಕಾರ್ಮಿಕರು ಹೋರಾಟ ಮಾಡಿ ಪಡೆದುಕೊಂಡ 40ಕ್ಕೂ ಹೆಚ್ಚಿನ ಎಲ್ಲ ಕಾರ್ಮಿಕ ಕಾಯ್ದೆಗಳನ್ನು ಸತ್ವಹೀನ ಮಾಡಿ ಜನ ವಿರೋಧಿ ನಾಲ್ಕು ಕಾರ್ಮಿಕ ಕೋಡ್‌ಗಳಾಗಿ ಪರಿವರ್ತಿಸುತ್ತಿದ್ದಾರೆ. ಇದನ್ನು ತೀವ್ರವಾಗಿ ವಿರೋಧಿಸಬೇಕಿದೆ ಎಂದರು.
ಬಿಜೆಪಿ, ಕಾಂಗ್ರೆಸ್ ಬಂಡವಾಳಶಾಹಿಗಳಿಗೆ ಹೆಚ್ಚಿನ ಲಾಭ ಖಾತ್ರಿ ಪಡಿಸಲು ಶ್ರಮಿಸುತ್ತಾ ಬಂದಿವೆ. ಈಎರಡೂ ಪಕ್ಷಗಳ ಸರ್ಕಾರಗಳ ಬದಲಾವಣೆಯಿಂದ ಜನರ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ಹೇಳಿದರು.
ಬ್ಯಾಂಕ್ ಯುನಿಯನ್ ಮುಖಂಡರಾದ ಜಿ.ಜಿ.ಗಾಂಧಿ, ಸೌತ್ ಇಂಡಿಯನ್ ಫೆಡರೇಷನ್‌ನ ರಾಜ್ಯ ಉಪಾಧ್ಯಕ್ಷ ಪ್ರಭುಗೌಡ ಪಾಟೀಲ, ರೈತ ಮುಖಂಡ ಸಂಗಮೇಶ ಸಗರ, ರೈತ ಮುಖಂಡ ಭೀಮಸಿ ಕಲಾದಗಿ ಮತ್ತು ಅಣ್ಣಾರಾಯ ಇಳಗೇರ,ಗಂಟೆಪ್ಪಗೋಳ, ಎಚ್.ಟಿ. ಮಲ್ಲಿಕಾರ್ಜುನ, ಪ್ರಕಾಶ ಹಿಟ್ನಳ್ಳಿ, ಲಕ್ಮಣ ಹಂದ್ರಾಳ ಉಪಸ್ಥಿತರಿದ್ದರು.
* ಕೇಂದ್ರ ಬಿಜೆಪಿ ಸರ್ಕಾರ ಸಂಸತ್ತಿನಲ್ಲಿ ತನಗಿರುವ ಭಾರೀ ಬಹುಮತದ ದುರ್ಲಾಭ ಪಡೆದುಕೊಂಡು ಸಾರ್ವಜನಿಕ, ಸರ್ಕಾರಿ ವಲಯದ ಉದ್ದಿಮೆಗಳ ಖಾಸಗೀಕರಣ ಮಾಡುತ್ತಿದೆ
–ಕೆ.ಸೋಮಶೇಖರ ಯಾದಗಿರಿ,ರಾಜ್ಯ ಕಾರ್ಯದರ್ಶಿ, ಎ.ಐ.ಯು.ಟಿ.ಯು.ಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.