ADVERTISEMENT

ಪ್ರಧಾನಿ ಮೋದಿ ಮನ್‌ ಕೀ ಬಾತ್‌ನಲ್ಲಿ ವಿಜಯಪುರದ ಸೈಬರ್‌ ಕ್ರೈಂ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 16:11 IST
Last Updated 27 ಅಕ್ಟೋಬರ್ 2024, 16:11 IST
ಮನ್ ಕೀ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ
ಮನ್ ಕೀ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ    (ಸಂಗ್ರಹ ಚಿತ್ರ)

ವಿಜಯಪುರ: ವಿಜಯಪುರದಲ್ಲಿ ವಾರದ ಹಿಂದೆ ನಡೆದ ‘ಡಿಜಿಟಲ್‌ ಅರೆಸ್ಟ್‌’ ಎಂಬ ಸೈಬರ್‌ ಅಪರಾಧ ಪ್ರಕರಣದ ಕುರಿತು ಭಾನುವಾರ ಆಕಾಶವಾಣಿಯಲ್ಲಿ ಪ್ರಸಾರವಾದ 115ನೇ ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸುವ ಮೂಲಕ ದೇಶವಾಸಿಗಳ ಗಮನ ಸೆಳೆದಿದ್ದಾರೆ. 

ಸೈಬರ್‌ ಲೋಕದ ವಂಚಕನೊಬ್ಬ ಮುಂಬೈ ಪೊಲೀಸರ ಹೆಸರಿನಲ್ಲಿ ಇತ್ತೀಚೆಗೆ ವಿಜಯಪುರದ ಸಂತೋಷ ಚೌಧರಿ ಎಂಬುವವರಿಗೆ ಕರೆ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡಲು ಯತ್ನಿಸಿದ್ದನು. ಆದರೆ, ಚೌಧರಿ ಅವರಿಗೆ ಈ ಬಗ್ಗೆ ಮೊದಲೇ ಅರಿವಿದ್ದ ಕಾರಣ ಮೋಸ ಹೋಗಿರಲಿಲ್ಲ. ‘ಡಿಜಿಟಲ್‌ ಅರೆಸ್ಟ್‌’ ಬಗ್ಗೆ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ವಿಜಯಪುರ ಪ್ರಕರಣವನ್ನು ಮನ್‌ ಕೀ ಬಾತ್‌ನಲ್ಲಿ ಉದಾಹರಣೆ ನೀಡಿದರು.

‘ದೇಶದಲ್ಲಿ ಡಿಜಿಟಲ್‌ ಅರೆಸ್ಟ್‌ ಎಂಬ ಕಾನೂನೇ ಇಲ್ಲ. ಸೈಬರ್‌ ಲೋಕದ ವಂಚಕರು ಮಾಡುವ ಅಪರಾಧ ಇದು. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಅನ್‌ಲೈನ್‌ ಮೂಲಕ ನಡೆಯುತ್ತಿರುವ ವಂಚನೆಗಳ ಬಗ್ಗೆ ಜನರು ಜಾಗೃತಿ ವಹಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸಿಬಿಐ, ಪೊಲೀಸ್‌, ಇಡಿ, ಆರ್‌ಬಿಐ ಅಧಿಕಾರಿಗಳ ಹೆಸರಿನಲ್ಲಿ ವಂಚಕರು ಫೋನ್‌, ವಿಡಿಯೋ ಕಾಲ್‌ ಮಾಡುತ್ತಾರೆ. ವೈಯಕ್ತಿಕ ಮಾಹಿತಿ ಸಂಗ್ರಹಿಸಿರುತ್ತಾರೆ. ನಿಮ್ಮ ಮೇಲೆ ದೂರು ದಾಖಲಿಸುತ್ತೇವೆ, ಬಂಧಿಸುತ್ತೇವೆ ಎಂದು ಬೆದರಿಕೆ ಹಾಕಿ, ವಂಚಿಸುತ್ತಾರೆ. ಈ ಬಗ್ಗೆ ಹುಷಾರಾಗಿರಬೇಕು’ ಎಂದು ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಭಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ‘ಪ್ರಧಾನಿ ಮೋದಿ ಅವರು ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಲು ವಿಜಯಪುರ ನಗರದ ಸಂತೋಷ ಚೌಧರಿ ಅವರ ಪ್ರಕರಣವನ್ನು ಪ್ರಸ್ತಾಪಿಸಿರುವುದು ಕೇಳಿ ಖುಷಿಯಾಗಿದೆ’ ಎಂದರು.

‘ಎಂಟು ದಿನಗಳ ಹಿಂದೆ ಸಂತೋಷ ಚೌಧರಿ ಎಂಬವವರಿಗೆ ಮುಂಬೈ ಪೊಲೀಸ್‌ ಹೆಸರಲ್ಲಿ ಆನ್‌ಲೈನ್‌ ಮೂಲಕ ವಿಚಾರಣೆ ಮಾಡುತ್ತೇವೆ ಎಂದು ವಂಚಕರು ಹೆದರಿಸಿದ್ದಾರೆ. ಈ ಬಗ್ಗೆ ಮೊದಲೇ ತಿಳಿವಳಿಕೆ ಇದ್ದ ಸಂತೋಷ್ ಅವರು ಮೋಸ ಹೋಗದೇ ತಕ್ಷಣ ಸ್ಕ್ರೀನ್‌ ರೆಕಾರ್ಡ್‌ ಮಾಡಿಕೊಂಡು, ವಿಡಿಯೋ ಕಾಲ್‌ ಡಿಸ್‌ ಕನೆಕ್ಟ್‌ ಆಗಿದ್ದಾರೆ. ಸಂತೋಷ ಅವರಂತೆ ಜನ ಸಾಮಾನ್ಯರು ಎಚ್ಚರ ಇರಬೇಕು ಎಂಬುದನ್ನು ಪ್ರಧಾನಿ ಅವರು ತಿಳಿಸಿದ್ದಾರೆ’ ಎಂದು ಹೇಳಿದರು.

‘ಸೈಬರ್‌ ಕ್ರೈಂ ಕುರಿತು ಈಗಾಗಲೇ ಜನರಿಗೆ ಮಾಧ್ಯಮಗಳ ಮೂಲಕ ಪೊಲೀಸರು ಜಾಗೃತಿ ಮೂಡಿಸುತ್ತಿದ್ದೇವೆ. ಇದೀಗ ಈ ಕಾರ್ಯಕ್ಕೆ ಪ್ರಧಾನಿ ಅವರು ಧ್ವನಿ ಎತ್ತಿರುವುದು ಸಂತೋಷ ತಂದಿದೆ. ಜನರಿಗೆ ಡಿಜಿಟಲ್‌ ಸಾಕ್ಷರತೆ ಅಗತ್ಯ. ಡಿಜಿಟಲ್‌ ಮಧ್ಯಮಗಳನ್ನು ಬಳಸುವಾಗ ಎಚ್ಚರ ವಹಿಸಬೇಕು. ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬಾರದು. ಅನೌನ್‌ ಲಿಂಕ್ಸ್‌ಗಳನ್ನು ಯಾವುದೇ ಕಾರಣಕ್ಕೂ ಪ್ರೆಸ್‌ ಮಾಡಬಾರದು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.